ಗುರುವಾರ , ಮೇ 13, 2021
22 °C
ತಳ್ಳುವ ಗಾಡಿಯಲ್ಲಷ್ಟೇ ಇನ್ನು ತರಕಾರಿ, ಹೂ, ಹಣ್ಣು ಮಾರಾಟ

ಮಾರುಕಟ್ಟೆ ಬಂದ್‌: ವ್ಯಾಪಾರಿಗಳ ಅಳಲು, ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲಾಕ್‌ಡೌನ್‌ ಸಂಬಂಧ ಸರ್ಕಾರ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಯನ್ವಯ ನಗರದ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಇಲ್ಲಿನ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ದೇವರಾಜ ಮಾರುಕಟ್ಟೆಯಲ್ಲಿನ ಕೆಲವು ತರಕಾರಿ ಮತ್ತು ಹೂವಿನ ವ್ಯಾಪಾರಿಗಳು ಸಯ್ಯಾಜಿರಾವ್‌ ರಸ್ತೆಯಲ್ಲಿ ಭಾನುವಾರ ಮಾರಾಟ ಮಾಡಿದರು. ಇನ್ನುಳಿದ ಬಹಳಷ್ಟು ಮಂದಿ ಬಾಗಿಲು ಬಂದ್ ಮಾಡಿ ಮನೆಯತ್ತ ತೆರಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೇವರಾಜ ಮಾರು ಕಟ್ಟೆಯ ತರಕಾರಿ ವ್ಯಾಪಾರಿ ಮೂರ್ತಿ, ‘ಮಾರುಕಟ್ಟೆಯಲ್ಲಿ ಸಾವಿರಕ್ಕೂ ಅಧಿಕ ತರಕಾರಿ ಅಂಗಡಿಗಳಿವೆ. ಇಷ್ಟು ಮಂದಿಯೂ ಹೊರಗೆ ಬಂದು ಮಾರಾಟ ಮಾಡಿದರೆ ಗುಂಪು ಹೆಚ್ಚಾಗುತ್ತದೆ. ಮಾರುಕಟ್ಟೆಯ ಒಳಗೆ ಮಾರಾಟ ಮಾಡಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಇತ್ತ ಮಂಡಿ ಮಾರುಕಟ್ಟೆ ಮತ್ತು ಎಂ.ಜಿ.ರಸ್ತೆ ಮಾರುಕಟ್ಟೆಗೂ ಇದೇ ಸೂಚನೆಗಳನ್ನು ಅಧಿಕಾರಿಗಳು ನೀಡಿದ್ದಾರೆ. ಭಾನುವಾರ ಒಂದು ದಿನದಮಟ್ಟಿಗೆ ಮಾತ್ರ ವ್ಯಾಪಾರ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. ಈ ಮಾರುಕಟ್ಟೆಗಳಲ್ಲೂ ವ್ಯಾಪಾರಸ್ಥರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಕೆ.ಪ್ರೇಮಕುಮಾರ್, ‘ಮಾರುಕಟ್ಟೆಯ ಒಳಗೆ ಪರಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ಅವಕಾಶ ಇದೆ’ ಎಂದು ತಿಳಿಸಿದರು.

‘ನಮಗೆ ವಯಸ್ಸಾಗಿದೆ, ಗಾಡಿಯನ್ನು ತಳ್ಳುವುದಕ್ಕೆ ಆಗುವುದಿಲ್ಲ. ನಿಲ್ಲಲೂ ಆಗದು. ನಮ್ಮ ಪಾಡಿಗೆ ನಮ್ಮನ್ನು ಇಲ್ಲಿ ಒಂದೆರಡು ಗಂಟೆಗಳ ಕಾಲ ವ್ಯಾಪಾರ ಮಾಡಿಕೊಂಡು ಹೋಗಲು ಬಿಡಿ’ ಎಂದು ಎಂ.ಜಿ.ರಸ್ತೆ ಮಾರುಕಟ್ಟೆ ತರಕಾರಿ ವ್ಯಾಪಾರಿ ಕೆಂಪಮ್ಮ ಮನವಿ ಮಾಡಿದರು.

ಈ ಕುರಿತು ‘ಪ್ರಜಾವಾಣಿ’ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್ ಅವರನ್ನು ಸಂಪರ್ಕಿಸಿದಾಗ ಅವರು, ‘ಸರ್ಕಾರದ ನಿರ್ಧಾರದಿಂದ ವ್ಯಾಪಾರಸ್ಥರಿಗೆ ತೊಂದರೆ ಯಾಗಿರುವುದು ನಿಜ’ ಎಂದರು.‌

‘ಸರ್ಕಾರ ರಾಜ್ಯಮಟ್ಟದಲ್ಲಿ ಮಾಡಿರುವ ತೀರ್ಮಾನ ಇದು. ಇದನ್ನು ನಾವು ಗೌರವಿಸುತ್ತೇವೆ. ಆದರೆ, ಮಾರು ಕಟ್ಟೆಯ ಒಳಭಾಗಕ್ಕಿಂತ ಹೊರಭಾಗದಲ್ಲಿ ವ್ಯಾಪಾರ ಮಾಡುವುದರಿಂದಲೇ ಹೆಚ್ಚಿನ ಜನಸಂದಣಿ ಉಂಟಾಗುತ್ತದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು