ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಾರೋಗ್ಯಕ್ಕಾಗಿ 1200ಕ್ಕೂ ಹೆಚ್ಚು ಘಟಕ’

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಸ್ಪಂದಿಸಿದ ರೈಲ್ವೆ ಇಲಾಖೆ: ಸಂಸದ ಪ್ರತಾಪ ಸಿಂಹ
Last Updated 7 ಅಕ್ಟೋಬರ್ 2021, 12:47 IST
ಅಕ್ಷರ ಗಾತ್ರ

ಮೈಸೂರು: ‘ಜನರ ಆರೋಗ್ಯಕ್ಕಾಗಿ ದೇಶದಾದ್ಯಂತ 1200ಕ್ಕೂ ಹೆಚ್ಚು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಒಂದೇ ದಿನ ಸೇವೆಗೆ ಸಮರ್ಪಿಸಲಾಗುತ್ತಿದೆ’ ಎಂದು ಸಂಸದ ಪ್ರತಾಪ ಸಿಂಹ ಗುರುವಾರ ಇಲ್ಲಿ ತಿಳಿಸಿದರು.

ನಗರದ ಯಾದವಗಿರಿಯಲ್ಲಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ₹ 80 ಲಕ್ಷ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್’ 500 ಎಲ್‌ಪಿಎಂ (ಲೀಟರ್ ಪ್ರತಿ ನಿಮಿಷಕ್ಕೆ) ಆಮ್ಲಜನಕ ಉತ್ಪಾದಕ ಘಟಕವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

‘ಡಿಆರ್‌ಡಿಒ ತಂತ್ರಜ್ಞಾನ ಬಳಸಿಕೊಂಡು ಈ ಎಲ್ಲ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜನರ ಮೇಲಿನ ಪ್ರೀತಿ, ಆರೋಗ್ಯ ಕಾಳಜಿಗಾಗಿ ಪ್ರಧಾನಿ ಮೋದಿ ಈ ಬೃಹತ್‌ ಅಭಿಯಾನ ಕೈಗೊಂಡಿದ್ದಾರೆ’ ಎಂದು ಸಂಸದರು ಹೇಳಿದರು.

‘ದೇಶ ಕೋವಿಡ್‌ ಸಂಕಷ್ಟ ಎದುರಿಸಿದ ಕಾಲಘಟ್ಟದಲ್ಲಿಭಾರತೀಯ ರೈಲ್ವೆಯು ಸ್ಮರಣಾರ್ಹ ಸೇವೆ ಒದಗಿಸಿದೆ’ ಎಂದು ಪ್ರತಾಪ ಸಿಂಹ ಪ್ರಶಂಸಿಸಿದರು.

ವಿಭಾಗೀಯ ರೈಲ್ವೆ ವ್ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾತನಾಡಿ, ‘ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿನ ಭಾರತೀಯ ರೈಲ್ವೆಯ ಕೊಡುಗೆಗಳನ್ನು ಇತಿಹಾಸ ಖಂಡಿತವಾಗಿಯೂ ನೆನಪಿಸಿಕೊಳ್ಳಲಿದೆ’ ಎಂದರು.

‘ರೈಲ್ವೆಯಿಂದ ಚಲಾಯಿಸಲ್ಪಟ್ಟ ಆಮ್ಲಜನಕ ಎಕ್ಸ್‌ಪ್ರೆಸ್ ರೈಲುಗಳು ಕೋವಿಡ್‌ನಿಂದ ಬಳಲುತ್ತಿದ್ದ ಅಸಂಖ್ಯಾತ ಜನರ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ವಿವಿಧ ರಾಜ್ಯಗಳಿಗೆ 20 ಸಾವಿರ ಟನ್‌ಗಳಷ್ಟು ವೈದ್ಯಕೀಯ ದ್ರವ ಆಮ್ಲಜನಕವನ್ನು ರೈಲ್ವೆ ಸಾಗಿಸಿತು’ ಎಂದು ಹೇಳಿದರು.

‘101 ಹಾಸಿಗೆಗಳ ಮೈಸೂರಿನ ರೈಲ್ವೆ ಆಸ್ಪತ್ರೆಯು, 74 ಹಾಸಿಗೆಗಳನ್ನು ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಮೀಸಲಿಟ್ಟಿದೆ. 101 ಹಾಸಿಗೆಗಳು ‘ಆಮ್ಲಜನಕ ಹಾಸಿಗೆ’ಗಳಾಗಿ ಮಾರ್ಪಟ್ಟಿವೆ. ವಾತಾವರಣದ ಗಾಳಿಯನ್ನು ಹೀರಿಕೊಳ್ಳುವ ಮೂಲಕ ತಕ್ಷಣ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸಬಲ್ಲ ಘಟಕವನ್ನು ಇಂದು ಉದ್ಘಾಟಿಸಲಾಗಿದೆ. ಇದು ಪರಿಸರ ಸ್ನೇಹಿಯೂ ಆಗಿದೆ’ ಎಂದು ಅಗರ್ವಾಲ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT