ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣಕ್ಕೆ ಜಮೀನು ನೀಡುವ ಬಗ್ಗೆ ಕೆಎಸ್‌ಸಿಎ, ಮುಡಾ ಚರ್ಚೆ

ರಾಜ್ಯ ಕ್ರಿಕೆಟ್‌ ಸಂಸ್ಥೆಗೆ 19.5 ಎಕರೆ ಜಾಗ
Last Updated 2 ಸೆಪ್ಟೆಂಬರ್ 2021, 3:34 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಸದ್ಯದಲ್ಲೇ ಜಮೀನು ಲಭಿಸಲಿದೆ.

ಹಂಚ್ಯಾ–ಸಾತಗಳ್ಳಿ ‘ಬಿ’ ವಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಬಳಿ 19.5 ಎಕರೆ ಜಮೀನು ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈಗಾಗಲೇ ನಿರ್ಣಯ ಕೈಗೊಂಡಿದೆ. ಆದರೆ, ಕ್ರಿಕೆಟ್‌ ಸಂಸ್ಥೆಗೆ ಭೋಗ್ಯಕ್ಕೆ ನೀಡಬೇಕೇ ಅಥವಾ ಮಾರಾಟ ಮಾಡಬೇಕೇ ಎಂಬ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಅಂಗಳ ತಲುಪಿದೆ.

ಬುಧವಾರ ಮುಡಾ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್‌ ಮತ್ತು ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಚರ್ಚೆ ನಡೆಸಿದರು.

‘ಜಮೀನು ನೀಡಲು ಹಿಂದೆ ನಿರ್ಣಯ ಆಗಿತ್ತು. ಈಗ ಹಸ್ತಾಂತರ ಪ್ರಕ್ರಿಯೆ ಸಂಬಂಧ ಚರ್ಚೆ ನಡೆಸಿದ್ದೇವೆ. ಜಾಗ ನೀಡಲು ಪ್ರಾಧಿಕಾರ ಒಲವು ಹೊಂದಿದೆ. ಈ ವಿಚಾರವಾಗಿ ಸರ್ಕಾರದಿಂದಲೇ ಆದೇಶ ಆಗಬೇಕು. ಅದಕ್ಕಾಗಿ ಪ್ರಸ್ತಾವ ಸಲ್ಲಿಸುತ್ತೇವೆ. ಬೆಂಗಳೂರಿನಲ್ಲಿ ಸೆ.9ರಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೆಎಸ್‌ಸಿಎ ಪದಾಧಿಕಾರಿಗಳು ಭೇಟಿಯಾಗಿ ಚರ್ಚಿಸಲಿದ್ದಾರೆ’ ಎಂದು ಎಚ್‌.ವಿ.ರಾಜೀವ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ ಮಾತನಾಡಿ, ‘ಕ್ರಿಕೆಟ್‌ ಸಂಸ್ಥೆಯು ಸ್ವಂತ ಕ್ರೀಡಾಂಗಣ ಹೊಂದಬೇಕೆಂಬುದು ಉದ್ದೇಶ. ಅದಕ್ಕಾಗಿ ₹ 50 ಕೋಟಿ ಬಜೆಟ್‌ ಇಟ್ಟುಕೊಂಡಿದ್ದೇವೆ. ಜಮೀನು ಖರೀದಿಗೂ ಸಿದ್ಧ, ಭೋಗ್ಯಕ್ಕೆ ಪಡೆಯಲೂ ಸಿದ್ಧ’ ಎಂದರು.

‘ಕ್ರೀಡಾಂಗಣದ ಜೊತೆಗೆ ಸುಸಜ್ಜಿತ ಪೆವಿಲಿಯನ್‌ ನಿರ್ಮಿಸಲಾಗುವುದು. ರಣಜಿ, ಐಪಿಎಲ್‌ ಹಾಗೂ ಇತರ ಪಂದ್ಯಗಳನ್ನು ಆಯೋಜಿಸಲು ಇದರಿಂದ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಚಟುವಟಿಕೆ ಆರಂಭವಾಗಿವೆ. ಬೆಂಗಳೂರಿನಲ್ಲೂ ಲೀಗ್‌ ಟೂರ್ನಿ ನಡೆಸುತ್ತಿದ್ದೇವೆ. ಕೋವಿಡ್‌ ಮಾರ್ಗಸೂಚಿ ಅನುಸರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲೂ ರಣಜಿ ಸೇರಿದಂತೆ ವಿವಿಧ ಪಂದ್ಯಗಳನ್ನು ಆಯೋಜಿಸಲಾಗುವುದು’ ಎಂದರು.

ಮುಡಾ ಆಯುಕ್ತ ಡಿ.ಬಿ.ನಟರಾಜ್‌, ಮೈಸೂರು ವಲಯ ನಿಮಂತ್ರಕ ಸುಧಾಕರ್‌ ರೈ ಹಾಗೂ ಪದಾಧಿಕಾರಿಗಳು ಇದ್ದರು.

ಗುತ್ತಿಗೆ ವಿಸ್ತರಣೆ: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದ ಗುತ್ತಿಗೆಯನ್ನು ಮತ್ತೆ ವಿಸ್ತರಿಸಲಾಗಿದೆ. ಈ
ಸಂಬಂಧ ಕೆಎಸ್‌ಸಿಎ ಹಾಗೂ ಮೈಸೂರು ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT