ಬುಧವಾರ, ಅಕ್ಟೋಬರ್ 16, 2019
22 °C
8ರಂದು ಪ್ರಮುಖರೊಂದಿಗೆ ಮುಖ್ಯಮಂತ್ರಿಗಳ ಭೇಟಿ

ಹುಣಸೂರು ಜಿಲ್ಲಾ ಕೇಂದ್ರ ಮಾಡಿ: ವಿಶ್ವನಾಥ್

Published:
Updated:
Prajavani

ಹುಣಸೂರು: ಹುಣಸೂರು ವಿಭಾಗವನ್ನು ಮೈಸೂರು ಜಿಲ್ಲೆಯಿಂದ ಪ್ರತ್ಯೇಕಿಸಿ ಡಿ.ದೇವರಾಜ ಅರಸು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅಡಗೂರು ಎಚ್‌ ವಿಶ್ವನಾಥ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ‘ಮೈಸೂರು ಜಿಲ್ಲೆ ಪ್ರಸಕ್ತ ಆಡಳಿತಾತ್ಮಕವಾಗಿ ದೊಡ್ಡ ಜಿಲ್ಲೆಯಾಗಿದ್ದು, ಮೈಸೂರು ಜಿಲ್ಲಾ ಕೇಂದ್ರಕ್ಕೆ ಮಹಾನಗರಪಾಲಿಕೆ ಸೇರಿದಂತೆ ಎರಡು ಉಪವಿಭಾಗ ಕೇಂದ್ರ ಸೇರಿದೆ. ಹೀಗಾಗಿ ಆಡಳಿತಾತ್ಮಕವಾಗಿ ಸಮಸ್ಯೆಗಳು ಎದುರಾಗಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ’ ಎಂದರು.

‘ಈ ಹಿಂದಿನ ಸರ್ಕಾರದಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಹುಣಸೂರು ವಿಭಾಗವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದೆ. ಈಗ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವಿದ್ದು, ಈ ಸರ್ಕಾರಕ್ಕೂ ದಿ.ಡಿ.ದೇವರಾಜ ಅರಸು ಹೆಸರಿನಲ್ಲಿ ಹುಣಸೂರು ಕೇಂದ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಮೇಲ್ಮಟ್ಟಕ್ಕೇರಿಸಬೇಕು ಎಂದು ಮನವಿ ಮಾಡಿ ಮತ್ತೊಮ್ಮೆ ಪ್ರಯತ್ನ ನಡೆಸಲಿದ್ದೇನೆ’ ಎಂದರು.

‘ಹುಣಸೂರು ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿದ್ದು, ಈ ಕೇಂದ್ರಕ್ಕೆ 6 ತಾಲ್ಲೂಕು ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಎಚ್‌.ಡಿ.ಕೋಟೆಯಲ್ಲಿ ಎರಡು ಜಲಾಶಯ, ಕೆ.ಆರ್.ನಗರದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ಲಕ್ಷ್ಮಣತೀರ್ಥ, ಕಾವೇರಿ, ಕಬಿನಿ ನದಿಗಳು ಹರಿಯುತ್ತಿದೆ. ಭೌಗೋಳಿಕವಾಗಿ ಚಾಮರಾಜನಗರಕ್ಕಿಂತಲೂ ದೊಡ್ಡ ಪ್ರದೇಶವಾಗಿದೆ’ ಎಂದರು.

‘ಹುಣಸೂರು ವಿಭಾಗ ಕೇಂದ್ರದಲ್ಲಿ ಈಗಾಗಲೇ ಜಿಲ್ಲಾಮಟ್ಟದ ಕಚೇರಿಗಳು ಕೆಲಸ ನಿರ್ವಹಿಸುತ್ತಿದ್ದು, ಇದಲ್ಲದೆ ವಾಣಿಜ್ಯ, ಕೈಗಾರಿಕೆ, ಸಾಹಿತ್ಯ ಮತ್ತು ಸಂಸ್ಕೃತಿ ದೃಷ್ಟಿಯಿಂದ ಹುಣಸೂರು ಎಲ್ಲಾ ರೀತಿಯ ಜಿಲ್ಲಾ ಕೇಂದ್ರವಾಗಲು ಅರ್ಹತೆ ಹೊಂದಿದೆ. ಹುಣಸೂರು ತಾಲ್ಲೂಕು 4 ಹೋಬಳಿ ಕೇಂದ್ರ ಹೊಂದಿದ್ದು, 2 ಹೆಚ್ಚುವರಿ ಹೋಬಳಿ ಸೃಷ್ಟಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ವಿಶ್ವನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಾಸೇಗೌಡ, ಅಣ್ಣಯ್ಯ ನಾಯಕ, ಗಣೇಶ್‌, ಸತೀಶ್ ಕುಮಾರ್ ಉಪಸ್ಥಿತರಿದ್ದರು.

Post Comments (+)