ಶುಕ್ರವಾರ, ಜೂನ್ 25, 2021
21 °C
ರೈತರಿಗೆ ಸಮಗ್ರ ಮಾಹಿತಿ ನೀಡಲು ಕೃಷಿ ಅಧಿಕಾರಿಗಳ ನಿರಾಸಕ್ತಿ; ಸ್ಪಂದಿಸದ ತಜ್ಞರು: ರೈತರ ಬೇಸರ

ಮೊಳಕೆ ಹಂತದಲ್ಲೇ ಬಾಡುತ್ತಿದೆ ಬೆಳೆ: ಆತಂಕ

ಬಿಳಿಗಿರಿ ಆರ್. Updated:

ಅಕ್ಷರ ಗಾತ್ರ : | |

Prajavani

ಜಯಪುರ: ಒಂದು ತಿಂಗಳ ಹಿಂದೆ ಸತತವಾಗಿ ಸುರಿದ ಅಶ್ವಿನಿ ಮಳೆಗೆ ರೈತರು ತಮ್ಮ ಹೊಲಗಳನ್ನು ಹಸನು ಮಾಡಿಕೊಂಡು ತರಾತುರಿಯಲ್ಲಿ ಬೀಜ ಹಾಕಿದ್ದರು. ಅವುಗಳು ಮೊಳಕೆಯೊಡೆದು ಮೇಲೇಳುತ್ತಿದ್ದಂತೆ ಮಳೆಯೂ ಮಾಯವಾಗಿದೆ. ಇದೀಗ ಪ್ರತಿ ದಿನ ರೈತರು ಮಳೆಯ ನಿರೀಕ್ಷೆಯಲ್ಲಿ ಆಗಸದತ್ತ ಮುಖ ಮಾಡುತ್ತಿದ್ದಾರೆ.

ಜೂನ್‌ನಲ್ಲಿ ಪ್ರಾರಂಭವಾಗುವ ಮುಂಗಾರು ಮಳೆಗಿಂತ ಮುಂಚಿತವಾಗಿ ಉತ್ತಮ ಮಳೆಯಾದರೆ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುತ್ತಿದ್ದರು. ಭರಣಿ ಮಳೆ ಈ ವೇಳೆಗೆ ಬಿದ್ದಿದ್ದರೆ ಬಹುತೇಕ ಎಲ್ಲ ರೈತರೂ ತಮ್ಮ ಜಮೀನಿನಲ್ಲಿ ಬೆಳೆ ಹಾಕಿ ಬಿಡುತ್ತಿದ್ದರು. ಆದರೆ, ಮೋಡ ಕವಿದ ವಾತಾವರಣ ಇರುವಾಗಲೇ ಭರಣಿ ಮಳೆ ಮರೆಯಾಗುತ್ತಿದೆ. ಮುಂಚಿತವಾಗಿ ರೈತರು ಹಾಕಿರುವ ಬೀಜ ಮೊಳಕೆಯೊಡೆಯುವ ಹಂತದಲ್ಲೇ ನಶಿಸಿಹೋಗುತ್ತಿದೆ.

‘ಕೊರೊನಾ ಸಂದರ್ಭದಲ್ಲೂ ಸಾಲ ಮಾಡಿ ಬಿತ್ತನೆ ಬೀಜ ಖರೀದಿಸಿ ಮಳೆಯನ್ನು ನೆಚ್ಚಿಕೊಂಡು ಬಿತ್ತನೆ ಮಾಡಿದ್ದೆ. ಆದರೆ ಮಳೆರಾಯ ಕೈಕೊಟ್ಟುಬಿಟ್ಟ’ ಎಂದು ಜಯಪುರ ಗ್ರಾಮದ ರೈತ ಹುಚ್ಚನಾಯಕ ನೋವು ತೋಡಿಕೊಂಡರು.

ಜಯಪುರ ಹೋಬಳಿಯ ವಿವಿಧೆಡೆ ರೈತರು ತಮ್ಮ ಮಳೆಯಾಶ್ರಿತ ಭೂಮಿಯಲ್ಲಿ ಉದ್ದು, ಅಲಸಂದೆ, ಹತ್ತಿ, ಅವರೆ, ತೊಗರಿ ಮೊದಲಾದ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನ ಮಾಡಿ ಒಂದು ತಿಂಗಳು ಕಳೆದರೂ ಮಳೆ ಬಾರದೆ ಇರುವುದರಿಂದ ಬಿಸಿಲಿನ ತಾಪಮಾನಕ್ಕೆ ಅವು ಉಳಿಯುವುದು ಕಷ್ಟ. ರೈತರು ತಮ್ಮ ಹತ್ತಿರದ ಕೃಷಿ ಅಧಿಕಾರಿಗಳ ಸಲಹೆ ಸೂಚನೆಯಂತೆ, ಹವಾಮಾನ ಇಲಾಖೆ ನೀಡುವ ಸೂಚನೆ ಆಧರಿಸಿ ಬಿತ್ತನೆ ಮಾಡಬೇಕು ಎಂದು ಮೈಸೂರು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಬೇಸಾಯಶಾಸ್ತ್ರಜ್ಞ ಡಾ.ಸಿ.ಗೋವಿಂದರಾಜು ತಿಳಿಸಿದರು.

ಜನತಾ ಕರ್ಫ್ಯೂ ವಿಧಿಸಿರುವು ದರಿಂದ ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದು, ಹಲವು ರೈತರು ತರಕಾರಿ ಬೆಳೆಯುವುದನ್ನು ಬಿಟ್ಟು ದ್ವಿದಳ ಧಾನ್ಯಗಳನ್ನು ಬೆಳೆಯಲು ಮುಂದಾಗಿದ್ದಾರೆ. ಹೋಬಳಿಯಾದ್ಯಂತ ಹಲವು ರೈತರು ಸಾವಯವ ಕೃಷಿಗೆ ಜೋತು ಬೀಳುತ್ತಿದ್ದಾರೆ. ಇದರಿಂದ ಕೊಟ್ಟಿಗೆ ಗೊಬ್ಬರಕ್ಕೆ ಬೇಡಿಕೆ ಉಂಟಾಗಿದ್ದು, ಒಂದು ಟ್ರಾಕ್ಟರ್ ಲೋಡ್ ಗೊಬ್ಬರಕ್ಕೆ ₹ 4 ರಿಂದ ₹ 5 ಸಾವಿರದ ವರೆಗೂ ಬೆಲೆ ಇದೆ. ಈಗ ಹಣ ನೀಡಿದರೂ ಕೊಟ್ಟಿಗೆ ಗೊಬ್ಬರ ಸಿಗುತ್ತಿಲ್ಲ ಎಂದು ಹೊಸಕೆರೆ ಗ್ರಾಮದ ರೈತ ಸಣ್ಣಪ್ಪ ತಿಳಿಸಿದರು.

ಕೃಷಿ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಕೇವಲ ಕಚೇರಿಗೆ ಮಾತ್ರ ಸೀಮಿತರಾಗಿದ್ದಾರೆ. ರೈತರ ಜಮೀನಿಗೆ ತೆರಳಿ ಸಲಹೆ ನೀಡುತ್ತಿಲ್ಲ. ಇದರಿಂದ ರೈತರಿಗೆ ಬಿತ್ತನೆಯ ವೈಜ್ಞಾನಿಕ ಮಾಹಿತಿ ಸಿಗುತ್ತಿಲ್ಲ. ರೈತರು ಸಂಕಷ್ಟಕ್ಕೆ ಈಡಾಗಲು ಕೃಷಿ ಅಧಿಕಾರಿಗಳೇ ಕಾರಣರಾಗುತ್ತಿದ್ದಾರೆ ಎಂಬುದು ಜಯಪುರ ಹೋಬಳಿಯ ರೈತ ಉತ್ಪನ್ನ ಕೂಟ ಮತ್ತು ಪ್ರಾಂತ ರೈತ ಸಂಘದ ಸದಸ್ಯರ ದೂರು.

ಹಲವು ರೈತರು ಈ ಹಿಂದೆ ತರಕಾರಿ ಬೆಳೆಗಳನ್ನು ಬೆಳೆದು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಮತ್ತೆ ಕರ್ಫ್ಯೂ ವಿಧಿಸಿರುವುದರಿಂದ ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದ ನಮಗೂ ಮೊದಲಿನಷ್ಟು ವ್ಯಾಪಾರ ನಡೆಯುತ್ತಿಲ್ಲ .ಮಳೆಯಾದರೆ ಕೆಲವು ರೈತರು ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಖರೀದಿಸಲು ಬರುತ್ತಾರೆ. ಮಳೆಯೇ ಎಲ್ಲದಕ್ಕೂ ಜೀವಾಳ ಎಂದು ಜಯಪುರದ ಮಲ್ಲೇಶ್ವರ ಆಗ್ರೋ ಮಾಲೀಕ ಅಭಿಷೇಕ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು