ಸೋಮವಾರ, ಮಾರ್ಚ್ 30, 2020
19 °C
ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಪಾಲಿಕೆ ಸದಸ್ಯೆ ಶೋಭಾ ಸುನೀಲ್

ಪಾಲಿಕೆ ವಿರುದ್ಧ ಸದಸ್ಯೆಯಿಂದಲೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಾರ್ಡ್‌ನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ದೂರಿದ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಭಾನುವಾರ ಮುಂಜಾನೆ ಕುಟುಂಬ ಸಮೇತರಾಗಿ ತಮ್ಮ ವಾರ್ಡ್ ವ್ಯಾ‍ಪ್ತಿಯ ಕೆಲ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ಮೂಲಕ ಪ್ರತಿಭಟಿಸಿದರು.

ಪಾಲಿಕೆಯ ವಾರ್ಡ್ ನಂಬರ್‌ 61ರ ಸದಸ್ಯೆಯಾದ ಶೋಭಾ ಸುನೀಲ್, ಪೌರ ಕಾರ್ಮಿಕರ ಕೊರತೆಯಿಂದ ನಮ್ಮ ವಾರ್ಡ್‍ನಲ್ಲಿ ಕಸ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ ಪೌರ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುತ್ತಿಲ್ಲ. ಇದರಿಂದ ಇಲ್ಲಿನ ಸಾರ್ವಜನಿಕರು ನನ್ನನ್ನು ಪ್ರಶ್ನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ 700 ಜನಕ್ಕೆ ಒಬ್ಬ ಪೌರ ಕಾರ್ಮಿಕನನ್ನು ನಿಗದಿ ಪಡಿಸಿದೆ. ಅದರಂತೆ ಒಂದು ವಾರ್ಡ್‍ಗೆ 25 ಜನ ಪೌರ ಕಾರ್ಮಿಕರನ್ನು ಪಾಲಿಕೆ ನೀಡಿದೆ. ನಮ್ಮ ವಾರ್ಡ್‍ನಲ್ಲಿ 25 ಜನರ ಪೈಕಿ ಐವರು ಮೃತಪಟ್ಟಿದ್ದರೆ, ಇಬ್ಬರು ನಿವೃತ್ತಿ ಹೊಂದಿದ್ದಾರೆ. ಕೆಲವರು ಅನಾರೋಗ್ಯದಿಂದ ಕೆಲಸಕ್ಕೆ ಬರುತ್ತಿಲ್ಲ. 15 ಪೌರ ಕಾರ್ಮಿಕರನ್ನಿಟ್ಟುಕೊಂಡು ಹೇಗೆ ಸ್ವಚ್ಛತೆ ಮಾಡಿಸಲಿ, ಜನರಿಗೆ ಉತ್ತರ ನೀಡಲಾಗುತ್ತಿಲ್ಲ’ ಎಂದು ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.

‘ನಾಲ್ವರು ಮಾತ್ರ ಪುರುಷರು. ಉಳಿದ ಎಲ್ಲರೂ ಮಹಿಳಾ ಪೌರ ಕಾರ್ಮಿಕರು. ಇವರ ಕಷ್ಟ ನನಗೂ ಗೊತ್ತಿದೆ. ಆದಷ್ಟು ಬೇಗ ಮತ್ತಷ್ಟು ಕಾರ್ಮಿಕರನ್ನು ನೇಮಿಸಲಿ. ಎಲ್ಲ ವಾರ್ಡ್‌ಗಳಲ್ಲೂ ಇದೇ ಸ್ಥಿತಿಯಿದೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು