ಶುಕ್ರವಾರ, ಮಾರ್ಚ್ 5, 2021
18 °C
ವಿಜಯನಗರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ

ಮತ್ತೊಂದು ಭೂಗಳ್ಳರ ತಂಡ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಭೂಗಳ್ಳರನ್ನು ಸೆದೆ ಬಡಿಯುವ ಪೊಲೀಸರ ಕಾರ್ಯಾಚರಣೆ ನಗರದಲ್ಲಿ ಮುಂದುವರಿದಿದೆ. ನಜರ್‌ಬಾದ್‌ ಠಾಣೆಯ ಪೊಲೀಸರು ಭೂಗಳ್ಳರ ಜಾಲವೊಂದನ್ನು ಬೇಧಿಸಿದ ಬೆನ್ನಲ್ಲೇ ವಿಜಯನಗರ ಠಾಣೆಯ ಪೊಲೀಸರು ಮತ್ತೊಂದು ಭೂಗಳ್ಳರ ತಂಡವನ್ನು ಹೆಡೆಮುರಿಕಟ್ಟಿದ್ದಾರೆ.

ಈ ಬಾರಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ನಿವೇಶನವನ್ನು ತಮ್ಮದು ಎಂಬಂತೆ ಮಾರಾಟ ಮಾಡಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅರವಿಂದನಗರದ ಸೋಮೇಶ (35), ಸಾತಗಳ್ಳಿಯ ಮಕ್ಬಲ್ (47) ಹಾಗೂ ಜಯರಾಮ್ (48) ಬಂಧಿತರು. ಇವರಿಂದ ₹ 23.50 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರ: ಹಿನಕಲ್‌ನಲ್ಲಿ ಮಹಿಳೆಯೊಬ್ಬರಿಗೆ ಆರೋಪಿಗಳು ವಿಜಯನಗರ 4ನೇ ಹಂತದ 3ನೇ ಪೇಸ್‌ನಲ್ಲಿರುವ ನಿವೇಶನ ಸಂಖ್ಯೆ 788ರ ನಿವೇಶನಕ್ಕೆ ನಕಲಿ ದಾಖಲಾತಿಗಳು ಹಾಗೂ ನಿವೇಶನದ ಮಾಲೀಕರಾದ ಸುರೇಶ್‌ಚಂದ್ರಬಾಬು ಎಂಬ ಹೆಸರಿನ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ₹ 72 ಲಕ್ಷಕ್ಕೆ ಮಾರಾಟ ಮಾಡಿದ್ದರು. ಮಹಿಳೆಯು ಖಾತೆ ಮಾಡಿಸಲು ಹೋದಾಗ ಮೋಸ ಹೋಗಿರುವುದು ಗೊತ್ತಾಯಿತು. ನಂತರ, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೊದಲು ಸೋಮೇಶ ಮತ್ತು ಮಕ್ಬಲ್ ರಿಯಲ್ ಎಸ್ಟೇಟ್ ಏಜೆಂಟರಂತೆ ವರ್ತಿಸಿದ್ದಾರೆ. ಆಟೊ ಚಾಲಕನಾಗಿದ್ದ ಜಯರಾಮ್‌ಗೆ ಆಮಿಷ ಒಡ್ಡಿ ಎರಡು ತಿಂಗಳ ಹಿಂದೆಯೇ ನಿವೇಶನದ ಮೂಲಮಾಲೀಕರ ಹೆಸರಿನಲ್ಲಿ ಖಾತೆಯೊಂದನ್ನು ತೆರೆಸಿದ್ದಾರೆ. ನಂತರ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನರಸಿಂಹರಾಜ ವಿಭಾಗದ ಎಸಿಪಿ ಸಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಠಾಣೆಯ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಸಬ್‌ಇನ್‌ಸ್ಪೆಕ್ಟರ್ ರಾಮಚಂದ್ರ, ಎಎಸ್‌ಐ ವೆಂಕಟೇಶಗೌಡ, ಸಿಬ್ಬಂದಿ ಮಹಾದೇವ, ಸೋಮಾರಾಧ್ಯ, ಈಶ್ವರ್, ಶ್ರೀನಿವಾಸಮೂರ್ತಿ, ಕಾಂತರಾಜು, ಮಹೇಶ್, ಮಹದೇವ ಅವರು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ನಗರದಲ್ಲಿ ಮತ್ತಷ್ಟು ಭೂಗಳ್ಳರು; ಎಚ್ಚರ ವಹಿಸಲು ಸೂಚನೆ
ನಗರದಲ್ಲಿ ಮತ್ತಷ್ಟು ಭೂಗಳ್ಳರು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ನಗರ ಪೊಲೀಸ್ ಕಮೀಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಸೂಚನೆ ನೀಡಿದ್ದಾರೆ.

ಭೂಗಳ್ಳರು ಮೊದಲಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ನಿವೇಶನಗಳನ್ನು ಪರಿಶೀಲಿಸುತ್ತಾರೆ. ದೂರದ ಊರುಗಳಲ್ಲಿರುವ ಮಾಲೀಕರ ನಿವೇಶನಗಳನ್ನು ಕುರಿತು ನಕಲಿ ದಾಖಲೆಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ನಕಲಿ ದಾಖಲೆಗಳು ಅಸಲಿಯಂತೆಯೇ ಕಂಡು ಬರುತ್ತವೆ. ನಂತರ, ವಿವಿಧ ಕಾರಣಗಳನ್ನು ನೀಡಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ಅಮಾಯಕ ಸಾರ್ವಜನಿಕರನ್ನು ಪುಸಲಾಯಿಸುತ್ತಾರೆ. ದೊಡ್ಡ ಅಳತೆಯ ನಿವೇಶನ ಕಡಿಮೆ ದರಕ್ಕೆ ಸಿಗುತ್ತದೆ ಎಂದು ತಿಳಿದು ಖರೀದಿಸುತ್ತಾರೆ. ಆದರೆ, ಖಾತೆ ಮಾಡಿಸಲು ಹೋದಾಗ ಮೋಸ ಹೋಗಿರುವುದು ಬಯಲಾಗುತ್ತದೆ. ಒಂದು ವೇಳೆ ತಕ್ಷಣಕ್ಕೆ ಖಾತೆ ಮಾಡಿಸದೇ ಹೋದಲ್ಲಿ ಮೋಸ ಹೋಗಿರುವುದು ಗೊತ್ತಾಗುವುದೇ ಇಲ್ಲ.

ಸಾರ್ವಜನಿಕರು ಲಕ್ಷಾಂತರ ಹಣ ವ್ಯಯಿಸಿ ನಿವೇಶನ ಕೊಳ್ಳುವಾಗ ಸರಿಯಾಗಿ ಪರಿಶೀಲನೆ ಮಾಡಬೇಕು. ಮಧ್ಯವರ್ತಿಗಳ ಜತೆ ಹೆಚ್ಚಿನ ವ್ಯವಹಾರ ಮಾಡಬಾರದು. ಮೂಲ ಮಾಲೀಕರನ್ನು ಕಂಡು ಅವರೊಂದಿಗೆ ಚರ್ಚಿಸಬೇಕು. ಮೂಲ ಮಾಲೀಕರು ಅವರೇ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಬೇಕು. ಖರೀದಿಸುವ ಮುನ್ನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳೆಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ನಂತರವಷ್ಟೇ ಖರೀದ ಪ್ರಕ್ರಿಯೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು