ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಮಾರುಕಟ್ಟೆ: ಬಾರದ ಜನ

ಮೊದಲ ದಿನ ಗ್ರಾಹಕರಿಂದ ನೀರಸ ಪ್ರತಿಕ್ರಿಯೆ
Last Updated 8 ಜುಲೈ 2021, 4:16 IST
ಅಕ್ಷರ ಗಾತ್ರ

ಮೈಸೂರು: ಎರಡು ತಿಂಗಳುಗಳ ನಂತರ ಇಲ್ಲಿನ ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆಗಳು ಬುಧವಾರ ಕಾರ್ಯಾರಂಭ ಮಾಡಿವೆ. ಆದರೆ, ಮೊದಲ ದಿನ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳವಾರವೇ ಪಾಲಿಕೆ ವತಿಯಿಂದ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಬೆಳಿಗ್ಗೆ ಮಾರುಕಟ್ಟೆಯಲ್ಲಿರುವ ಬಹುತೇಕ ಮಳಿಗೆಗಳ ಮಾಲೀಕರು ಅಂಗಡಿಗಳ ಬಾಗಿಲುಗಳನ್ನು ತೆರೆದರು. ಆದರೆ, ವಹಿವಾಟು ಶೇ 10ರಷ್ಟು ನಡೆಯಲಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್.ಮಹದೇವ್ ಅವರನ್ನು ಸಂಪರ್ಕಿಸಿದಾಗ ಅವರು, ‘ಮಾರುಕಟ್ಟೆಯಲ್ಲಿ ಅಂಗಡಿಗಳ ಮಾಲೀಕರು ಹಾಗೂ ಕೆಲಸಗಾರರು ಬಿಟ್ಟರೆ ಖರೀದಿದಾರರು ಕಾಣಸಿಗಲಿಲ್ಲ’ ಎಂದು ಹೇಳಿದರು.

ಆಷಾಢ ಮಾಸದ ಹೊಸ್ತಿಲಿನಲ್ಲಿ ಸಾಮಾನ್ಯವಾಗಿ ವ್ಯಾಪಾರ ಕಡಿಮೆ. ಆದರೆ, ಈ ಬಾರಿ ಕೊರೊನಾ ಭೀತಿಯ ಜತೆಗೆ, ಮಾರುಕಟ್ಟೆ ತೆರೆದಿರುವುದು ಬಹುತೇಕ ಮಂದಿಗೆ ಗೊತ್ತೇ ಆಗಿಲ್ಲ. ಈ ಎಲ್ಲ ಕಾರಣಗಳಿಂದ ಗ್ರಾಹಕರು ಮಾರುಕಟ್ಟೆಯತ್ತ ಸುಳಿದಿಲ್ಲ ಎಂದು ತಿಳಿಸಿದರು.

ಪಾಲಿಕೆ ವತಿಯಿಂದ ಪ್ರತಿ ವ್ಯಾಪಾರಸ್ಥರಿಗೆ ಕೋವಿಡ್ ಪರೀಕ್ಷೆ ಮಾಡುವ ಕಾರ್ಯ ಆರಂಭಗೊಂಡಿದೆ. ನಂತರ, ವ್ಯಾಪಾರಸ್ಥರಿಗೆ ಹಾಗೂ ಅವರ ಕುಟುಂಬದವರಿಗೆ ಕೋವಿಡ್ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.

ದೇವರಾಜ ಮಾರುಕಟ್ಟೆಯಲ್ಲಿ 882 ಮಳಿಗೆಗಳು ಹಾಗೂ 250 ದಿನವಹಿ ಶುಲ್ಕ ‍ಪಾವತಿಸುವ ಮಳಿಗೆಗಳು ಇವೆ. ಮಂಡಿ ಮಾರುಕಟ್ಟೆಯಲ್ಲಿ ‌145 ಹಾಗೂ ವಾಣಿವಿಲಾಸ ಮಾರುಕಟ್ಟೆಯಲ್ಲಿ 90 ಮಳಿಗೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT