ತಿರಂಗ ಧ್ವಜ ಬಳಸುವ ಕ್ರಮ

7

ತಿರಂಗ ಧ್ವಜ ಬಳಸುವ ಕ್ರಮ

Published:
Updated:
Deccan Herald

ದೇಶ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧಗೊಂಡಿದೆ. ಎಲ್ಲೆಂದರಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇನ್ನು ಸೈಕಲ್, ಬೈಕ್, ಕಾರು, ಆಟೊ, ಲಾರಿಗಳ ಮೇಲೆ, ಮನೆಯ ಗೇಟು, ತಾರಸಿಗಳ ಮೇಲೆ ಈಗಾಗಲೇ ಧ್ವಜಗಳು ರಾರಾಜಿಸುತ್ತಿವೆ. ನಾಳೆ (ಆ.15) ಅದರ ಭರಾಟೆ ಮತ್ತಷ್ಟು ಹೆಚ್ಚಲಿದೆ.

ದೇಶಪ್ರೇಮವನ್ನು ತೋರಿಸುವ ಉತ್ಸಾಹದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಅರಿವಿಲ್ಲದೇ ಗಾಳಿಗೆ ತೂರುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನ ಆಗದಂತೆ ನೋಡಿಕೊಳ್ಳಲು ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ.

ದೇಶದ ಅಸ್ಮಿತೆಯ ಪ್ರತೀಕವಿರುವ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ಅಗೌರವ ಉಂಟಾಗಬಾರದು ಎಂಬ ಕಾರಣಕ್ಕೆ ಕೇಂದ್ರೀಯ ಗೃಹಮಂತ್ರಾಲಯದ ವತಿಯಿಂದ ಭಾರತೀಯ ರಾಷ್ಟ್ರಧ್ವಜ ಸಂಹಿತೆ ಮಾಡಲಾಗಿದೆ. ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯ್ದೆ-1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯ್ದೆ-1971ಕ್ಕೆ ಅನುಗುಣವಾಗಿ ಭಾರತದ ಧ್ವಜ ಸಂಹಿತೆ-2002 ಅನ್ನು ಜಾರಿಗೊಳಿಸಲಾಗಿದೆ.

ಧ್ವಜ ಸಂಹಿತೆಗನುಸಾರ, ರಾಷ್ಟ್ರೀಯ ಧ್ವಜವನ್ನು ಹಾರಿಸಿದಾಗ ಅದಕ್ಕೆ ಸನ್ಮಾನ ಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಬೇಕು. ಅದು ಎಲ್ಲರಿಗೂ ಕಾಣಿಸುವ ರೀತಿ ಸ್ಥಳವನ್ನು ಆಯ್ಕೆಮಾಡಿಕೊಂಡು ಅಲ್ಲಿ ಧ್ವಜವನ್ನು ಏರಿಸಬೇಕು. ಸೂರ್ಯಾಸ್ತವಾಗುವುದರೊಳಗೆ ಧ್ವಜಾವರೋಹಣ (ಇಳಿಸುವುದು) ಮಾಡಬೇಕು

ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಬೇಕು ಮತ್ತು ಗೌರವದಿಂದ ಕೆಳಗಿಳಿಸಬೇಕು. ಏರಿಸುವಾಗ ಮತ್ತು ಕೆಳಗಿಳಿಸುವಾಗ ತುತ್ತೂರಿಯನ್ನು ಊದಲೇಬೇಕು.  ಕಟ್ಟಡದ ಕಿಟಕಿ, ಬಾಲ್ಕನಿ, ಮನೆ ಮೇಲೆ ಅಥವಾ ಅಡ್ಡವಾಗಿ ಹಾರಿಸುವಾಗ ಧ್ವಜದಲ್ಲಿರುವ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು.

ಧ್ವಜಾರೋಹಣ ಮಾಡಿದವರು ಧ್ವಜಸ್ತಂಭದ ಬಲಭಾಗದಲ್ಲಿ ಸಭಿಕರ ಕಡೆಗೆ ಮುಖಮಾಡಿ ನಿಲ್ಲಬೇಕು. ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜಕೋಲಿನಿಂದ ಅದನ್ನು ಹಾರಿಸಬೇಕು.

ಯಾವುದೇ ಮೆರವಣಿಗೆಯ ವೇಳೆ ಅಥವಾ ಪರೇಡಿನ ವೇಳೆ ವ್ಯಕ್ತಿಯ ಬಲಗೈಯಲ್ಲಿ ಧ್ವಜ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು. ಅಲ್ಲದೇ, ಇತರ ಧ್ವಜ ಹಾಗೂ ಪತಾಕೆಗಳನ್ನು ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿಸಬಾರದು. ಬೇರೆ ದೇಶದ ಧ್ವಜಗಳಿದ್ದರೆ ಅವು ದೇಶದ ಧ್ವಜದ ಎಡಭಾಗದಲ್ಲೇ ಇರಬೇಕು.

ಹರಿದ, ಮುದ್ದೆಯಾದ ಧ್ವಜದ ಆರೋಹಣ ಮಾಡುವಂತಿಲ್ಲ, ಪ್ರದರ್ಶಿಸುವಂತಿಲ್ಲ ಅಲ್ಲದೇ ಅದನ್ನು ಸುಡುವಂತಿಲ್ಲ. ಯಾವುದೇ ವ್ಯಕ್ತಿಗೆ ಅಥವಾ ವಸ್ತುವಿಗೆ ವಂದಿಸುವಾಗ ಧ್ವಜವನ್ನು ಭೂಮಿಯ ದಿಕ್ಕಿನೆಡೆಗೆ ಬಗ್ಗಿಸಬಾರದು. ಅಂತೆಯೇ ಬಲವಂತವಾಗಿ ಧ್ವಜಕ್ಕೆ ಮಣ್ಣು ಹಾಗೂ ನೀರಿನ ಸ್ಪರ್ಶವಾಗಬಾರದು.

ವಾಹನದ ಮೇಲೆ ಧ್ವಜವನ್ನು ಹಾರಿಸುವಾಗ ವಾಹನದ ಬ್ಯಾನೆಟಿನ ಮೇಲೆ ಧ್ವಜವನ್ನು ಹಾರಿಸಬೇಕು ಎಂದು ಸಂಹಿತೆ ತಿಳಿಸುತ್ತದೆ.

ಕೇಸರಿ ಪಟ್ಟಿಯು ಕೆಳಗೆ ಬರುವಂತೆ ಧ್ವಜಾರೋಹಣ ಮಾಡಬಾರದು. ಧ್ವಜಾರೋಹಣ ಮಾಡುವಾಗ ಹರಿಯದಂತೆ ಕಟ್ಟಬೇಕು. ಅಲಂಕಾರಕ್ಕಾಗಿ ಉಪಯೋಗಿಸಬಾರದು. ಧ್ವಜವನ್ನು ಮನೆಯ ಪರದೆಗಾಗಿ ಉಪಯೋಗಿಸಬಾರದು. ಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅಂತೆಯೇ ರಾಷ್ಟ್ರಧ್ವಜವನ್ನು ಕರವಸ್ತ್ರದ ಮೇಲೆ ಬಿಡಿಸಬಾರದು. ಧ್ವಜದ ಮೇಲೆ ಯಾವುದೇ ಬರವಣಿಗೆ, ಜಾಹೀರಾತು ಇರಬಾರದು. ಅಂತೆಯೇ ಧ್ವಜಸ್ತಂಭದ ಮೇಲೆಯೂ ಯಾವುದೇ ಜಾಹೀರಾತು ಹಾಕಬಾರದು.

ಕೇವಲ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಧ್ವಜದಲ್ಲಿ ಹೂವು, ಹೂವಿನ ಎಸಳನ್ನು ಕಟ್ಟಿ ಧ್ವಜಾರೋಹಣವನ್ನು ಮಾಡಬೇಕು. ರಾಷ್ಟ್ರಧ್ವಜವನ್ನು ಏರಿಸುವಾಗ ಅಥವಾ ಇಳಿಸುವಾಗ ಉಪಸ್ಥಿತರು ಕವಾಯತಿನ ‘ಅಟೆಂನ್ಶನ್‌’ (ಸಾವಧಾನ) ಸ್ಥಿತಿಯಲ್ಲಿರಬೇಕು.

ಧ್ವಜಾರೋಹಣವಾದಾಗ ಸಮವಸ್ತ್ರ ಧರಿಸಿರುವ ಸರ್ಕಾರಿ ಅಧಿಕಾರಿಗಳು ಧ್ವಜಕ್ಕೆ ಸಲ್ಯೂಟ್‌ (ವಂದನೆ) ಮಾಡಬೇಕು. ಧ್ವಜವು ಸೈನ್ಯದಳದ ಸೈನಿಕನ ಕೈಯಲ್ಲಿದ್ದರೆ ಆತ ಸಾವಧಾನ ಸ್ಥಿತಿಯಲ್ಲಿ ನಿಂತುಕೊಳ್ಳುವನು. ಪರೇಡ್‌ ವೇಳೆ ಹತ್ತಿರದಿಂದ ಧ್ವಜವು ಹೋಗುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಅದಕ್ಕೆ ವಂದನೆ ಸಲ್ಲಿಸಬೇಕು.

ಧ್ವಜದ ದುರುಪಯೋಗವನ್ನು ತಡೆಯಲು ಸ್ಪಷ್ಟ ನಿಲುವನ್ನು ಹೊಂದಲಾಗಿದೆ. ಅದರಂತೆ ರಾಜಕೀಯ ವ್ಯಕ್ತಿ, ಕೇಂದ್ರೀಯ ಸೈನ್ಯ ದಳಕ್ಕೆ ಸಂಬಂಧಿತ ವ್ಯಕ್ತಿಯ ಅಂತಿಮ ಯಾತ್ರೆಯ ಹೊರತು ಬೇರೆ ಯಾವ ಸಂದರ್ಭದಲ್ಲಿಯೂ ರಾಷ್ಟ್ರಧ್ವಜವನ್ನು ಉಪಯೋಗಿಸಬಾರದು. ಧ್ವಜವನ್ನು ಯಾವುದೇ ವಾಹನ, ರೈಲು, ಹಡಗಿನ ಮೇಲೆ ಹಚ್ಚುವಂತಿಲ್ಲ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !