ಭಾನುವಾರ, ಜನವರಿ 19, 2020
°C
ನಾಳೆ ಕಲಾಮಂದಿರದಲ್ಲಿ ಮೂರು ಸಿ.ಡಿಗಳ ಬಿಡುಗಡೆ

ಭಾವಗೀತೆಗಳಿಗೆ ಬರಗಾಲ– ಜಯಪ್ಪ ಹೊನ್ನಾಳಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಸ್ತುತ ಭಾವಗೀತೆಗಳಿಗೆ ಬರಗಾಲ ಸೃಷ್ಟಿಯಾಗಿದೆ ಎಂದು ಕವಿ ಜಯಪ್ಪ ಹೊನ್ನಾಳಿ ಬೇಸರ ವ್ಯಕ್ತಪಡಿಸಿದರು.

ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ಕ್ಷೇತ್ರದಲ್ಲಿದ್ದಾರೆ. ಭಾವಗೀತೆಯ ಕ್ಷೇತ್ರದಲ್ಲಿ ಒಂದು ವಿಧದ ಮರುಭೂಮಿ ಕಾಣುತ್ತಿದೆ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿ.ಡಿಯನ್ನು ಹಣ ಕೊಟ್ಟು ಖರೀದಿ ಮಾಡುವ ಪ್ರೌಢ ಕೇಳುಗರ ಕೊರತೆ ಇದೆ. ಬಹುತೇಕ ಮಂದಿ ವಾಟ್ಸ್‌ಆ್ಯಪ್‌ನಲ್ಲಿ ಹಾಡು ಕಳುಹಿಸಿ ಎನ್ನುತ್ತಾರೆ. ಲಕ್ಷಾಂತರ ಹಣ ವ್ಯಯಿಸಿ ಭಾವಗೀತೆ ಸಿ.ಡಿ ಮಾಡಿದರೆ ಒಂದೇ ಒಂದು ರೂಪಾಯಿಯೂ ವಾಪಸ್ ಬರುವುದಿಲ್ಲ ಎಂದು ಹೇಳಿದರು.

ಸದ್ಯ, ಮೂರು ಭಾವಗೀತೆಗಳ ಸಿ.ಡಿಯನ್ನು ರೂಪಿಸಿದ್ದು, ಕಲಾಮಂದಿರದಲ್ಲಿ ಡಿ. 14ರಂದು ಸಂಜೆ 6 ಗಂಟೆಗೆ ಅವು ಬಿಡುಗಡೆಗೊಳ್ಳಲಿವೆ. ಇದಕ್ಕೆ ಸುಮಾರು ₹ 7ರಿಂದ ₹ 8 ಲಕ್ಷ ಖರ್ಚಾಗಿದೆ. ಇನ್ನಾದರೂ ಸಾಂಸ್ಕೃತಿಕ ಲೋಕ ಭಾವಗೀತೆಗಳ ಕುರಿತು ಗಂಭೀರವಾಗಿ ಯೋಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ‘ಮೇಲುಕೋಟೆಯ ವಂಗೀಪುರ ನಂಬೀಮಠದ ಇಳೈಯಾಳ್ವರ್ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಕೆ.ಭೈರವಮೂರ್ತಿ ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಬ್ಬಿನಾಲೆ ವಸಂತ ಭಾರದ್ವಾಜ ಭಾಗವಹಿಸುವರು’ ಎಂದು ಹೇಳಿದರು.

‘ವಿರಹಿ ರಾಧೆ’ ಸಿ.ಡಿಗೆ ಜಯಂತಿ ಭಟ್‌, ‘ಜೀವರಾಗ’ಕ್ಕೆ ಮ್ಯಾಂಡೋಲಿನ್ ಪ್ರಸಾದ್ ಹಾಗೂ ‘ಭಾವ ಬೃಂದಾವನ’ಕ್ಕೆ ರವಿ ಮೂರೂರು ಅವರ ಸಂಗೀತ ನಿರ್ದೇಶನವಿದ್ದು, ಎಲ್ಲ ಸಿ.ಡಿಗಳ ಸಾಹಿತ್ಯ ಜಯಪ್ಪ ಹೊನ್ನಾಳಿ ಅವರದ್ದಾಗಿದೆ ಎಂದು ಹೇಮಗಂಗಾ ಕಾವ್ಯಬಳಗದ ಅಧ್ಯಕ್ಷೆ ಹೇಮಗಂಗಾ ತಿಳಿಸಿದರು.

ಕಾವ್ಯಬಳಗದ ಜತೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾಯಿಸ್ವರಧಾರಾ, ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ, ವಿವಿಧ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಸಹಯೋಗ ನೀಡಿವೆ ಎಂದು ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕಿ ಜಯಂತಿ ಭಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮೂಗೂರು ನಂಜುಂಡಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು