ಬುಧವಾರ, ಮೇ 25, 2022
28 °C

ಪರಿಶಿಷ್ಟರ ಮೇಲೆ ಹಲ್ಲೆ : ಅರಸಿನಕೆರೆ ಗ್ರಾಮ ಉದ್ವಿಗ್ನ- ಎಸ್‌ಪಿ ಚೇತನ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯಪುರ (ಮೈಸೂರು): ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಭಾನುವಾರ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಪಾನಿಪುರಿ ತಿನ್ನಲು ಸವರ್ಣೀಯರ ಕೇರಿಗೆ ಬಂದರು ಎಂಬ ಕಾರಣದಿಂದ ಗ್ರಾಮದ ಪರಿಶಿಷ್ಟರ ಮನೆಗೆ ನುಗ್ಗಿ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಜಯಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಶನಿವಾರ ಆರು ಮಂದಿಯನ್ನು ಬಂಧಿಸಿದ್ದರು. ಪರಿಶಿಷ್ಟರ ಕೇರಿಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದದ್ದನ್ನು ತಡೆಯಲು ಮುಂದಾದ ಶಿವು, ಮಧು, ಗಂಗಾ, ದಿಲೀಪ್ ಮತ್ತು ಸೋಮೇಶ್ ಎಂಬ ಐವರು ಪರಿಶಿಷ್ಟ ಯುವಕರ ವಿರುದ್ಧ ಸವರ್ಣೀಯರು ಪ್ರತಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪರಸ್ಪರರ ವಿರುದ್ಧ ದೂರು ದಾಖಲಾಗಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಲ್ಲೆಗೊಳಗಾದವರು ಮತ್ತು ಘಟನೆಗೆ ಕಾರಣರಾದವರನ್ನು ಚೇತನ್‌ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದರು. ಎರಡೂ ಸಮುದಾಯದ ಮುಖಂಡರನ್ನು ಕರೆದು ಮಾತನಾಡಿದರು.

‘ಹಲ್ಲೆ ನಡೆಯುತ್ತಿದ್ದನ್ನು ನೋಡಿ ಬಿಡಿಸಲು ಮುಂದಾದ ದಲಿತ ಯುವಕರ ಮೇಲೆ ಸವರ್ಣೀಯರು ಪ್ರತಿದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಘಟನೆಯಿಂದ ದಲಿತರಿಗೆ ರಕ್ಷಣೆಯಿಲ್ಲದಾಗಿದೆ. ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಪ್ರಕರಣ ಹಿಂಪಡೆಯಬೇಕು’ ಎಂದು ದಲಿತ ಮುಖಂಡ ಶಿವಣ್ಣ ಮನವಿ ಮಾಡಿಕೊಂಡರು.

‘ಕಿಡಿಗೇಡಿ ಯುವಕರಿಂದ ಅಹಿತಕರ ಘಟನೆ ನಡೆದಿದ್ದು, ಈಗಾಗಲೇ ದಲಿತ ಸಮುದಾಯದವರ ಕ್ಷಮೆಯಾಚಿಸಿದ್ದೇವೆ. ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣ ನೆಲೆಸಲು ಅವಕಾಶ ಮಾಡಿಕೊಡಬೇಕು’ ಎಂದು ಗ್ರಾಮದ ಮುಖಂಡ ಸೋಮಣ್ಣ ಕೋರಿದರು.

ಚೇತನ್‌ ಅವರು ಸ್ಥಳದಿಂದ ತೆರಳಿದ ಬಳಿಕ ಮತ್ತೆ ದಲಿತರು ಮತ್ತು ಸವರ್ಣೀಯ ಮುಖಂಡರ ನಡುವೆ ವಾಗ್ವಾದ ನಡೆಯಿತು. ಗ್ರಾಮದ ಮಾರಮ್ಮ ದೇವಾಲಯದ ಆವರಣದಲ್ಲಿ ಎರಡೂ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡರು. ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ಗುಂಪಿನವರನ್ನು ಚದುರಿಸಿದರು.

ಡಿವೈಎಸ್‌ಪಿ ಡಾ.ಆರ್. ಸುಮಿತ್, ಸಿಪಿಐ ಎಂ.ಮಹೇಶ್, ಜಯಪುರ ಠಾಣೆಯ ಪಿಎಸ್ಐ ಸದಾಶಿವ ತಿಪಾರೆಡ್ಡಿ ಇದ್ದರು.

ರಕ್ಷಿಸುವ ಮಾತಿಲ್ಲ: ಆರ್‌.ಚೇತನ್‌

‘ಘಟನೆಯ ಮಾಹಿತಿ ಪಡೆದಿದ್ದು, ಪ್ರಾಥಮಿಕ ಮಾಹಿತಿ ಆಧರಿಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಭಾಗಿಯಾದವರನ್ನು ರಕ್ಷಿಸುವ ಮಾತೇ ಇಲ್ಲ. ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು. ಯಾರೂ ಭಯಪಡುವ ಅವಶ್ಯವಿಲ್ಲ. ಗ್ರಾಮದಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಮೀಸಲು ಪೊಲೀಸ್‌ ಪಡೆ ನಿಯೋಜಿಸಲಾಗಿದೆ. ಎರಡೂ ಸಮುದಾಯದವರು ಪರಸ್ಪರ ಸೌಹಾರ್ದದಿಂದ ಇರಬೇಕು. ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಚೇತನ್‌ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು