ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪಾಲಿಕೆ ಮೇಯರ್‌ ಗದ್ದುಗೆ ಯಾರಿಗೆ? ಎಚ್‌ಡಿಕೆ ನೇತೃತ್ವದಲ್ಲಿ ಮಹತ್ವದ ಸಭೆ

ರೋಚಕ ತಿರುವಿನತ್ತ ಪಾಲಿಕೆಯ ಮೇಯರ್–ಉಪ ಮೇಯರ್ ಚುನಾವಣೆ: ಸದಸ್ಯರಲ್ಲಿ ತಳಮಳ
Last Updated 23 ಫೆಬ್ರುವರಿ 2021, 3:19 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೂರನೇ ಅವಧಿಯ ಮೇಯರ್‌–ಉಪ ಮೇಯರ್‌ ಚುನಾವಣೆಗೆ ಒಂದು ದಿನವಷ್ಟೇ ಬಾಕಿಯಿದೆ. ಮೇಯರ್‌ ಹುದ್ದೆ ಯಾವ ಪಕ್ಷದವರಿಗೆ ಒಲಿಯಲಿದೆ ಎಂಬುದೇ ಕ್ಷಣ, ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ.

65 ಸದಸ್ಯ ಬಲದ ಪಾಲಿಕೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತವಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯಲು ಮೈತ್ರಿ ಅನಿವಾರ್ಯ. ಕಾಂಗ್ರೆಸ್‌–ಜೆಡಿಎಸ್‌ ನಡುವಿನ ಹಳೆಯ ಮೈತ್ರಿಯೇ ಮುಂದುವರಿಯಲಿದೆಯೋ? ಬಿಜೆಪಿ–ಜೆಡಿಎಸ್‌ ನಡುವೆ ಹೊಸ ಹೊಂದಾಣಿಕೆ ನಡೆಯಲಿದೆಯೋ? ಎಂಬುದೀಗ ಕುತೂಹಲ ಕೆರಳಿಸಿದೆ.

ಪಾಲಿಕೆಯ ಮೇಯರ್‌ ಚುನಾವಣೆ ಅಖಾಡಕ್ಕೆ ಜೆಡಿಎಸ್‌ ಅಗ್ರೇಸರ ಎಚ್‌.ಡಿ. ಕುಮಾರಸ್ವಾಮಿಯೇ ಧುಮುಕುವುದು ಬಹುತೇಕ ಖಚಿತಪಟ್ಟಿದೆ.

ಮಂಗಳವಾರ ಮಧ್ಯಾಹ್ನ 2.30ಕ್ಕೆ ಹೂಟಗಳ್ಳಿಯಲ್ಲಿರುವ ಸೈಲೆಂಟ್‌ ಶೋರ್‌ ಹೋಟೆಲ್‌ನಲ್ಲಿ ಪಾಲಿಕೆ ಸದಸ್ಯರು ಹಾಗೂ ಜೆಡಿಎಸ್‌ ಮುಖಂಡರ ಸಭೆ ಆಯೋಜಿಸಲಾಗಿದೆ. ಕುಮಾರಸ್ವಾಮಿಯೇ ಈ ಸಭೆಯ ಸಾರಥ್ಯ ವಹಿಸಲಿದ್ದಾರೆ. ಮೈತ್ರಿ ಬಗ್ಗೆ ಸದಸ್ಯರಿಂದ ಅಭಿಪ್ರಾಯ ಆಲಿಸುವ ಜೊತೆಗೆ ಮುಖಂಡರೊಟ್ಟಿಗೂ ಚರ್ಚಿಸಲಿದ್ದಾರೆ. ತದ ನಂತರವಷ್ಟೇ ಮೈತ್ರಿಯ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್‌ನ ಮೇಯರ್‌ ಆಕಾಂಕ್ಷಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕ ಸಿ.ಎಸ್‌.ಪುಟ್ಟರಾಜು ಅಣ್ಣನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಸೋಮವಾರ ಮೈಸೂರಿಗೆ ಭೇಟಿ ನೀಡಿದ್ದ ಎಚ್‌.ಡಿ.ದೇವೇಗೌಡರನ್ನು ಜೆಡಿಎಸ್‌ನ ಮೇಯರ್‌ ಆಕಾಂಕ್ಷಿಗಳು ಭೇಟಿಯಾಗಿ ತಮಗೆ ಅವಕಾಶಕೊಡುವಂತೆ ಮೊರೆಯಿಟ್ಟಿದ್ದಾರೆ. ಇದಕ್ಕೆ ದೇವೇಗೌಡರು ಈ ವಿಷಯದಲ್ಲಿ ಕುಮಾರಸ್ವಾಮಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ ಎಂಬುದು ಗೊತ್ತಾಗಿದೆ.

ಕಾರ್ಯಾಧ್ಯಕ್ಷರಿಗೆ ಕಾಂಗ್ರೆಸ್‌ ಸವಾಲು

ಈ ಹಿಂದಿನ ಎರಡು ಚುನಾವಣೆಗೆ ಕೃಷ್ಣ ಬೈರೇಗೌಡ ಕೆಪಿಸಿಸಿಯ ವೀಕ್ಷಕರಾಗಿದ್ದರು. ಈ ಬಾರಿ ವೀಕ್ಷಕರ ಜವಾಬ್ದಾರಿಯನ್ನು ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹೆಗಲಿಗೇರಿಸಿದೆ ಕಾಂಗ್ರೆಸ್‌. ಇದು ನೂತನ ಕಾರ್ಯಾಧ್ಯಕ್ಷರಿಗೆ ಸವಾಲು ಆಗಿದೆ.

ಮೈಸೂರು ನಗರ ಘಟಕ, ಶಾಸಕರು, ಪ್ರಮುಖ ಪದಾಧಿಕಾರಿಗಳೊಂದಿಗೆ ಸೋಮವಾರ ರಾತ್ರಿ ಸಭೆ ನಡೆಸಿದ ಧ್ರುವನಾರಾಯಣ ಪಾಲಿಕೆಯನ್ನು ‘ಕೈ’ ವಶಪಡಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದರು ಎಂಬುದು ಗೊತ್ತಾಗಿದೆ.

ಜೆಡಿಎಸ್‌ ಜೊತೆ ಮೈತ್ರಿ ಮುಂದುವರೆಸಲು ಅಗತ್ಯವಿರುವ ಸಕಲ ಕ್ರಮ ತೆಗೆದುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ಸಮ್ಮತಿಯನ್ನು ಪಡೆದುಕೊಂಡಿದ್ದಾರೆ. ರಾಜ್ಯಸಭೆಗೆ ಎಚ್‌.ಡಿ.ದೇವೇಗೌಡರು ಆಯ್ಕೆಯಾಗಲು ಕಾಂಗ್ರೆಸ್‌ ಸಹಕರಿಸಿದೆ. ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೇ, ಮುಂದಿನ ಎರಡು ಅವಧಿ ಜೆಡಿಎಸ್‌ನವರಿಗೆ ಅಧಿಕಾರ ಸಿಗಲಿದೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಜೆಡಿಎಸ್‌ಗೆ ಯಾವುದೇ ಲಾಭವಾಗಲ್ಲ. ಸಾ.ರಾ.ಮಹೇಶ್‌ ಸೇರಿದಂತೆ ಜೆಡಿಎಸ್‌ನ ಮುಖಂಡರು ಮಾತಿಗೆ ತಪ್ಪಲ್ಲ, ಒಪ್ಪಂದ ಮುರಿದುಕೊಳ್ಳಲ್ಲ ಎಂಬ ವಿಶ್ವಾಸ ಕಾಂಗ್ರೆಸ್ಸಿಗರದ್ದಾಗಿದೆ.

ಕಮಲ ಅರಳಿಸುವ ಕಸರತ್ತು: ಮೊದಲ ಬಾರಿಗೆ ಪಾಲಿಕೆಯಲ್ಲಿ ಕಮಲ ಅರಳಿಸಲಿಕ್ಕಾಗಿ ಬಿಜೆಪಿ ಈಗಾಗಲೇ ವಿಧಾನ ಪರಿಷತ್‌ ಸದಸ್ಯ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ.

ರವಿಕುಮಾರ್‌ ಶನಿವಾರವೇ (ಫೆ.20) ನಗರದ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮೇಯರ್‌ ಸ್ಥಾನ ಪಡೆಯಲಿಕ್ಕಾಗಿ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ಮಂಗಳವಾರ ಮತ್ತೆ ಮೈಸೂರಿಗೆ ಬರಲಿದ್ದು, ಆಯ್ಕೆ ಪ್ರಕ್ರಿಯೆ ಮುಗಿಯುವ ತನಕವೂ ಇಲ್ಲಿಯೇ ಠಿಕಾಣಿ ಹೂಡಲಿದ್ದಾರೆ ಎಂದು ಪಾಲಿಕೆಯ ಬಿಜೆಪಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಕೆ

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನಕ್ಕೆ ನಿಗದಿ ಪಡಿಸಿರುವ ಮೀಸಲಾತಿ ಪ್ರಶ್ನಿಸಿ ಪಕ್ಷೇತರ ಸದಸ್ಯ ಸಮೀವುಲ್ಲಾ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. ಹೈಕೋರ್ಟ್‌ ಯಾವ ಆದೇಶ ನೀಡಲಿದೆ ಎಂಬುದು ಸಹ ಇದೀಗ ತೀವ್ರ ಕುತೂಹಲ ಕೆರಳಿಸಿದೆ ಎಂದು ಪಾಲಿಕೆಯ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಸಮೀವುಲ್ಲಾ ಸಂಪರ್ಕಕ್ಕೆ ಯತ್ನಿಸಿದರೂ ಲಭ್ಯರಾಗಲಿಲ್ಲ.

ಸಚಿವ ಸೋಮಶೇಖರ್‌–ಶಾಸಕ ಸಾ.ರಾ.ಮಹೇಶ್‌ ಚರ್ಚೆ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸಹ ತೀವ್ರ ಉತ್ಸುಕರಾಗಿದ್ದಾರೆ. ಇದಕ್ಕಾಗಿಯೇ ಹಲವು ಕಸರತ್ತು, ತಂತ್ರಗಾರಿಕೆ ನಡೆಸಿದ್ದಾರೆ.

ಸಂಸದ ಪ್ರತಾಪ ಸಿಂಹ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಜೊತೆ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಕಚೇರಿಗೆ ಸೋಮವಾರ ಭೇಟಿ ನೀಡಿದ ಸೋಮಶೇಖರ್‌, ಜೆಡಿಎಸ್‌ ಮುಖಂಡರೊಟ್ಟಿಗೆ ಕೆಲ ಹೊತ್ತು ಚರ್ಚಿಸಿದರು. ಪಾಲಿಕೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಕೆಲ ದಿನಗಳ ಹಿಂದಷ್ಟೇ ಮೈತ್ರಿ ವಿಷಯವಾಗಿ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಸಾ.ರಾ.ಮಹೇಶ್‌ ಕಚೇರಿಗೆ ಭೇಟಿ ನೀಡಿದ್ದರು.

ಕುಮಾರಸ್ವಾಮಿ ಜೊತೆ ಚರ್ಚೆ: ಸಾ.ರಾ.

ಮುಖಂಡರ ಜೊತೆಗಿನ ಮಾತುಕತೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ.ಮಹೇಶ್‌, ‘ಪಾಲಿಕೆಯಲ್ಲಿ ಯಾರಿಗೂ ಬಹುಮತವಿಲ್ಲ. ಯಾರ ಜೊತೆಗಾದರೂ ಮೈತ್ರಿ ಮಾಡಿಕೊಳ್ಳಲೇಬೇಕು. ಈ ಹಿಂದೆ ಕಾಂಗ್ರೆಸ್ ಜೊತೆಗಿದ್ದೆವು. ಆದರೆ ರಾಜ್ಯದಲ್ಲೇ ನಮ್ಮ ಸಂಬಂಧ ಮುರಿದಿದೆ. ಪಾಲಿಕೆಯಲ್ಲಿನ ಹೊಂದಾಣಿಕೆ ಬಗ್ಗೆ ಇದೂವರೆಗೂ ಯಾವುದೇ ನಿರ್ಧಾರವಾಗಿಲ್ಲ’ ಎಂದು ಹೇಳಿದರು.

‘ಬಿಜೆಪಿಯ ಸಚಿವರು, ಸಂಸದರು ಸಹಕಾರ ಕೇಳಿದ್ದಾರೆ. ಅವರ ಮನವಿಯನ್ನು ನಾನು ಹೈಕಮಾಂಡ್‌ಗೆ ತಿಳಿಸುತ್ತೇನೆ. ಕುಮಾರಸ್ವಾಮಿಯವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದರು.

‘ಕಾಂಗ್ರೆಸ್‌ ಜೊತೆ ಕೈ ಜೋಡಿಸಲ್ಲ. ಬಿಜೆಪಿ, ಜೆಡಿಎಸ್‌ಗೆ ಋಣಾನುಬಂಧವಿದೆ. ಕೊಡುವುದು, ತೆಗೆದುಕೊಳ್ಳುವುದು ನಡೆದಿದೆ. ಆದ್ದರಿಂದ ಈ ಬಾರಿ ನಮ್ಮ ಕಡೆಯೂ ಸ್ವಲ್ಪ ಅನುಕಂಪ ತೋರಿ ಎಂದು ಶಾಸಕ ಸಾ.ರಾ.ಮಹೇಶ್‌ಗೆ ಮನವಿ ಮಾಡಿದ್ದೇನೆ. ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT