ಶುಕ್ರವಾರ, ಆಗಸ್ಟ್ 7, 2020
24 °C
‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಆಂದೋಲನ: ಒಗ್ಗಟ್ಟಿನ ಹೋರಾಟಕ್ಕೆ ಯತ್ನ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಬಲ ಹಾಗೂ ಸಾಂಘಿಕ ಹೋರಾಟಕ್ಕಾಗಿ ಒಂದೇ ವೇದಿಕೆ ರೂಪಿಸಿಕೊಳ್ಳಲು ರೈತ ಸಂಘಟನೆಗಳು ಕಾರ್ಯತಂತ್ರ ರೂಪಿಸುತ್ತಿವೆ.

ವಿವಿಧ ರೈತ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುವ ಬದಲು, ರಾಜ್ಯದ ಎಲ್ಲೆಡೆ ಜೊತೆಯಾಗಿ ಆಂದೋಲನ ರೂಪಿಸುವುದು ಇದರ ಉದ್ದೇಶ. ಈ ಮೂಲಕ ಕಾಯ್ದೆ ವಾಪಸ್‌ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಗುರಿ ಹೊಂದಲಾಗಿದೆ.

ಮೈಸೂರು–ಚಾಮರಾಜನಗರ ಜಿಲ್ಲೆಯಲ್ಲಿ ಎರಡು ದಶಕಗಳಿಂದ ಸುಸ್ಥಿರ ಸಾವಯವ ಕೃಷಿಕರ ಒಕ್ಕೂಟ ನಡೆಸುತ್ತಿರುವ ಸಂಘಟನೆಯ ಪದಾಧಿಕಾರಿಗಳು, ‘ನಮ್ಮೂರ ಭೂಮಿ ನಮಗಿರಲಿ’ ಎಂಬ ವೇದಿಕೆಯಡಿ ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸಿದ್ದಾರೆ.

ಒಕ್ಕೂಟದ ವಿ.ಗಾಯತ್ರಿ ಸಂಯೋಜಕಿಯಾಗಿ ಒಂದು ತಿಂಗಳಿಂದಲೂ ಕಸರತ್ತು ನಡೆಸಿದ್ದು, ಹಲವು ಸಂಘಟನೆಗಳ ಜತೆ ಚರ್ಚಿಸಿದ್ದಾರೆ. ಈಗಾಗಲೇ ಕೆಲ ಸಂಘಟನೆಗಳು ಆಂದೋಲನಕ್ಕೆ ರಾಜ್ಯ ವ್ಯಾಪಿ ಸಾಥ್‌ ನೀಡಲು ಸಮ್ಮತಿಸಿವೆ.

‘ಕೆಲವು ಸಂಘಟನೆಗಳು ವೇದಿಕೆಯಲ್ಲಿ ಗುರುತಿಸಿಕೊಂಡಿವೆ. ತಿದ್ದುಪಡಿ ಕಾಯ್ದೆ ವಿರುದ್ಧ ಸೋಮವಾರದಿಂದಲೇ (ಆ.3) ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿವೆ. ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ, ಉಳುವವರಿಗೇ ಭೂಮಿ; ಉಳ್ಳವರಿಗಲ್ಲ’ ಎಂಬ ಎರಡು ಘೋಷ ವಾಕ್ಯದ ನಾಮಫಲಕ ಚಳವಳಿಗೂ ಚಾಲನೆ ನೀಡಲಿವೆ’ ಎಂದು ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಸಂಘಟನೆಗಳ ಜೊತೆಗೂ ಮಾತುಕತೆ ನಡೆದಿದೆ. ಆ.8ರ ವೇಳೆಗೆ ಅಂತಿಮ ರೂಪ ಸಿಗಲಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿ ಹಳ್ಳಿಯಲ್ಲೂ ನಾಮಫಲಕ ಚಳವಳಿ ನಡೆಸುವ ಜೊತೆಯಲ್ಲೇ, ಪ್ರತಿ ರೈತರ ಮನೆಯಿಂದಲೂ ಮುಖ್ಯಮಂತ್ರಿಗೆ ಪತ್ರ ಬರೆಸುವ ಮೂಲಕ ಪೋಸ್ಟ್‌ ಕಾರ್ಡ್‌ ಆಂದೋಲನ ನಡೆಸಲಾಗುವುದು. ಸರ್ಕಾರ ಕಾಯ್ದೆ ವಾಪಸ್‌ ಪಡೆಯುವ ತನಕವೂ ಈ ಹೋರಾಟವನ್ನು ನಿರಂತರವಾಗಿ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು