ಶುಕ್ರವಾರ, ಜುಲೈ 1, 2022
25 °C
ಮ.ವೆಂಕಟರಾಮು ಅಭಿನಂದನಾ ಕಾರ್ಯಕ್ರಮದಲ್ಲಿ ವಿ.ಶ್ರೀನಿವಾಸ ಪ್ರಸಾದ್‌ ಸಲಹೆ

ಸಾಮಾಜಿಕ ಸಾಮರಸ್ಯವೇ ಆರ್‌ಎಸ್‌ಎಸ್‌ ಗುರಿಯಾಗಲಿ: ಸಂಸದ ವಿ.ಶ್ರೀನಿವಾಸ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವುದು ಆರ್‌ಎಸ್‌ಎಸ್‌ನ ಅಂತಿಮ ಗುರಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುದಯಕ್ಕೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸಲಹೆ ನೀಡಿದರು.

ಮ.ವೆಂಕಟರಾಮು ಅಭಿನಂದನಾ ಸಮಿತಿ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಮ.ವೆಂಕಟರಾಮು ಅವರ ಅಭಿನಂದನಾ ಕಾರ್ಯಕ್ರಮ ಹಾಗೂ ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿದರು.

‘ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆ ಇದೆ. ಅಸಮಾನತೆ, ಅಸ್ಪೃಶ್ಯತೆ, ಅನಕ್ಷರತೆ ತುಂಬಿ ತುಳುಕುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮಗುವೊಂದು ದೇವಸ್ಥಾನದೊಳಗೆ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಲಾಗಿದೆ. ಇದು ಬೇರೆಯವರಿಗೆ ಸಹಜವಾಗಿ ಕಾಣಬಹುದು. ಆದರೆ, ದಲಿತರಾದ ನಮಗೆ ಅದರ ನೋವು ಏನೆಂಬುದು ಗೊತ್ತು. ಹೀಗಾಗಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ವಿವೇಕಾನಂದರ ಕನಸ್ಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಿಗುವಂತೆ ಮಾಡಬೇಕು’ ಎಂದು ಆಶಿಸಿದರು.

‘ಜಗತ್ತಿನಲ್ಲೇ ಶಿಸ್ತಿನ ಸಂಸ್ಥೆ ಎಂಬ ಹೆಗ್ಗಳಿಕೆ ಆರ್‌ಎಸ್‌ಎಸ್‌ಗಿದೆ. ರಾಜಕೀಯ ಕಾರಣಕ್ಕೆ ಕೆಲವರು ಆರ್‌ಎಸ್‌ಎಸ್‌ ಬಗ್ಗೆ ಟೀಕಿಸುತ್ತಾರೆ. ಅದಕ್ಕೆ ಕಿವಿಗೊಡುವ ಅಗತ್ಯವಿಲ್ಲ’ ಎಂದರು.

‘ನಾನು, ಮ.ವೆಂಕಟರಾಮು ಅಶೋಕಪುರಂನಲ್ಲಿ ಹುಟ್ಟಿ ಬೆಳೆದವರು. ಶಿಶುವಿಹಾರದಿಂದ ಲೋಯರ್‌ ಸೆಕೆಂಡರಿವರೆಗೂ ಒಟ್ಟಿಗೆ ಓದಿದವರು. ವಿದ್ಯಾರ್ಥಿ ಪರಿಷತ್‌ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೆವು. 1972ರಲ್ಲಿ ರಾಜಕೀಯಕ್ಕೆ ಬಂದ ಬಳಿಕ ಆರ್‌ಎಸ್‌ಎಸ್‌ನಿಂದ ಹೊರಗೆ ಬಂದೆ. ನನಗೆ ಕೋಪ ಜಾಸ್ತಿ. ಆದರೆ, ಮ.ವೆಂಕಟರಾಮು ಶಾಂತ ಸ್ವಭಾವದ ವ್ಯಕ್ತಿ’ ಎಂದು ಬಣ್ಣಿಸಿದರು.

‘ನಾನು ರಾಜಕೀಯ ಪ್ರವೇಶಿಸಿ ಮುಂದಿನ ಎರಡೂವರೆ ವರ್ಷಕ್ಕೆ 50 ವರ್ಷಗಳು ತುಂಬುತ್ತವೆ. ಈವರೆಗೆ ವೃತ್ತಿ ಧರ್ಮವನ್ನು ಎತ್ತಿ ಹಿಡಿದಿದ್ದೇನೆ. ಎಳ್ಳಷ್ಟು ಆಪಾದನೆ ಇಲ್ಲದೆ ಗೌರವಯುತವಾಗಿ ನಿವೃತ್ತನಾಗಬೇಕೆಂದು ಬಯಸಿದ್ದೇನೆ. ಯಾರೂ ಬೆರಳು ಎತ್ತಿ ತೋರಿಸದಂತೆ ಕೆಲಸ ಮಾಡುತ್ತಿದ್ದೇನೆ’ ಎಂದರು.

ಆಶಯ ನುಡಿಗಳಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ  ದತ್ತಾತ್ರೇಯ ಹೊಸಬಾಳೆ, ‘ಯುವ ಪೀಳಿಗೆಯು ರಾಷ್ಟ್ರ ಧರ್ಮ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮ.ವೆಂಕಟರಾಮು ಅಂತಹ ಹಿರಿಯರ ಸಾಮಾಜಿಕ ಮೌಲ್ಯ, ಧ್ಯೇಯ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಬೇರೆಯವರಿಗೆ ನೋವು ಕೊಡದೆ, ಸಮಾಜ ದುಷ್ಟರಿಗೆ ತಲೆ ಭಾಗದೆ ಧೈರ್ಯ, ಸ್ವಾಭಿಮಾನದಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

‘ಮ.ವೆಂಕಟರಾಮು ಸಂಘದ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ಯೋಗ್ಯವಾಗಿ ನಿರ್ವಹಿಸಿದ್ದಾರೆ. ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಸಂಘವನ್ನು ವಿರೋಧಿಸುತ್ತಿರುವ ಜನರಿಗೆ, ಸಂಘ ಏನೆಂದು ತೋರಿಸಿಕೊಟ್ಟಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್‌ಎಸ್‌ಎಸ್‌ ದಕ್ಷಿಣ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ವಾಮನರಾವ್ ಬಾಪಟ್, ಉಪಾಧ್ಯಕ್ಷರಾದ ತೋಂಟದಾರ್ಯ, ಜಗನ್ನಾಥ ಶೆಣೈ, ‘ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ’ದ ಪ್ರಧಾನ ಸಂಪಾದಕ ವಿ.ರಂಗನಾಥ್‌ ಇದ್ದರು.

‘ಹಿಂದೂ ಎನ್ನಲು ಸಂಕೋಚ ಬೇಡ’

‘ಆರ್‌ಎಸ್‌ಎಸ್‌ ಎಂದರೆ ಹಿಂದೂ ಸಂಘಟನೆ, ಹಿಂದೂ ಸಾಮರಸ್ಯ. ಹಿಂದೂ ಎನ್ನಲು ಯಾರೂ ಸಂಕೋಚ ಪಡಬಾರದು. ತಪ್ಪು ತಿಳಿವಳಿಕೆಗೆ ಒಳಗಾಗಬಾರದು. ಅನೇಕ ಹಿಂದೂಗಳ ಮೂರ್ಖತನದ ನಡವಳಿಕೆಯಿಂದ ಹಿಂದೂ ಎನ್ನುವ ಹೆಸರಿಗೆ ಅಪಚಾರ ಬಂದಿದೆ ವಿನಾ, ಹಿಂದುತ್ವದ ಯಾವ ದೋಷವೂ ಇಲ್ಲ. ಈ ದೋಷವನ್ನು ವ್ಯಕ್ತಿಗಳಿಂದ ದೂರ ಮಾಡಲು ಹಿಂದೂ ಸಂಘಟನೆ ಮಾಡಬೇಕು. ಇದು ರಾಷ್ಟ್ರೀಯ ಅವಶ್ಯ. ಸಂಘಟನೆಗೆ ಸಾಮರಸ್ಯದ ಅಗತ್ಯವಿದ್ದು, ಆಗಾಗ ಉಂಟಾಗುವ ಸಾಮರಸ್ಯದ ಕೊರತೆಯನ್ನು ಭರ್ತಿ ಮಾಡಬೇಕು’ ಎಂದು ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಸು.ರಾಮಣ್ಣ ಸಲಹೆ ನೀಡಿದರು.

‘ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ, ಕೀಳುಮಟ್ಟದ ನಡವಳಿಕೆ ಇನ್ನೂ ಹೋಗಿಲ್ಲ. ದಲಿತರ ಬಗ್ಗೆ ಸಹಾನುಭೂತಿ ತೋರಿಸಿದರೆ ಸಾಲದು, ಸಮಾನಭೂತಿ ಅಗತ್ಯ. ದಲಿತ ಸಮುದಾಯದಲ್ಲಿ ಹುಟ್ಟಿದವನು ಸಂಘರ್ಷದ ಹಾದಿಯಲ್ಲಿ ಹೋದರೆ ಉದ್ಧಾರ ಆಗುವುದಿಲ್ಲ. ಸಂಘರ್ಷದಿಂದ ದ್ವೇಷ, ಹಿಂಸೆ, ಅಶಾಂತಿ ಉಂಟಾಗುತ್ತದೆ. ವಿವೇಕದಿಂದ ಆಕ್ರೋಶಕ್ಕೆ, ಆವೇಶಕ್ಕೆ ಒಳಗಾಗಬಾರದು. ಆದರೆ, ಅದ್ಭುತ ಸಂವೇದನೆ ಹೊಂದಿರಬೇಕು. ಸಾಮರಸ್ಯದ ಮಾರ್ಗವೇ ಈ ಸಮಾಜದ ಸಂಘಟನೆಗೆ ಮೂಲ ಆಧಾರ. ಇದು ಸಂಘದ ನಂಬಿಕೆ, ನಡವಳಿಕೆ’ ಎಂದರು.

‘ದಲಿತ ಸಮುದಾಯದಲ್ಲಿ ಹುಟ್ಟಿದ ವೆಂಕಟರಾಮು ಹೃದಯವನ್ನು ಬಿಸಿಯಾಗಿ, ತಲೆಯನ್ನು ಶಾಂತವಾಗಿ ಇಟ್ಟುಕೊಂಡರು. ಅವರು ಶಾಂತಚಿತ್ತರಾಗಿ ಸಂಘ ಕಾರ್ಯವನ್ನು ಜೀವನದ ವ್ರತದಂತೆ ಸ್ವೀಕಾರ ಮಾಡಿದ್ದಾರೆ. ಸರ್ವರಿಗೂ ಪ್ರಿಯವಾಗಿದ್ದಾರೆ’ ಎಂದು ಬಣ್ಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು