ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮುಡಾ ಸಭೆ; ಸಿಗಲಿದೆಯೇ ಬಡಾವಣೆಗೆ ಒತ್ತು?

ಜನಸಾಮಾನ್ಯರ ಅರ್ಜಿಗಳು ಕಾರ್ಯಸೂಚಿಯಲ್ಲಿ ಸೇರಲಿವೆಯೇ? ನಿರ್ದಿಷ್ಟ ಮಾನದಂಡ ನಿಗದಿಗೆ ಆಗ್ರಹ
Last Updated 6 ನವೆಂಬರ್ 2020, 2:49 IST
ಅಕ್ಷರ ಗಾತ್ರ
ADVERTISEMENT
""
""

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಡಳಿತ ಮಂಡಳಿ ಸಭೆ ಶುಕ್ರವಾರ ಇಲ್ಲಿ ನಡೆಯಲಿದ್ದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊಸ ಬಡಾವಣೆಗಳ ನಿರ್ಮಾಣ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜೊತೆಗೆ, ಸಮಸ್ಯೆಗಳ ಇತ್ಯರ್ಥಕ್ಕಾಗಿ ಹಲವಾರು ವರ್ಷಗಳಿಂದ ಪ್ರಾಧಿಕಾರಕ್ಕೆ ಸಲ್ಲಿಸಿರುವ ವಿಷಯಗಳನ್ನು ಸಭೆಯ ಕಾರ್ಯಸೂಚಿಯಲ್ಲಿ ಆದ್ಯತೆ ಮೇರೆಗೆ ಸೇರಿಸಿ ಚರ್ಚಿಸುವಂತೆ ನಿವೇಶನದಾರರು ಹಾಗೂ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆಯೂ ಸಭೆ ಚರ್ಚಿಸುವ ನಿರೀಕ್ಷೆ ಇದೆ.

ಎಚ್‌.ವಿ.ರಾಜೀವ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ಸಭೆ ಇದಾಗಿದ್ದು, 400ಕ್ಕೂ ಅಧಿಕ ವಿಷಯಗಳನ್ನು (ಅಜೆಂಡಾ) ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಇವುಗಳಲ್ಲಿ ಸದಸ್ಯರು ಪಟ್ಟಿ ಮಾಡಿರುವ ವಿಷಯಗಳೇ ಹೆಚ್ಚು ಇವೆ ಎಂಬುದು ಗೊತ್ತಾಗಿದೆ.

‘ಪ್ರಾಧಿಕಾರದ ಸದಸ್ಯರು ನೀಡುವ ಪತ್ರಗಳು, ಶಿಫಾರಸುಗಳೇ ಅಜೆಂಡಾ ಪಟ್ಟಿಯಲ್ಲಿ ತುಂಬಿ ಹೋಗುತ್ತಿವೆ. ಆ ಬಗ್ಗೆ ಮಾತ್ರ ಚರ್ಚೆ ನಡೆಯುತ್ತದೆ. ಜನಸಾಮಾನ್ಯರ ಸಮಸ್ಯೆಗಳು ಅಜೆಂಡಾದಲ್ಲಿ ಸೇರುತ್ತಲೇ ಇಲ್ಲ. ಅವುಗಳಿಗೆ ಆದ್ಯತೆಯೂ ಸಿಗುತ್ತಿಲ್ಲ. ಸದಸ್ಯರಿಗೆ ಶಿಫಾರಸು ಪತ್ರ ನೀಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಹಿರಿಯ ನಾಗರಿಕರು ಅಲವತ್ತುಕೊಂಡಿದ್ದಾರೆ.

ಹೀಗಾಗಿ, ಅರ್ಜಿ ಗಳನ್ನು ಆದ್ಯತೆ ಮೇರೆಗೆ, ಮಹತ್ವ ಆಧರಿಸಿ ಅಥವಾ ಹಿರಿತನದ ಮೇರೆಗೆ ಕೈಗೆತ್ತಿಕೊಂಡು ಚರ್ಚಿಸಲು ಸಭೆಯಲ್ಲಿ ನಿರ್ದಿಷ್ಟ ಮಾನದಂಡ ರೂಪಿಸುವಂತೆಯೂ ಒತ್ತಾಯಿಸಿದ್ದಾರೆ.

‘ದಟ್ಟಗಳ್ಳಿಯಲ್ಲಿ ಬದಲಿ ನಿವೇಶನ ಕೋರಿ ನಾಲ್ಕು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ಆದರೆ, ಇದುವರೆಗೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹಲವು ವಿಚಾರಗಳನ್ನು ಮುಂದೂಡುತ್ತಾ ವಿಳಂಬ ಮಾಡಲಾಗಿದೆ. ಮುಂದೂಡಿಕೆಗೆ ಅಥವಾ ತಿರಸ್ಕಾರಕ್ಕೆ ಯಾವುದೇ ಕಾರಣ ಕೂಡ ನೀಡುತ್ತಿಲ್ಲ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ಇತ್ಯರ್ಥಕ್ಕೆ ಪ್ರಯತ್ನ: ‘ಮಾರ್ಚ್‌ನಿಂದ ಜನಸಾಮಾನ್ಯರ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಖಾಸಗಿ ಬಡಾವಣೆ, ನಿವೇಶನ ಹಂಚಿಕೆ, ಭೂಸ್ವಾಧೀನ ಸಂಬಂಧಿಸಿದ ವಿಷಯಗಳು ಸಾಕಷ್ಟಿವೆ. ಪ್ರಾಧಿಕಾರಕ್ಕೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವ ವಿಚಾರ ಇತ್ಯರ್ಥ ವಾಗಬೇಕಿದೆ. ಜನಸಾಮಾನ್ಯರು ಸಲ್ಲಿಸಿದ ವಿಷಯಗಳನ್ನು ಮುಂದಿನ ಸಭೆಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಡಿ.ಬಿ.ನಟೇಶ್

ಮೈಸೂರು ಅಭಿವೃದ್ಧಿ ವಿಚಾರದ ಬಗ್ಗೆ ಸಭೆಯಲ್ಲಿ ನಡೆಯುವ ಚರ್ಚೆ ಹಾಗೂ ನಿರ್ಧಾರಗಳು ತಮಗೂ ಗೊತ್ತಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾರ್ಚ್‌ 7ರಂದು ಅಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ನೇತೃತ್ವದಲ್ಲಿ ಸಭೆ ನಡೆದಿತ್ತು. ಬಳಿಕ ಸೆ.14ರಂದು ರಾಜೀವ್‌ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಆಡಳಿತಾತ್ಮಕ ವಿಚಾರಗಳಿಗೆ ಒತ್ತು ನೀಡಲಾಗಿತ್ತು. ಆ ಸಭೆಯಲ್ಲಿ ವಿಷಯಾಧಾರಿತ ಚರ್ಚೆ ಆಗಿರಲಿಲ್ಲ.

80 ಸಾವಿರ ಅರ್ಜಿ ಬಾಕಿ

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಪ್ರಾಧಿಕಾರ ವತಿಯಿಂದ ನಿರ್ಮಿಸಬೇಕಿರುವ ಆರು ಬಡಾವಣೆಗಳ ನಿರ್ಮಾಣ ಸಂಬಂಧ ಇನ್ನೂ ನಿರ್ಣಯ ಕೈಗೊಂಡಿಲ್ಲ. ನಿವೇಶನಕ್ಕಾಗಿ ಸಾರ್ವಜನಿಕರು 1996ರಿಂದ ಸಲ್ಲಿಸಿದ 80 ಸಾವಿರ ಅರ್ಜಿಗಳು ಬಾಕಿ ಇವೆ.

‘2005ರಿಂದ ಐದಾರು ಬಡಾವಣೆಗಳಿಗೆ ಪ್ರಾಥಮಿಕ ಅಧಿಸೂಚನೆ ಆಗಿದ್ದರೂ ಅಂತಿಮ ಅಧಿಸೂಚನೆ ಆಗಿಲ್ಲ. ಈಗ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೊಸದಾಗಿ ಅಧಿಸೂಚನೆ ಹೊರಡಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ತಿಂಗಳಲ್ಲಿ ನಾಲ್ಕು ಸಭೆ ನಡೆಸಿ’ ‌

400ಕ್ಕೂ ಅಧಿಕ ವಿಷಯಗಳನ್ನು (ಅಜೆಂಡಾ) ಪಟ್ಟಿಯಲ್ಲಿ ಇರುವುದರಿಂದ ನಾಲ್ಕು ಸಭೆ ನಡೆಸಿ ಇತ್ಯರ್ಥಗೊಳಿಸಬೇಕು ಎಂದು ಪ್ರಾಧಿಕಾರ ಸದಸ್ಯ, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ ಸಲಹೆ ನೀಡಿದ್ದಾರೆ.

ಆರ್‌.ಧರ್ಮಸೇನ

‘ಪ್ರತಿ ಸಭೆಯಲ್ಲಿ 100 ವಿಷಯ ಕೈಗೆತ್ತಿಕೊಂಡು ಇತ್ಯರ್ಥಪಡಿಸಬೇಕು. ಅದಕ್ಕೆ ನಾಲ್ಕು ದಿನ ನಿಗದಿಪಡಿಸಬೇಕು. ಇಷ್ಟೂ ವಿಚಾರಗಳು ಮುಗಿಯುವ ವರೆಗೆ ಹೊಸದಾಗಿ ಸಭೆ ಕರೆಯಬಾರದು’ ಎಂದಿದ್ದಾರೆ.

********

ಪ್ರಾಧಿಕಾರದ ಸದಸ್ಯರು ಸಲ್ಲಿಸಿದ ವಿಷಯಗಳನ್ನು ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ. ಹೀಗಾಗಿ, ನಾನು ಅಸಹಾಯಕ. ಮುಂದಿನ ಸಭೆಯಲ್ಲಿ ಸೇರಿಸಲಾಗುವುದು
-ಡಿ.ಬಿ.ನಟೇಶ್‌, ಆಯುಕ್ತ, ಮುಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT