ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಶಿವನ ಜಪದಲ್ಲಿ ಮಿಂದೆದ್ದ ಭಕ್ತ ಸಾಗರ

ದೇಗುಲಗಳಲ್ಲಿ ವಿಶೇಷ ಪೂಜೆ, ಮನೆಗಳಲ್ಲಿ ಇಷ್ಟಲಿಂಗಕ್ಕೆ ಅಭಿಷೇಕ; ರಾತ್ರಿಯಿಡೀ ಜಾಗರಣೆ
Last Updated 21 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ನಸುಕಿನಿಂದಲೇ ಶಿವ ದೇಗುಲಗಳು ಸೇರಿದಂತೆ, ಇತರ ದೇಗುಲಗಳಲ್ಲೂ ಮಹಾ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರ ನಾಮಾವಳಿ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಶಿವ ದೇಗುಲಗಳಲ್ಲಿ ತ್ರಿಕಾಲ ಪೂಜೆ ನಡೆಯಿತು. ಎಲ್ಲೆಡೆ ಪ್ರಸಾದವಾಗಿ ಪಾನಕ, ಹಣ್ಣುಗಳನ್ನು ವಿತರಿಸಲಾಯಿತು.

ಬಹುತೇಕ ಭಕ್ತರು ನಸುಕಿನಲ್ಲೇ ದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದರು. ಕೆಲವರು ದೇಗುಲಗಳಲ್ಲೇ ವಿಶೇಷ ಪೂಜೆ ನಡೆಸಿ, ಜಪ ಕೈಗೊಂಡರು. ಇಡೀ ದಿನ ಉಪವಾಸ ವ್ರತ ಆಚರಿಸಿದರು. ಮಹಾ ಶಿವರಾತ್ರಿ ಅಂಗವಾಗಿ ರುದ್ರ ಮಂತ್ರ ಪಠಣ, ಧೂಪ, ದೀಪಗಳಿಂದ ಶಿವನಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕದಲ್ಲಿನ ತ್ರಿಣೇಶ್ವರ ದೇಗುಲ, ಗಣಪತಿ ಸಚ್ಚಿದಾನಂದ ಆಶ್ರಮ, ರಾಮಾನುಜ ರಸ್ತೆಯ ಗುರುಕುಲ ಸೇರಿದಂತೆ ವಿವಿಧೆಡೆ ಶುಕ್ರವಾರ ನಸುಕಿನಿಂದ ತಡರಾತ್ರಿವರೆಗೂ ಜನಜಂಗುಳಿಯೇ ನೆರೆದಿತ್ತು.

ತ್ರಿಣೇಶ್ವರನಿಗೆ ಧರಿಸಲಾಗಿದ್ದ 11 ಕೆ.ಜಿ. ತೂಕದ ಬಂಗಾರದ ಮೂರ್ತಿಯ ದರ್ಶನಕ್ಕಾಗಿ ಭಕ್ತರು ಸರತಿಯಲ್ಲಿ ನಿಂತು ಕಾದರು. ಅವಧೂತ ಪೀಠದಲ್ಲಿ ದಿನವಿಡೀ ನಡೆದ ಪೂಜಾ ಕೈಂಕರ್ಯಗಳಲ್ಲಿ ವಿದೇಶಿ ಭಕ್ತರು ಸೇರಿದಂತೆ, ಹೊರರಾಜ್ಯದ ಭಕ್ತ ಗಣವೂ ಸೇರಿತ್ತು.

ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ ನೂರೊಂದು ಶಿವಲಿಂಗಗಳ ದರ್ಶನಕ್ಕೆ ಭಕ್ತ ಸಾಗರವೇ ಜಮಾಯಿಸಿತ್ತು. ಇದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿಯ ದರ್ಶನವನ್ನು ಭಕ್ತರು ಪಡೆದರು. ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಮೂರು ಬಾರಿ ನಡೆದ ರುದ್ರಾಭಿಷೇಕದಲ್ಲಿ ಭಾಗಿಯಾದರು.

ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲ, ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯ, ಅಶೋಕ ರಸ್ತೆಯ ಮುಕ್ಕಣ್ಣೇಶ್ವರ ಸ್ವಾಮಿ ದೇಗುಲ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ,ವಾಣಿವಿಲಾಸ ಮೊಹಲ್ಲಾ, ಬೋಗಾದಿ ರಿಂಗ್ ರಸ್ತೆಯಲ್ಲಿರುವ ನಾಗೇಶ್ವರ ಭೋಗೇಶ್ವರಸ್ವಾಮಿ ದೇವಾಲಯ,ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ ಹಾಗೂ ಇತರೆಡೆ ಇರುವ ಮಹದೇಶ್ವರ ದೇವಾಲಯಗಳಲ್ಲಿಯೂ ಶಿವನ ಆರಾಧನೆ ನಡೆಯಿತು.

ತಿ.ನರಸೀಪುರ ರಸ್ತೆಯಲ್ಲಿನ ಮಹದೇಶ್ವರ ದೇಗುಲದಲ್ಲೂ ಶಿವರಾತ್ರಿಯ ಸಂಭ್ರಮವಿತ್ತು. ಮಹದೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆದವು. ದೇಗುಲದ ಮುಂಭಾಗ ಕಾರಂಜಿ ನಡುವೆ ಶಿವನನ್ನು ಪ್ರತಿಷ್ಠಾಪಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು. ದರ್ಶನಕ್ಕೆ ಬಂದ ಭಕ್ತರನ್ನು ನಿಯಂತ್ರಿಸಲಿಕ್ಕಾಗಿ ಪೊಲೀಸರು ರಸ್ತೆ ಬದಿಯೇ ಬ್ಯಾರಿಕೇಡ್ ಹಾಕಿದ್ದರು.

ಮಹಾ ಶಿವರಾತ್ರಿ ಆಚರಣೆಗಾಗಿ ಎಲ್ಲ ದೇವಾಲಯಗಳು ತಳಿರು ತೋರಣಗಳಿಂದ ಸಿಂಗಾರಗೊಂಡು, ಸಂಭ್ರಮ–ಸಡಗರವನ್ನು ಇಮ್ಮಡಿಗೊಳಿಸಿದ್ದವು. ತೆಂಗು, ಬಾಳೆ, ಮಾವಿನ ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ನಗರದ ಹಲವು ದೇಗುಲದ ಆಸುಪಾಸು ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದು, ತೆಂಗಿನಕಾಯಿ, ಬಾಳೆ ಹಣ್ಣು, ದ್ರಾಕ್ಷಿ ಸೇರಿದಂತೆ ಇತರ ಹಣ್ಣುಗಳು, ಊದುಬತ್ತಿ–ಕರ್ಪೂರದ ಮಾರಾಟ ಭರ್ಜರಿಯಾಗಿ ನಡೆದಿತ್ತು.

ಸಂಗೀತ ಸೇವೆ, ಭಜನೆ, ಜಾಗರಣೆ, ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು. ‘ಶಿವ ಶಿವ ಎಂದರೆ ಭಯವಿಲ್ಲ... ಶಿವ ನಾಮಕೆ ಸಾಟಿ ಬೇರಿಲ್ಲ...’ ‘ಓಂ ನಮಃ ಶಿವಾಯ...’, ‘ಹರ ಹರ ಮಹಾದೇವ’ ಎಂಬಿತ್ಯಾದಿ ಭಕ್ತಿ ಗೀತೆಗಳು ದೇಗುಲಗಳಲ್ಲಿ ಅನುರುಣಿಸಿದವು.

ಎಲ್ಲೆಡೆ ಶಿವನ ದೇಗುಲಕ್ಕೆ ಭೇಟಿ ನೀಡಿದ ಶಿವಭಕ್ತರು ದರ್ಶನ ಪಡೆದು ಧನ್ಯತಾಭಾವ ಹೊಂದಿದರು. ಮುಂಜಾನೆಯಿಂದ ಉಪವಾಸವಿದ್ದ ಭಕ್ತರು ರಾತ್ರಿ ಫಲಾಹಾರ ಸ್ವೀಕರಿಸಿ, ಜಾಗರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT