ಸೋಮವಾರ, ಮೇ 16, 2022
22 °C
15 ದಿನದ ‘ರಾಷ್ಟ್ರೀಯ ಸಮಕಾಲೀನ ಶಿಲಾ ಶಿಲ್ಪ ಶಿಬಿರ’ಕ್ಕೆ ಚಾಲನೆ

ಕಲೆ ಕರಗತವಾಗಲಿ: ಯೋಗಿರಾಜ ಶಿಲ್ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ಆವರಣದಲ್ಲಿ ಶುಕ್ರವಾರ 15 ದಿನದ ‘ರಾಷ್ಟ್ರೀಯ ಸಮಕಾಲೀನ ಶಿಲಾ ಶಿಲ್ಪ ಶಿಬಿರ’ಕ್ಕೆ ಚಾಲನೆ ದೊರೆಯಿತು.

ಶಿಲ್ಪಕಲಾ ಅಕಾಡೆಮಿ, ಕಾವಾ ಸಹಯೋಗದೊಂದಿಗೆ ಆರಂಭಗೊಂಡ ಈ ಶಿಬಿರದಲ್ಲಿ ರಾಜಸ್ತಾನ, ಮಹಾರಾಷ್ಟ್ರ, ಹರಿಯಾಣ, ಕೇರಳ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಹಿರಿಯ ಹಾಗೂ ಕಿರಿಯ 30 ಕಲಾವಿದರು ಭಾಗವಹಿಸಿದ್ದಾರೆ.

ಕಾಲೇಜಿನ ಆವರಣದಲ್ಲಿ ಶಿಲೆಯ ಕೆತ್ತನೆ ಮೂಲಕ ಶಿಬಿರ ಉದ್ಘಾಟಿಸಿದ ಬಿ.ಎಸ್.ಯೋಗಿರಾಜ ಶಿಲ್ಪಿ ಮಾತನಾಡಿ, ‘ಗುರು ಕಲಿಸಿದ್ದಕ್ಕಿಂತ ಹೆಚ್ಚಿನದ್ದನ್ನು ಸ್ವಂತ ಪರಿಶ್ರಮದಿಂದ ಕಲಿಯಬೇಕು. ಶಿಷ್ಯತ್ವದ ಅವಧಿಯಲ್ಲೇ ಕಲೆ ಕರಗತವಾಗಬೇಕು. ಗುರುಗಳು ಸಹ ಶಿಷ್ಯಂದಿರಿಗೆ ಸರಿಯಾಗಿ ವಿದ್ಯೆ ಕಲಿಸಿಕೊಡಬೇಕು’ ಎಂದು ಹೇಳಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತೆ, ಕಾವಾ ಡೀನ್ ಬಿ.ಆರ್.ಪೂರ್ಣಿಮಾ ಮಾತನಾಡಿ, ‘ತರಗತಿಯಲ್ಲಿ ಕುಳಿತು ಪಠ್ಯ ಕೇಳುವುದೇ ಶಿಕ್ಷಣವಲ್ಲ. ಪ್ರಾಯೋಗಿಕವಾಗಿಯೂ ಇಂತಹ ಶಿಬಿರಗಳ ಮೂಲಕ ವಿದ್ಯೆ ಕಲಿಯಬೇಕಿದೆ. ದಶಕದ ಬಳಿಕ ಕಾವಾ ಆವರಣದಲ್ಲಿ ರಾಷ್ಟ್ರೀಯ ಶಿಬಿರ ಆಯೋಜನೆಗೊಂಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ವೀರಣ್ಣ ಮಾ.ಅರ್ಕಸಾಲಿ ಮಾತನಾಡಿ, ‘ಅಕಾಡೆಮಿಗೆ ರಜತ ಸಂಭ್ರಮದ ಸಡಗರ. ಅರ್ಥಪೂರ್ಣ ಆಚರಣೆಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.

ವಿವಿಧೆಡೆಯಿಂದ ಬಂದಿದ್ದ ಹಿರಿಯ–ಕಿರಿಯ ಶಿಲ್ಪಿಗಳನ್ನು ಸ್ವಾಗತಿಸಲಾಯಿತು. ಕಾವಾ ಆಡಳಿತಾಧಿಕಾರಿ ನಿರ್ಮಲ ಮಠಪತಿ, ಶಿಲ್ಪಕಲಾ ವಿಭಾಗದ ಮುಖ್ಯಸ್ಥ ಕೆ.ರಾಘವೇಂದ್ರ, ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ, ಶಿಬಿರದ ನಿರ್ದೇಶಕ ಎಂ.ರಾಮಮೂರ್ತಿ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು