ಮಂಗಳವಾರ, ಏಪ್ರಿಲ್ 7, 2020
19 °C
ಕಾಯಕ ಶರಣರ ಜಯಂತಿಯಲ್ಲಿ ಉರುಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

‘ಲಿಂಗಾಯತ ಧರ್ಮದ ಮೊದಲ ಬಲಿದಾನ ಹರಳಯ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಲಿಂಗಾಯತ ಧರ್ಮ ಉಳಿದಿದೆ ಎಂದರೇ ಅದಕ್ಕೆ ಮೂಲ ಕಾರಣ ಸಮಗಾರ ಹರಳಯ್ಯ. ಲಿಂಗಾಯತ ಧರ್ಮದ ಮೊದಲ ಬಲಿದಾನವೂ ಈತನದ್ದೇ’ ಎಂದು ಉರುಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಮನೆಯಂಗಳದಲ್ಲಿ ಶುಕ್ರವಾರ ಸಂಜೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಯಕ ಶರಣ ಜಯಂತ್ಯುತ್ಸವ ಸಮಿತಿ ವತಿಯಿಂದ ನಡೆದ ಕಾಯಕ ಶರಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಹರಳಯ್ಯ ಅವರ ತ್ಯಾಗದಿಂದಲೇ ಲಿಂಗಾಯತ ಧರ್ಮ ಉಳಿದಿದೆ. ಲಿಂಗಾಯತರೆಲ್ಲರೂ ಹರಳಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಬೇಕಿದೆ’ ಎಂದರು.

‘ಮನುಷ್ಯತ್ವದ–ಮಾನವೀಯತೆಯ ಭಾರತ ಇಂದು ಇಲ್ಲವಾಗಿದೆ. ಮನುಷ್ಯನನ್ನೇ ಕೊಲ್ಲುವ ಭಾರತ ನಿರ್ಮಾಣಗೊಳ್ಳುತ್ತಿದೆ. ಸ್ವಜಾತಿಯ ಪ್ರಾಣಿ ಹತ್ಯೆ ಪ್ರಪಂಚದ ಯಾವ ಜೀವಿಯಲ್ಲೂ ಇಲ್ಲ. ಆದರೆ ಮನುಷ್ಯರಲ್ಲಿ ಮಾತ್ರ ಸ್ವಜಾತಿಯ ಹತ್ಯೆ ನಡೆದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಧರ್ಮಾಂದರಿಂದ ದೇಶ ಇಂದು ಹೊತ್ತಿ ಉರಿಯುತ್ತಿದೆ. ಅವನತಿಯತ್ತ ಸಾಗಿದೆ. ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಪ್ರಜಾಪ್ರಭುತ್ವ ಎಂಬುದಾಗಿದೆ. ಪ್ರಜಾಪ್ರಭುತ್ವ ಮಾರಾಟಕ್ಕಿಟ್ಟ ವಸ್ತುವಾಗಿದೆ’ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘12ನೇ ಶತಮಾನದ ಶರಣರು ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆಯನ್ನು ತೊಲಗಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಂತಹವರು. ಕಾಯಕದ ಮೇಲೆ ನಂಬಿಕೆ ಹೊಂದಿದವರು. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದಂತಹ ಕಾಲಘಟ್ಟವದು. ಇಂದು ಎಲ್ಲಾ ಕಡೆ ಬೇಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ನೀಡುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಹೇಳಿದರು.

ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ‘ಗಾಂಧೀಜಿ, ಬಸವಣ್ಣ, ಬುದ್ಧ, ಅಂಬೇಡ್ಕರ್, ವಿವೇಕಾನಂದ, ಜ್ಯೋತಿಬಾಪುಲೆ ಈ ನೆಲದಲ್ಲಿ ಹುಟ್ಟದಿದ್ದರೇ, ದೇಶದ ಸ್ಥಿತಿ ಯಾವ ರೀತಿ ಇರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಮಹಾಪುರುಷರು ಇದೀಗ ಹುಟ್ಟದಿರುವುದು ನಮ್ಮ ದೌರ್ಭಾಗ್ಯ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಚನ್ನಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ನಿವೃತ್ತ ವೈದ್ಯಾಧಿಕಾರಿ ಡಾ.ಪುಟ್ಟಸಿದ್ದಯ್ಯ, ಉಪ ವಿಭಾಗ ಅಧಿಕಾರಿ ವೆಂಕಟರಾಜು, ವೇಣುಗೋಪಾಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)