ಭಾನುವಾರ, ಜನವರಿ 26, 2020
29 °C
ಎಚ್.ಡಿ.ಕೋಟೆ: ಪಟ್ಟಣದ ಆದರ್ಶ ಶಾಲೆ

ಬಿಸಿಯೂಟ ಸೇವನೆ: 30 ವಿದ್ಯಾರ್ಥಿಗಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ಪಟ್ಟಣದ ಆದರ್ಶ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ತೀವ್ರ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಾರು 30 ಮಕ್ಕಳು ಅಸ್ವಸ್ಥರಾಗಿದ್ದು, ಸುಜಾತಾ, ಅಬ್ರಾರ್, ನವೀನ್‌ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಗಿದೆ.

ಘಟನೆ ವಿವರ: 6ರಿಂದ 10ನೇ ತರಗತಿಯವರೆಗೆ ಓದುತ್ತಿರುವ 300 ಮಕ್ಕಳಿಗೆ ಎಂದಿನಂತೆ ಬಿಸಿ ಊಟವನ್ನು ಶಾಲೆಯ ಮುಖ್ಯಶಿಕ್ಷಕರ ನೇತೃತ್ವದಲ್ಲಿ ಅಡಿಗೆ ಸಿಬ್ಬಂದಿ ತಯಾರಿಸಿದ್ದರು. ಪ್ರಥಮ ಪಂಕ್ತಿಯಲ್ಲಿ 6ನೇ ಮತ್ತು ಏಳನೇ ತರಗತಿಯ ಸುಮಾರು 30 ಮಕ್ಕಳು  ಊಟ ಸೇವಿಸಿದ್ದಾರೆ.

ಊಟ ಸೇವಿಸುತ್ತಿದ್ದಂತೆಯ ಮಕ್ಕಳು ವಾಂತಿ ಮಾಡಿಕೊಂಡು ತೀವ್ರ ಹೊಟ್ಟೆನೋವು ಎಂದು ಚೀರಾಡತೊಡಗಿದರು. ಕೂಡಲೇ, ಶಿಕ್ಷಕರು ಆಟೊದಲ್ಲಿ ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರು. ಊಟ ಮುಗಿಸಿ ಮನೆಗೆ ತೆರಳಿದ್ದ ಕೆಲವು ಮಕ್ಕಳು ಪೋಷಕರೊಂದಿಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಘಟನೆಯಿಂದ ಪೋಷಕರು ತೀವ್ರ ಆತಂಕಗೊಂಡು ಆಸ್ಪತ್ರೆಗೆ ದೌಡಾಯಿಸಿ ತಮ್ಮ ಮಕ್ಕಳ ಯೋಗ ಕ್ಷೇಮ ವಿಚಾರಿಸಲು ಮುಂದಾದರು. ಇದರಿಂದ ಆಸ್ಪತ್ರೆಯ ಒಳಾಂಗಣ ತುಂಬಿಕೊಂಡು ಮಕ್ಕಳಿಗೆ ವೈದ್ಯರು ಚಿಕಿತ್ಸೆ ನೀಡಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ನಂತರ ಸ್ಥಳಕ್ಕೆ ಬಂದ ಪೊಲೀಸರ ನೆರವಿನಿಂದ ಪೋಷಕರನ್ನು ನಿಯಂತ್ರಿಸಿ ಮಕ್ಕಳಿಗೆ ಚಿಕಿತ್ಸೆ ನೀಡಿದರು. 

ಸ್ಥಳದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಟಿ.ರವಿ, ತಾಲ್ಲೂಕು ಆಡಳಿತಾಧಿಕಾರಿ ಡಾ.ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಸುಹಾಸಿನಿ ಇದ್ದರು.

ಅಡುಗೆ ಪದಾರ್ಥ ವಶಕ್ಕೆ: ಬಿಸಿಯೂಟ ತಯಾರಿಸಿದ ಪದಾರ್ಥಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ, ಸಾಂಬಾರಿಗೆ ಬಳಸಿದ್ದ ಬೇಳೆಯಲ್ಲಿ ಅಪಾರ ಪ್ರಮಾಣದ ಹುಳಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಎಲ್ಲಾ ಅಡುಗೆ ಪದಾರ್ಥಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

‘ತಪ್ಪು ಯಾರದೆಂದು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಇಂಥ ಘಟನೆ ನಡೆಯದಂತೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಹಶೀಲ್ದಾರ್ ಆರ್. ಮಂಜುನಾಥ್ ಸೂಚಿಸಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಪಾಂಡುರಂಗ, ಕ್ಷೇತ್ರಶಿಕ್ಷಣಾಧಿಕಾರಿ ರೇವಣ್ಣ, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು