ಶುಕ್ರವಾರ, ಅಕ್ಟೋಬರ್ 18, 2019
27 °C
ಸ್ಕೌಟ್ಸ್ ಅಂಡ್‌ ಗೈಡ್ಸ್‌ ಮೈದಾನದಲ್ಲಿ ನಾಟಿಕೋಳಿ ಸಾರು – ರಾಗಿಮುದ್ದೆ ಉಣ್ಣುವ ಸ್ಪರ್ಧೆ

56 ಸೆಕೆಂಡಲ್ಲಿ 3 ಮುದ್ದೆ ಮೆದ್ದ ವೆಂಕಿ

Published:
Updated:
Prajavani

ಮೈಸೂರು: ಶುರು ಮಾಡಿ ಎಂದು ಹೇಳಿದ 56 ಸೆಕೆಂಡುಗಳಲ್ಲಿ 3 (200 ಗ್ರಾಂ) ಮುದ್ದೆಗಳನ್ನು ಕೋಳಿಸಾರಿನೊಂದಿಗೆ ವೆಂಕಿ (ವೆಂಕಟೇಶ್‌) ತಿಂದು ಮುಗಿಸಿ ಮೊದಲ ಬಹುಮಾನ ಗೆದ್ದರು.

ನಗರದ ಸ್ಕೌಟ್ಸ್‌ ಅಂಡ್ ಗೈಡ್ಸ್‌ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಟಿಕೋಳಿ ಸಾರು ಹಾಗೂ ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಉರುಳಿಕ್ಯಾತನಹಳ್ಳಿ ಗ್ರಾಮದ ವಾಹನ ಚಾಲಕ, 28 ವರ್ಷ ವಯಸ್ಸಿನ ವೆಂಕಟೇಶ್‌, ಮುದ್ದೆ ಮೆದ್ದು ಎದ್ದು ನಿಂತಾಗ ಅವರ ಗೆಳೆಯರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು.

1 ನಿಮಿಷ 20 ಸೆಕುಂಡುಗಳಲ್ಲಿ 3 ಮುದ್ದೆ ತಿಂದು ಮುಗಿಸಿದ ಸರಸ್ವತಿಪುರಂನ ಶಿವಾನಂದ ದ್ವಿತೀಯ ಹಾಗೂ 1 ನಿಮಿಷ 36 ಸೆಕೆಂಡುಗಳಲ್ಲಿ ಮುದ್ದೆ ಸವಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗುನ್ನಳ್ಳಿ ಗ್ರಾಮದ ಶಿವಣ್ಣ ತೃತೀಯ ಬಹುಮಾನ ಪಡೆದರು. ಶಿವಾನಂದ ಅವರು ಕೃಷಿಕರು ಜತೆಗೆ ವಾಹನ ಚಾಲಕರು. ಶಿವಣ್ಣ ಅವರು ಕೋಲಾರ ಜಿಲ್ಲೆಯ ಕೈವಾರದಲ್ಲಿ ಶ್ರೀಗುರು ಭವನ ಹೋಟೆಲ್‌ ನಡೆಸುತ್ತಾರೆ.

ರಾಗಿರೊಟ್ಟಿ ಹಾಗೂ ಹುಚ್ಚೆಳ್ಳು ಚಟ್ನಿ ಸಿದ್ಧಪಡಿಸುವ ಸ್ಪರ್ಧೆಯಲ್ಲಿ 10 ಜೋಡಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ₹ 1,500 ಸುಚಿತ್ರಾ– ಮಹೇಶರಾಜೇ ಅರಸ್‌ ದಂಪತಿ, ದ್ವಿತೀಯ ಬಹುಮಾನ ₹ 1 ಸಾವಿರ ಮಧು– ನಾಗರಾಜ್‌ ಉಮದಿ ಹಾಗೂ ತೃತೀಯ ಬಹುಮಾನವಾಗಿ ₹ 1ವನ್ನು ಹರ್ಷಿತಾ – ರಾಜಭಕ್ಷಿ ಪಡೆದರು.

ಸೋಮವಾರ ಏರ್ಪಡಿಸಿದ್ದ ಅಕ್ಕಿರೊಟ್ಟಿ–ಎಣಗಾಯಿ ಮಾಡುವ ಸ್ಪರ್ಧೆಲ್ಲೂ ಸುಚಿತ್ರಾ ಅವರು ಪ್ರಥಮ ಬಹುಮಾನ ಪಡೆದಿದ್ದರು.

ದ್ವಿತೀಯ ಬಹುಮಾನ ಪಡೆದ ಹಿನಕಲ್‌ನ ಮಧು ಉಮದಿ ಅವರು ಸೋಮವಾರ ನಡೆದ ಅಕ್ಕಿರೊಟ್ಟಿ –ಎಣಗಾಯಿ ಮಾಡುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗೆದ್ದಿದ್ದರು.

Post Comments (+)