ಶುಕ್ರವಾರ, ಜುಲೈ 30, 2021
23 °C
ನಿರ್ಲಕ್ಷ್ಯ: ಕೆರೆಗಳ ಅಭಿವೃದ್ಧಿಗೆ ಜಯಪುರ ಗ್ರಾಮಸ್ಥರ ಆಗ್ರಹ

ಜಯಪುರ: ಮೂಲ ಸ್ವರೂಪ ಕಳೆದುಕೊಳ್ಳುವತ್ತ ಕೆರೆಗಳು

ಬಿಳಿಗಿರಿ ಆರ್. Updated:

ಅಕ್ಷರ ಗಾತ್ರ : | |

Prajavani

ಜಯಪುರ: ಊರಿಗೊಂದು ಕೆರೆ ಇದ್ದರೆ ಮೇವು, ಕುಡಿಯುವ ನೀರು, ಕೃಷಿ ಮಾಡಲು ಪೂರಕ ಎಂಬುದು ಗ್ರಾಮೀಣರ ಅಭಿಪ್ರಾಯ. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆಗಳು ಒತ್ತುವರಿಗೊಂಡು ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ.

ಕೆರೆಯನ್ನು ರಕ್ಷಿಸಿ ಅನೂಕೂಲ ಕಲ್ಪಿಸಬೇಕಾದ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗದ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಜಯಪುರ ಗ್ರಾಮದಲ್ಲಿ ರೈತರ ಜೀವನಾಡಿ ಎಂದೇ ಬಿಂಬಿತವಾಗಿರುವ ‘ಕೆಗ್ಗೆರೆ ಮತ್ತು ಹೊಸಕೆರೆ’ ಎಂಬ ಎರಡು ಕೆರೆಗಳಿವೆ. ಇವುಗಳು ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೂಳು ತೆಗೆಸುವುದಕ್ಕೆ ಮಾತ್ರ ಸೀಮಿತವಾಗಿವೆ. ಕೆಗ್ಗೆರೆಯು ಸುಮಾರು 20 ಎಕರೆಯಲ್ಲಿದ್ದು, ಹತ್ತಾರು ವರ್ಷಗಳಿಂದಲೂ ಕೆರೆಯ ಅಭಿವೃದ್ಧಿ ಆಗಿಲ್ಲ. ಈ ಕಾರಣದಿಂದ ಮಳೆಗಾಲದಲ್ಲಿ ಕೆರೆಯಲ್ಲಿ ತುಂಬುವ ನೀರು ಕೆರೆಯ ಕೋಡಿ ಒಡೆದು ವ್ಯರ್ಥವಾಗಿ ಹೋಗುತ್ತಿದೆ. ನೀರು ಸರಿಯಾಗಿ ನಿಲ್ಲದೆ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಇದೆ.

ಸೆಸ್ಕ್‌ನವರು ಕೆಗ್ಗೆರೆಯ ಮಧ್ಯದಲ್ಲಿ 11 ಕೆ.ವಿ. ವಿದ್ಯುತ್ ಮಾರ್ಗ ಸಾಗಿದ್ದು, ನೀರು ತುಂಬಿದಾಗ ಗ್ರೌಂಡಿಂಗ್ ಆಗುವ ಅಪಾಯ ಇದೆ. ಈ ಕಾರಣದಿಂದ ಜಾನುವಾರು ಮೇಯಿಸಲು ಜನ ಪರದಾಡುತ್ತಿದ್ದಾರೆ. ಹಲವು ಬಾರಿ ನಿವಾಸಿಗಳು, ಸಾಕು ಪ್ರಾಣಿಗಳು ವಿದ್ಯುತ್‌ ಆಘಾತದಿಂದ ತೊಂದರೆ ಅನುಭವಿಸಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಯಪುರ ಗ್ರಾಮ ಪಂಚಾಯಿತಿ ಸದಸ್ಯ ಎಂ.ನಾಗರಾಜು ಆಗ್ರಹಿಸಿದರು.

ಜಯಪುರ ಭಾಗದ ಕೆರೆಗಳಿಗೆ ಸರ್ಕಾರವು ಇಬ್ಜಾಲ ಏತ ನೀರಾವರಿ ಯೋಜನೆಯಲ್ಲಿ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ನೀರು ತುಂಬಲಿದೆ. ಆದರೆ, ಕೆರೆಗಳ ಅಭಿವೃದ್ಧಿಯಾಗದೆ ನೀರು ನಿಲ್ಲುವುದು ಎಲ್ಲಿ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಕೆಗ್ಗೆರೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಜಯಪುರ ಗ್ರಾಮದಲ್ಲಿರುವ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮೂಲಕ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಯಪುರ ಪಿಡಿಒ ನರಹರಿ ತಿಳಿಸಿದರು.

ಜಯಪುರದ ಕೆಗ್ಗೆರೆ ಮಧ್ಯದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗ ವನ್ನು ಕೂಡಲೇ ಸ್ಥಳಾಂತರಿಸಬೇಕು. ಇಲ್ಲದೆ ಇದ್ದರೆ ಸೆಸ್ಕ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಜಯಪುರ ಗ್ರಾಮದ ಕೆಗ್ಗೆರೆಯಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಸೂಕ್ತ ಜಾಗ ಗುರುತಿಸಲಾಗಿದ್ದು, ಎಇಇ ಗಮನಕ್ಕೆ ತಂದು ತ್ವರಿತವಾಗಿ ಸ್ಥಳಾಂತರಿಸಲಾಗುವುದು ಎಂದು ಜಯಪುರ ವಿಭಾಗದ ಸೆಸ್ಕ್ ಸಹಾಯಕ ಎಂಜಿನಿಯರ್‌ ಸುರೇಶ್ ತಿಳಿಸಿದರು.

ಕೆರೆ ಪಕ್ಕ ತ್ಯಾಜ್ಯ, ಕಿತ್ತು ಹೋದ ರಸ್ತೆ

ಕೆರೆ ಏರಿಗಳ ಇಕ್ಕೆಲಗಳಲ್ಲಿ ಗಿಡಗಂಟಿ ಬೆಳೆದಿದ್ದು, ರಸ್ತೆಗಳು ಕಿತ್ತು ಹೋಗಿವೆ. ಕೆರೆ ಪಕ್ಕದಲ್ಲೇ ತ್ಯಾಜ್ಯ ಸುರಿಯಲಾಗುತ್ತಿದೆ. ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಕೆರೆಗಳಿಗೆ ತಡೆಗೋಡೆ ನಿರ್ಮಿಸಿ ಅಪಾಯ ತಪ್ಪಿಸಬೇಕು ಎಂದು ಜಯಪುರ ಗ್ರಾಮಸ್ಥರು ಆಗ್ರಹಿಸಿದರು.

ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಕೆಬ್ಬೆಕಟ್ಟೆ’ ಕೆರೆ ಮೂಲ ಸ್ವರೂಪ ಕಳೆದುಕೊಂಡಿದ್ದು, ಕೆರೆಯ ಮಧ್ಯದಿಂದ ಜೆಸಿಬಿ ಯಂತ್ರ, ಟ್ರಾಕ್ಟರ್ ಮತ್ತು ಟಿಪ್ಪರ್ ಮೂಲಕ ಮಣ್ಣನ್ನು ಸಾಗಿಸಲಾಗುತ್ತಿದ್ದು, ಕಂದಕ ನಿರ್ಮಾಣವಾಗಿವೆ. ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸುವುದನ್ನು ತಪ್ಪಿಸಬೇಕು. ಕೆರೆಯ ಏರಿಯು ಒಡೆದು ಹೋದರೆ ಕೆರೆಗೆ ನೀರು ತುಂಬಿದಾಗ ರೈತರ ಜಮೀನುಗಳಿಗೆ ನುಗ್ಗುವ ನೀರು ತೊಂದರೆ ಉಂಟುಮಾಡುತ್ತದೆ. ಇದನ್ನು ತಪ್ಪಿಸಬೇಕೆಂದು ದೊಡ್ಡಹುಂಡಿ ಗ್ರಾಮದ ರೈತರು ಒತ್ತಾಯಿಸಿದರು.

ಜಯಪುರ ಗ್ರಾಮದ ಹೊಸಕೆರೆ ಏರಿಯ ಮಧ್ಯದಲ್ಲಿ ರುವ ತೂಬು ಬಿರುಕು ಬಿಟ್ಟು ಹಲವು ವರ್ಷಗಳಾದರೂ ಅಧಿಕಾರಿಗಳು ಸರಿಪಡಿಸಿಲ್ಲ. ಇದರಿಂದ ಸ್ಥಳೀಯ ರೈತರ ಜಮೀನುಗಳಿಗೆ ನೀರಿನ ಜೋನು ಹರಿದು ಶೀತವಾಗುತ್ತಿದ್ದು, ರೈತರು ಬೆಳೆ ಬೆಳೆಯಲಾಗದ ಸ್ಥಿತಿ ಇದೆ. ಕೆರೆಯ ಏರಿಯ ತೂಬನ್ನು ಸರಿಪಡಿಸಿ ರೈತರಿಗೆ ಅನೂಕೂಲ ಕಲ್ಪಿಸಬೇಕು ಎಂದು ಹೊಸಕೆರೆ ಗ್ರಾಮದ ರೈತ ಸಣ್ಣಪ್ಪ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು