ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಿಲುವು ಕುತೂಹಲ

ದೋಸ್ತಿಗಳ ಕುಸ್ತಿಗೆ ಅಖಾಡ ಸಜ್ಜು

Published:
Updated:
Prajavani

ಮೈಸೂರು: ಲೋಕಸಭಾ ಚುನಾವಣೆ ಯಲ್ಲಿ ಮೈತ್ರಿ ಮಾಡಿಕೊಂಡು ಜೊತೆ ಜೊತೆಯಾಗಿ ಮತಯಾಚಿಸಿದ್ದ ಜೆಡಿಎಸ್‌ –ಕಾಂಗ್ರೆಸ್‌ ಪಕ್ಷಗಳೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ್ತೆ ಕುಸ್ತಿಗೆ ಸಜ್ಜಾಗುತ್ತಿವೆ.

ನಂಜನಗೂಡು ನಗರಸಭೆ, ಕೆ.ಆರ್‌.ನಗರ, ಬನ್ನೂರು ಪುರಸಭೆಗೆ ಚುನಾವಣೆ ನಡೆಯಲಿದ್ದು, ಎರಡೂ ಪಕ್ಷಗಳ ಸ್ಥಳೀಯ ನಾಯಕರು ಪ್ರತ್ಯೇಕ ವಾಗಿ ಸ್ಪರ್ಧಿಸಲು ಅಖಾಡ ಸಿದ್ಧ ಮಾಡಿ ಕೊಳ್ಳುತ್ತಿದ್ದಾರೆ. ದೋಸ್ತಿಗಳ ಕುಸ್ತಿಗೆ ಮತ್ತಷ್ಟು ಪೆಟ್ಟು ನೀಡಲು ಬಿಜೆಪಿಯೂ ರಹಸ್ಯ ಕಾರ್ಯತಂತ್ರ ರೂಪಿಸುತ್ತಿದೆ.

ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಬೇಕೇ ಎಂಬುದರ ಬಗ್ಗೆ ಕಾಂಗ್ರೆಸ್‌–ಜೆಡಿಎಸ್‌ ವರಿಷ್ಠರು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಸ್ಥಳೀಯ ನಾಯಕರ ವಿವೇಚನೆಗೆ ಬಿಟ್ಟಿದ್ದಾರೆ. ಹೀಗಾಗಿ, ಸ್ಥಳೀಯ ಮಟ್ಟದಲ್ಲಿ ಜಿದ್ದಾಜಿದ್ದಿ ಶುರುವಾಗಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಉಭಯ ಪಕ್ಷಗಳ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ.

ಪುರಸಭೆಯಿಂದ ನಗರಸಭೆಗೆ ನಂಜನಗೂಡು ಬಡ್ತಿ ಪಡೆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ವಾರ್ಡ್‌ಗಳ ಸಂಖ್ಯೆ 27ರಿಂದ 31ಕ್ಕೆ ಜಿಗಿದಿವೆ. ಕಳೆದ ಬಾರಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಯಾವ ಪಕ್ಷಕ್ಕೂ ಬಹುಮತ ದೊರೆತಿರಲಿಲ್ಲ. ಹೀಗಾಗಿ, ಮೊದಲ ಅವಧಿಗೆ ಜೆಡಿಎಸ್‌–ಕಾಂಗ್ರೆಸ್‌, ಎರಡನೇ ಅವಧಿಗೆ ಕಾಂಗ್ರೆಸ್‌–ಬಿಜೆಪಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿವೆ. ಈ ಬಾರಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪ್ರಾಬಲ್ಯ ಹೊಂದಿವೆ.

ಕಾಂಗ್ರೆಸ್‌ ಮುಖಂಡರಾದ ಆರ್‌.ಧ್ರುವನಾರಾಯಣ, ಕಳಲೆ ಕೇಶವ ಮೂರ್ತಿ ಈಗಾಗಲೇ ಸಭೆ ನಡೆಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇನ್ನು ಬಿಜೆಪಿಯಲ್ಲಿ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಶಾಸಕ ಡಿ.ಹರ್ಷ ವರ್ಧನ್‌ ಅವರ ಮಾತೇ ಅಂತಿಮ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ ಅವರ ಮನೆಗೆ ಎಡತಾಕುತ್ತಿದ್ದಾರೆ.

ಕೆ.ಆರ್‌.ನಗರ ಪುರಸಭೆಯಲ್ಲಿ ಮೊದಲ ಅವಧಿಗೆ ಕಾಂಗ್ರೆಸ್‌ ಆಡಳಿತ ಹಿಡಿದಿದ್ದರೆ, 2ನೇ ಅವಧಿಗೆ ಜೆಡಿಎಸ್‌ ಆಡಳಿತ ನಡೆಸಿದೆ. ಇಲ್ಲೂ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಮೇಲೆ ಪಕ್ಷಾಂತರ ಶುರುವಾಯಿತು. ಇಲ್ಲಿ ಈ ಎರಡೂ ಪಕ್ಷಗಳು ಬಲಿಷ್ಠವಾಗಿವೆ.

ಕೆ.ಆರ್‌.ನಗರ ಪಟ್ಟಣದಲ್ಲಿ ಹದಿ ನೈದು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು ಜಂಟಿ ಸಮಾವೇಶ ನಡೆಸಿ ಮತಯಾಚಿಸಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜೊತೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಇದ್ದರು.

ಬದಲಾದ ಪರಿಸ್ಥಿತಿಯಲ್ಲಿ ಪರಸ್ಪರ ಪೈಪೋಟಿ ನಡೆಸಬೇಕಿದೆ. ಟಿಕೆಟ್‌ ಆಕಾಂಕ್ಷಿಗಳು ಸಚಿವ ಸಾ.ರಾ.ಮಹೇಶ್ ಅವರಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಡಿ.ರವಿ ಶಂಕರ್‌ ಅವರ ಮೊರೆ ಹೋಗಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ರವಿಶಂಕರ್‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.

ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೂರು ಪುರಸಭೆಯಲ್ಲಿ ಕಳೆದ ಬಾರಿ 17 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಈ ಬಾರಿ ಮತ್ತೆ ಗದ್ದುಗೆ ಗೇರುವ ವಿಶ್ವಾಸದಲ್ಲಿದೆ. ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಜೆಡಿಎಸ್‌ ಶಾಸಕ ಅಶ್ವಿನ್‌ ಕುಮಾರ್‌ ಅವರ ಪಾಲಿಗಿದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಆಯಾ ವಾರ್ಡ್‍ಗಳಲ್ಲಿ ನಿಗದಿಯಾ ಗಿರುವ ಮೀಸಲಾತಿಗೆ ಅನುಗುಣವಾಗಿ ಮೂರೂ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ. 

ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಸ್ಥಳಿಯ ಸಂಸ್ಥೆಯ ಚುನವಾಣೆ 29 ರಂದು ನಡೆಯಲಿದೆ. ಲೋಕಸಭಾ ಚುನಾವಣಾ ಫಲಿತಾಂಶ ಈ ಚುನಾವಣೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಕುತೂಹಲ ಮೂಡಿಸಿದೆ.

 

Post Comments (+)