'ಮೊಟ್ಟೆ ರಾಜಕಾರಣ' ನಿಲ್ಲಿಸಲು ಕೆ.ಎಸ್.ಶಿವರಾಮು ಆಗ್ರಹ

ಮೈಸೂರು: ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವುದಕ್ಕೆ ವಿರೋಧಿಸುವ 'ಮೊಟ್ಟೆ ರಾಜಕಾರಣ'ವನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದರು.
ಮಕ್ಕಳಿಗೆ ಕೋಳಿಮೊಟ್ಟೆ ನೀಡುವುದನ್ನು ವಿರೋಧಿಸುವುದು ವಿಕೃತ ಮನಸ್ಥಿತಿ. ಈ ಮೂಲಕ ಮಕ್ಕಳ ಪೌಷ್ಟಿಕಾಂಶವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಮೊಟ್ಟೆ ನೀಡುವುದನ್ನು ವಿರೋಧಿಸಿ ಕೆಲವು ಮಠಾಧೀಶರು ಸಮಾವೇಶ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಈ ರೀತಿ ರಾಜಕಾರಣ ಮಾಡುತ್ತಿರುವ ಮಠಾಧೀಶರು ಮೊದಲು ತಮ್ಮ ಕಾವಿ ಕಳಚಿ ನಂತರ ರಾಜಕಾರಣ ಮಾಡಲಿ ಎಂದು ಸವಾಲೆಸೆದರು.
ಈ ಮಠಾಧೀಶರು ತಮ್ಮ ಮಠಗಳಲ್ಲಿ ದೇವಸ್ಥಾನಗಳಲ್ಲಿ ಮೊಟ್ಟೆ ಸೇವಿಸುವವರು ಕಾಣಿಕೆ ನೀಡಬಾರದು ಎಂದು ಫಲಕ ಹಾಕಬೇಕು. ಮೊಟ್ಟೆ ಸೇವಿಸುವವರ, ಮಾರಾಟ ಮಾಡುವವರ ಕಾಣಿಕೆಗಳು ಇವರಿಗೆ ಬೇಕು. ಆದರೆ ಮೊಟ್ಟೆ ನೀಡುವುದು ಬೇಡ ಎನ್ನುವುದು ಸರಿಯಲ್ಲ ಎಂದು ಖಂಡಿಸಿದರು.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಿದ ಮೊಟ್ಟೆ, ಬಾಳೆಹಣ್ಣು
ಮೊಟ್ಟೆಯ ಜತೆಗೆ ಹಾಲು ಮತ್ತು ಹಣ್ಣನ್ನೂ ಸರ್ಕಾರ ನೀಡಬೇಕು. ಇದರಿಂದ ಮಕ್ಕಳ ಶಾಲಾ ಹಾಜರಾತಿ ಪ್ರಮಾಣ ಹೆಚ್ಚುತ್ತದೆ. ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಆಗ್ರಹಿಸಿ ಡಿ. 10ರಂದು ಬೆಳಿಗ್ಗೆ 11.30 ಕ್ಕೆ ಪತ್ರ ಚಳವಳಿ ನಡೆಸಲಾಗುವುದು ಎಂದರು.
ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್ ಮಾತನಾಡಿ,'ಮಠಾಧಿಪತಿಗಳಿಗೆ ಬೇರೆ ಕೆಲಸ ಇಲ್ಲವೆ?' ಎಂದು ಪ್ರಶ್ನಿಸಿದರು. ಒಂದು ವೇಳೆ ಮಠಾಧೀಶರ ಬೇಡಿಕೆಗೆ ಮಣಿದು ಮೊಟ್ಟೆ ನೀಡುವುದನ್ನು ನಿಲ್ಲಿಸಿದರೆ ಪ್ರತಿಭಟನೆ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು.
ಕುಂಬಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಪ್ರಕಾಶ, ಮಾತನಾಡಿ, ಮೊಟ್ಟೆ ವಿತರಣೆ ವಿರುದ್ಧ ಸಮಾವೇಶ ಮಾಡಲು ಹೊರಟಿರುವುದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಇದರ ಹಿಂದೆ ಸಚಿವರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಮುಖಂಡರಾದ ರೋಹಿತ್, ಲೋಕೇಶ್ ಮಾದಾಪುರ, ಹರೀಶ್ ಮೊಗಣ್ಣಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.