ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದಸರಾ‌ ಫಲಪುಷ್ಪ ಪ್ರದರ್ಶನ, ಪುನೀತ್ ರಾಜ್‌ಕುಮಾರ್ ಪುತ್ಥಳಿ ಆಕರ್ಷಣೆ

Last Updated 24 ಸೆಪ್ಟೆಂಬರ್ 2022, 10:09 IST
ಅಕ್ಷರ ಗಾತ್ರ

ಮೈಸೂರು: ದಸರಾ ಅಂಗವಾಗಿ ಸೆ.26ರಿಂದ ಅ.5ರವರೆಗೆ ನಗರದ‌ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ರಾಷ್ಟ್ರಪತಿ‌ಭವನ ಪ್ರತಿಕೃತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿಯೇ ಪ್ರಮುಖ ಜನಾಕರ್ಷಣೆಯಾಗಲಿದೆ.

ಕೋವಿಡ್‌ ಕಾರಣದಿಂದ ಕಳೆದೆರಡು ವರ್ಷಗಳ ‌ಕಾಲ‌ ಯಾವುದೇ ಕಾರ್ಯಕ್ರಮ ಏರ್ಪಡಿಸರಿರಲಿಲ್ಲ.ಈ ಕಾರಣದಿಂದ ಈ ವರ್ಷ ಅದ್ದೂರಿಯಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ. ಹೂವಿನಿಂದ ಅಲಂಕರಿಸಲಿರುವ ಪುನೀತ್ ರಾಜ್ ಕುಮಾರ್ ಪುತ್ಥಳಿಯೇ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾಹಿತಿ‌ ನೀಡಿದರು.

ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ: ಸ್ವಾತಂತ್ರ್ಯದ ಅಮೃತ‌ಮಹೋತ್ಸವ ಹಾಗೂ ಇದೇ ಮೊದಲ‌ ಬಾರಿಗೆ ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಕುಪ್ಪಣ್ಣ ಉದ್ಯಾನದ ಒಳಭಾಗದಗಾಜಿನ ಮನೆ ಆವರಣದಲ್ಲಿ 20 ಅಡಿ‌ ಎತ್ತರದ ರಾಷ್ಟ್ರಪತಿ ಭವನದ ಪ್ರತಿಕೃತಿ‌ ನಿರ್ಮಿಸಿ, ಕೆಂಪು, ಬಿಳಿ ಗುಲಾಬಿ, ಸೇವಂತಿಕೆ ಹೂವುಗಳಿಂದ‌ ಅಲಂಕರಿಸಲಾಗುತ್ತದೆ.

ಪುನೀತ್ ನೆನಪು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅವರ ವಿವಿಧ ಭಂಗಿಯ ಸುಮಾರು ಐದು‌ ಪುತ್ಥಳಿಗಳನ್ನು ಸ್ಥಾಪಿಸಿ, ಅವುಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ತಮ್ಮ ನೆಚ್ಚಿನ ‌ನಟನ‌ ಪುತ್ಥಳಿ ಜೊತೆಗೆ ಚಿತ್ರ ತೆಗೆಸಿಕೊಳ್ಳಲು ಅನುಕೂಲವಾಗುವಂತೆ ಸೆಲ್ಫಿ ಪಾಯಿಂಟ್ ಕೂಡ ಸ್ಥಾಪಿಸಲಾಗುತ್ತದೆ. ಇದಲ್ಲದೇ, ವರನಟ ಡಾ. ರಾಜ್ ಕುಮಾರ್ ಅವರ ಗಾಜನೂರಿನ ಮನೆ, ಚಾಮುಂಡಿ ಬೆಟ್ಟ, ನಂದಿವಿಗ್ರಹ ಕೂಡ ಇರಲಿದೆ ಎಂದು ಪೂರ್ಣಿಮಾ ಅವರು‌ ಮಾಹಿತಿ ನೀಡಿದರು.

ತಂಡೀ ಸಡಕ್: ಮೈಸೂರು‌ ಮಹಾರಾಜರ ಆಳ್ವಿಕೆಯಲ್ಲಿ ಪ್ರಯಾಣಿಕರಿಗೆ ನಡಿಗೆಗೆ ಪಡೆಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಂಡೀ ಸಡಕ್ (ವಿಶಾಲವಾದ ರಸ್ತೆ ) ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಮುಂದೆ ನಿರ್ಮಿಸಲಾಗುತ್ತಿದೆ.

ಮಕ್ಕಳಿಗೂ‌ ಆಕರ್ಷಣೆ: ಫಲಪುಷ್ಪ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಗೊಂಬೆಗಳನ್ನು ನಿರ್ಮಿಸಲಾಗುತ್ತದೆ. 7 ಅಡಿ‌ ಉದ್ದದ ಜೇನುಹುಳು, 12 ಅಡಿ ಉದ್ದದ ಜಿರಾಫೆ, 7 ಅಡಿಯ ದಪ್ಪ‌ಮೆಣಸಿನ ಕಾಯಿಯಿಂದ ಒಂದು ಮನೆಯನ್ನು‌ ನಿರ್ಮಿಸಲಾಗುತ್ತದೆ. ಇಲಾಖೆಯಿಂದ ಸುಮಾರು 50 ಸಾವಿರ ಹೂವಿನ‌ಗಿಡಗಳನ್ನು‌ ಬೆಳೆದಿದ್ದು, ಉದ್ಯಾನದಲ್ಲಿ ಅಲಂಕರಿಸಲಾಗುತ್ತದೆ. ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಇಪ್ಪತ್ತಕ್ಕೂ ಅಧಿಕ ಮಳಿಗೆಗಳಿರಲಿದ್ದು, ಸರ್ಕಾರದ ವಿವಿಧ ಸೌಲಭ್ಯದ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು‌ ಮಾಹಿತಿ ನೀಡಿದರು.

ಈ ವೇಳೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರುದ್ರೇಶ್, ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT