ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ ಸುಸ್ತಾದ ಕಾರಣ ಆಂಬುಲೆನ್ಸ್‌ ಚಾಲನೆ: ಶವ ಸಾಗಿಸಿದ ಪಾಲಿಕೆ ಅಧಿಕಾರಿ

Last Updated 1 ಮೇ 2021, 21:50 IST
ಅಕ್ಷರ ಗಾತ್ರ

ಮೈಸೂರು: ಚಾಲಕನ ಆರೋಗ್ಯ ಹದಗೆಟ್ಟ ಕಾರಣ, ಪಾಲಿಕೆ ಜನನ ಹಾಗೂ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್‌ ಕ್ರಿಸ್ಟಿ ಅವರು ತಾವೇ ಆಂಬುಲೆನ್ಸ್‌ ಚಾಲನೆ ಮಾಡಿಕೊಂಡು, ಶವ ಸಾಗಿಸಿದ್ದಾರೆ.

ಈ ಘಟನೆ ಬುಧವಾರ ನಡೆದಿದ್ದು, ಅಧಿಕಾರಿಯ ಸಮಯೋಚಿತ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಆ ದಿನ ಕೆಲಸ ಮಾಡುತ್ತಿದ್ದ ಆಂಬುಲೆನ್ಸ್‌ ಚಾಲಕ ರವಿ, ಮಧ್ಯಾಹ್ನದ ವೇಳೆಗೆ ಬಿಸಿಲಿನಿಂದ ಬಳಲಿ ಸುಸ್ತಾಗಿದ್ದಾರೆ. ತಕ್ಷಣಕ್ಕೆ ಯಾರೂ ಚಾಲಕರು ಲಭಿಸಿಲ್ಲ. ಹೀಗಾಗಿ, ಈ ಅಧಿಕಾರಿಯು ಪಿಪಿಇ ಕಿಟ್‌ ಧರಿಸಿ, ತಾವೇ ಆಂಬುಲೆನ್ಸ್‌ಗೆ ಶವವನ್ನು ಹಾಕಿಕೊಂಡು ಚಿತಾಗಾರಕ್ಕೆ ತೆರಳಿದ್ದಾರೆ. ಅಂದು ಸಂಜೆವರೆಗೆ ನಾಲ್ಕು ಟ್ರಿಪ್‌ಗಳಲ್ಲಿ ಶವ ಸಾಗಿಸಿದ್ದಾರೆ.

‘ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕ ರವಿ ಅವರನ್ನು ಮನೆಗೆ ಕಳುಹಿಸಿದೆ. ಅಂದು ಕೆ.ಆರ್‌.ಆಸ್ಪತ್ರೆಯಲ್ಲಿ ಹೆಚ್ಚು ಮೃತ ದೇಹಗಳು ಇದ್ದವು. ಹೊರಗೆ, ಮೃತರ ಕುಟುಂಬದವರು ಕೂಡ ಕಾಯುತ್ತಿದ್ದರು. ಹೀಗಾಗಿ, ಈ ಕೆಲಸಕ್ಕೆ ಮುಂದಾದೆ’ ಎಂದು ಅನಿಲ್‌ ಕ್ರಿಸ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೋವಿಡ್‌ ಮೊದಲ ಅಲೆ ಸಂದರ್ಭದಿಂದಲೂ ಅವರು, ಪಾಲಿಕೆಯ ಕೋವಿಡ್‌ ಶವ ಸಂಸ್ಕಾರದ ನೋಡೆಲ್‌ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಸಾರಥ್ಯದಲ್ಲಿ ಇದುವರೆಗೆ 1,221 ಸೋಂಕಿತರ ಶವಗಳನ್ನು ಇಲ್ಲಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಸುಡಲಾಗಿದೆ.

‘ಶವಾಗಾರದ ಕಾವಲುಗಾರರು, ಶವ ಸುಡುವವರು ಹಾಗೂ ಆಂಬುಲೆನ್ಸ್‌ನ ಎಲ್ಲಾ ಚಾಲಕರು ವರ್ಷದಿಂದ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ’ ಎಂದು ಕ್ರಿಸ್ಟಿ ಹೇಳಿದರು.

ಕೋವಿಡ್‌ ಸೋಂಕಿತರ ಶವ ಸಾಗಿಸುವ ಆಂಬುಲೆನ್ಸ್‌ ಚಾಲಕ ಆಯೂಬ್‌ ಅಹ್ಮದ್‌ ಹಾಗೂ ಚಿತಾಗಾರದ ಇತರ ನೌಕರರು, ಅಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

***

ಅಂದು, ಮೃತರ ಕುಟುಂಬದವರು ದೂರದಿಂದ ಬಂದು ಕಾಯುತ್ತಿದ್ದರು. ನಾನು ಶವ ಸಾಗಿಸದಿದ್ದರೆ ಅವರೆಲ್ಲ ಮತ್ತೊಂದು ದಿನ ಕಾಯಬೇಕಾಗುತ್ತಿತ್ತು.

-ಅನಿಲ್‌ ಕ್ರಿಸ್ಟಿ, ಪಾಲಿಕೆ ಸಾಂಖ್ಯಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT