ಶನಿವಾರ, ಅಕ್ಟೋಬರ್ 23, 2021
20 °C
ಅರಮನೆ ಆವರಣದಲ್ಲಿ ಇನ್ನೆರಡು ದಿನ ನಡೆಯಲಿದೆ ತಾಲೀಮು

ಮೈಸೂರು ದಸರಾ: ಜಂಬೂಸವಾರಿ ತಾಲೀಮು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿಯ ತಾಲೀಮು ಸೋಮವಾರ ಆರಂಭಗೊಂಡಿತು. ಮಾವುತರು, ಕಾವಾಡಿಗಳು, ಪೊಲೀಸರು ಹಾಗೂ ಅಧಿಕಾರಿಗಳು ತಾಲೀಮು ನಡೆಸಿದರು.

ಅಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿಯನ್ನು ಹೊರಿಸಲಿಲ್ಲ. ಸಾಂಕೇತಿಕವಾಗಿ ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಮು ಅವರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಯ ತಾಲೀಮಿಗೆ ಚಾಲನೆ ನೀಡಿದರು.

ಅಶ್ವಾರೋಹಿ ಪಡೆ ಮತ್ತು ಪೊಲೀಸ್ ಬ್ಯಾಂಡ್ ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗಿಯಾದರು. ಪೊಲೀಸ್ ಬ್ಯಾಂಡ್ ವಾದನದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಹೆಜ್ಜೆ ಇಟ್ಟಿತು. ಇದರ ಎಡ, ಬಲಗಳಲ್ಲಿ ಕಾವೇರಿ ಮತ್ತು ಚೈತ್ರಾ ಆನೆಗಳಿದ್ದವು. ಉಳಿದಂತೆ, ಅಶ್ವತ್ಥಾಮ ಮತ್ತು ಲಕ್ಷ್ಮೀ ಆನೆಗಳಷ್ಟೇ ಮೆರವಣಿಗೆಯಲ್ಲೇ ಭಾಗವಹಿಸಿದವು.

ಧನಂಜಯ ಮತ್ತು ಗೋಪಾಲಸ್ವಾಮಿ ಆನೆಗಳು ಅರಮನೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರಿಂದ ಅವು ತಾಲೀಮಿನಲ್ಲಿ ಭಾಗಿಯಾಗಲಿಲ್ಲ. ವಿಕ್ರಮ ಆನೆಯ ಮದ ಇನ್ನೂ ಇಳಿಯದ ಕಾರಣ ಅದನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಪೊಲೀಸ್ ಇಲಾಖೆಯ ವಿವಿಧ ತುಕಡಿ ಗಳಿಂದ ಪಥಸಂಚಲನ ನಡೆಯಿತು.

ಮೆರವಣಿಗೆಯ ದೂರವನ್ನು ಕ್ರಮಿಸುವ ಅವಧಿ, ಈ ಸಮಯದಲ್ಲಿ ಕೈಗೊಳ್ಳಬಹುದಾದ ಮುನ್ನಚ್ಚರಿಕೆ, ಸಮಯ ಪಾಲನೆ ಮೊದಲಾದ ಅಂಶಗಳತ್ತ ತಾಲೀಮಿನ ಮೊದಲ ದಿನ ಗಮನಹರಿಸಲಾಯಿತು. ಮೊದಲ ಸುತ್ತಿನ ತಾಲೀಮಿನಲ್ಲಿ ಸಮಯದ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ, ಮತ್ತೊಮ್ಮೆ ತಾಲೀಮು ನಡೆಸಲಾಯಿತು.

ಎರಡು ಸುತ್ತಿನ ಕುಶಾಲತೋಪನ್ನು ಈ ವೇಳೆ ಸಿಡಿಸಿ ಆನೆಗಳ ಪ್ರತಿಕ್ರಿಯೆಗಳನ್ನು ಗಮನಿಸಲಾಯಿತು. ಮೊದಲ ಹಂತದ ತಾಲೀಮಿನ ರಿಹರ್ಸಲ್‌ ಯಶಸ್ವಿಯಾಯಿತು ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

ಮಂಗಳವಾರವೂ ಇದೇ ಬಗೆಯಲ್ಲಿ ತಾಲೀಮು ನಡೆಯಲಿದೆ. ಅ. 13ರಂದು ಅಂತಿಮ ತಾಲೀಮು ನಡೆಯಲಿದ್ದು, ಅಂದು ಜಂಬೂಸವಾರಿ ಹೇಗೆ ನಡೆಯುತ್ತದೋ ಹಾಗೆಯೇ ಮೆರವಣಿಗೆ ಇರುತ್ತದೆ. ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಟ್ಟಣಿಗೆ ಮೇಲೆ ನಿಂತು ಮರದ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು