ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಕ್ಕೆ 5,485 ಪೊಲೀಸರ ನಿಯೋಜನೆ, ಹೆಚ್ಚಿನ ನಿಗಾ: ಸಿಒಪಿ ಡಾ.ಚಂದ್ರಗುಪ್ತ

Last Updated 24 ಸೆಪ್ಟೆಂಬರ್ 2022, 11:19 IST
ಅಕ್ಷರ ಗಾತ್ರ

ಮೈಸೂರು: ‘ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ಅಗತ್ಯವಾದ ಭದ್ರತೆ ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

‘ಮೈಸೂರು ದಸರಾ ಮಹೋತ್ಸವವನ್ನು ಸೆ.26ರಿಂದ ಅ.5ರವರೆಗೆ ಆಯೋಜಿಸಲಾಗಿದ್ದು, ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ನಿಗಾ ವಹಿಸಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮೈಸೂರು ನಗರದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ನಗರದ 1,255, ಹೊರ ಜಿಲ್ಲೆಗಳಿಂದ 3,580 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 650 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 5,485 ಪೊಲೀಸರನ್ನು ಬಂದೋಬಸ್ತ್‌ಗೆ ಬಳಸಲಾಗುತ್ತಿದೆ’ ಎಂದು ವಿವರಿಸಿದರು.

ಮೊಬೈಲ್ ಕಮಾಂಡ್ ಸೆಂಟರ್ ಬಸ್

‘ಮೊಬೈಲ್ ಕಮಾಂಡ್ ಸೆಂಟರ್ ಬಸ್ ಅನ್ನು ಬಳಸಲಾಗುತ್ತಿದೆ. ಇದರಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದೆ. ಬಾಡಿ ವೋರ್ನ್‌ ಕ್ಯಾಮೆರಾಗಳಿದ್ದು, ಅವು ಲಾಂಗ್ ಡಿಸ್ಟೆನ್ಸ್ ಫೋಟೊಗ್ರಫಿ ಮತ್ತು ವಿಡಿಯೊಗ್ರಫಿ ಮಾಡುವ ತಂತ್ರಜ್ಞಾನ ಹೊಂದಿವೆ’ ಎಂದರು.

‘ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿ ವೋರ್ನ್‌ ಕ್ಯಾಮೆರಾ ವಿತರಿಸಲಾಗುತ್ತದೆ. ಅಲ್ಲಿನ ಸಂಪೂರ್ಣ ದೃಶ್ಯಾವಳಿ ಈ ಕ್ಯಾಮೆರಾಗಳಲ್ಲಿ ಮತ್ತು ಮೊಬೈಲ್ ಕಮಾಂಡ್ ಸೆಂಟರ್‌ನಲ್ಲಿ ದಾಖಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾಗಳಿಂದ ಕಣ್ಗಾವಲು ಮಾಡಲಾಗುವುದು’ ಎಂದು ವಿವರಿಸಿದರು.

‘ದಸರೆಯ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೊಲೀಸರು ಎದ್ದು ಕಾಣುವ ರೀತಿಯಲ್ಲಿ ಎತ್ತರದ ಅಂಕಣಗಳನ್ನು ನಿರ್ಮಿಸಲಾಗುವುದು. ಅದರ ಮೇಲೆ ಪೊಲೀಸರನ್ನು ಮೆಗಾಫೋನ್ ಸಮೇತ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಅಪರಾಧಗಳನ್ನು ತಡೆಗಟ್ಟಲು ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ತಿಳಿಸಿದರು.

ದಿನವಿಡೀ ಗಸ್ತು

‘ನಗರದ ಲಾಡ್ಜ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ನುರಿತ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ದಸರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಪೊಲೀಸ್ ವ್ಯವಸ್ಥೆ ಸ್ಥಳಕ್ಕೆ ತೆರಳಲು ಉತ್ತಮವಾದ ಗಸ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ಮುಂಚಿತವಾಗಿಯೇ 12 ಅಗ್ನಿಶಾಮಕ ದಳ ಮತ್ತು 8 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ’ ಎಂದರು.

‘ಈಗಾಗಲೇ ವಿವಿಧೆಡೆ ಸಾರ್ವಜನಿಕರು ಅಳವಡಿಸಿಕೊಂಡಿರುವ 13,140 ಸಿಸಿ ಟಿವಿ ಕ್ಯಾಮೆರಾಗಳಿವೆ. ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪದ ಮೈದಾನ ಮೆರವಣಿಗೆ ಮಾರ್ಗ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ 110 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ದಿನದ 24 ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ನಗರದಲ್ಲಿ ಈಗಾಗಲೇ ರೌಡಿಗಳ ಪರೇಡ್ ನಡೆಸಿ ಅಹಿತಕರ ಘಟನೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಗರುಡಾ ಫೋರ್ಸ್ ಮತ್ತು ಎಎನ್ಎಫ್ ತಂಡಗಳನ್ನೂ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT