ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಭೂ–ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರಸ್ತೆ ತಡೆ ನಾಳೆ

Last Updated 18 ಜೂನ್ 2020, 8:12 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಭೂ–ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ರಾಜ್ಯದಾದ್ಯಂತ ಜೂನ್‌ 20ರಂದು ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟಿಸಲಿದೆ.

ಅಂದು ಬೆಳಿಗ್ಗೆ 11.30ಕ್ಕೆ ಮೈಸೂರು– ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಗುತ್ತದೆ. ಸಣ್ಣ ಹಿಡುವಳಿದಾರರ ಹಿತಕಾಯುವ ಉದ್ದೇಶದಿಂದ ಈ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಸಂಘದ ರಾಜ್ಯ ಸಂಚಾಲಕ ಎನ್‌.ನಂಜೇಗೌಡ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ರಾಜ್ಯ ಸರ್ಕಾರವು 1961ರ ಭೂ–ಸುಧಾರಣೆ ಕಾಯ್ದೆಯ 79–ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಲಾಗಿದೆ. ಕೃಷಿ ಭೂಮಿ ಸುಲಭವಾಗಿ ಕೈಗಾರಿಕೋದ್ಯಮಿಗಳು, ರಿಯಲ್‌ ಎಸ್ಟೇಟ್‌ ಮಾಲೀಕರು ಪಡೆದುಕೊಳ್ಳುವಂತೆ 63ನೇ ಕಲಂ ಹಾಗೂ 80ನೇ ಕಲಂಗೂ ತಿದ್ದುಪಡಿ ತಂದಿದೆ. ಇದರಿಂದ ಶ್ರೀಮಂತರು, ಬಹುರಾಷ್ಟ್ರೀಯ ಕಂಪನಿಗಳು (ಎಂಎನ್‌ಸಿ) ಕೃಷಿ ಭೂಮಿಯನ್ನು ಕಬಳಿಸುತ್ತವೆ. ಸಣ್ಣ ರೈತರು ಕೃಷಿಯಿಂದ ಹೊರಗೆ ಉಳಿಯುತ್ತಾರೆ. ಎಂಎನ್‌ಸಿಗಳ ಹಿಡಿತದಿಂದಾಗಿ ಆಹಾರ ಸ್ವಾವಲಂಬನೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಬಿಜೆಪಿಯಲ್ಲಿರುವ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ’ ಎಂದು ದೂರಿದರು.

ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್‌ ಟಿ.ರಾಮೇಗೌಡ ಮಾತನಾಡಿ, ‘ಭವಿಷ್ಯದಲ್ಲಿ ರೈತರನ್ನು ಭಿಕ್ಷುಕರನ್ನಾಗಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್‌, ಮುಖಂಡರಾದ ಕಳ್ಳಿಪುರ ಮಹದೇವಸ್ವಾಮಿ, ಪ್ರದೀಪ್‌ ಹೊಳೆಸಾಲು, ಕಲ್ಲಂಬಾಳು ನಾಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT