ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹಲಸಿನ ಹಂಗಾಮು, ತಗ್ಗಿದ ಬೇಡಿಕೆ

ಪರ್ಯಾಯ ಬಳಕೆಯತ್ತ ರೈತರು, ವ್ಯಾಪಾರಿಗಳ ಚಿತ್ತ; ವಿವಿಧ ಖಾದ್ಯ ತಯಾರಿಕೆ
Last Updated 11 ಜೂನ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಹಲಸಿನ ಹಣ್ಣಿನ ಹಂಗಾಮಿದು. ಮಾರುಕಟ್ಟೆಗೆ ಹಣ್ಣು ಬಂದರೂ ಹಿಂದಿನ ವಹಿವಾಟು ನಡೆದಿಲ್ಲ. ಕೋವಿಡ್‌ ಭೀತಿಯಿಂದ ಹೊರ ರಾಜ್ಯಗಳಿಂದಲೂ ಬೇಡಿಕೆ ಬರದಿರುವುದು ವ್ಯಾಪಾರಿಗಳನ್ನು ಕಂಗಾಲಾಗಿಸಿದೆ.

ರಸ್ತೆ ಬದಿ, ವೃತ್ತಗಳಲ್ಲಿ ನಡೆಯುವ ಹಣ್ಣಿನ ವ್ಯಾಪಾರಕ್ಕೆ ಹಿಂದಿನ ಭರಾಟೆಯಿಲ್ಲ. ದಿನವಿಡೀ ವಹಿವಾಟು ನಡೆಸಿದರೂ ನಾಲ್ಕೈದು ಹಣ್ಣು ಖರ್ಚಾಗದಾಗಿದೆ.

‘ಹತ್ತು ವರ್ಷಗಳಿಂದ ಹಲಸಿನ ಹಣ್ಣನ್ನು ರಸ್ತೆ ಬದಿ ಮಾರಾಟ ಮಾಡುತ್ತಿರುವೆ. ಸೀಜನ್‌ನಲ್ಲಿ ನಿತ್ಯವೂ 10–15 ಹಣ್ಣನ್ನು ಕೊಯ್ದು, ಬಿಡಿಸಿ ತೊಳೆಯನ್ನು ಮಾರಾಟ ಮಾಡುತ್ತಿದ್ದೆ. ಆದರೆ ಈ ಬಾರಿ ವ್ಯಾಪಾರ ಅರ್ಧಕ್ಕರ್ಧವೂ ನಡೆಯುತ್ತಿಲ್ಲ. ಖರೀದಿಗೆ ಜನರೇ ಬರುತ್ತಿಲ್ಲ’ ಎಂದು ಮೈಸೂರಿನ ಮಂಜು ತಿಳಿಸಿದರು.

‘ಹಲಸಿನ ಮರ ಹೊಂದಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ವಾರಕ್ಕೊಮ್ಮೆ ನಮಗೆ ಇಲ್ಲಿಗೆ ಕೇಳಿದಷ್ಟು ಹಣ್ಣು ತಂದುಕೊಡುತ್ತಾರೆ. ಈ ಹಿಂದೆ ವಾರಕ್ಕೆ 100ರ ಲೆಕ್ಕದಲ್ಲಿ ಖರೀದಿಸುತ್ತಿದ್ದೆವು. ಈಗ 50 ಖರೀದಿಸಿದರೂ ಮಾರಾಟವಾಗುತ್ತಿಲ್ಲ’ ಎಂದು ಹಲಸಿನ ವಹಿವಾಟಿನ ಚಿತ್ರಣವನ್ನು ಬಿಚ್ಚಿಟ್ಟರು.

‘ಬನ್ನೂರು ಮುಖ್ಯ ರಸ್ತೆಯಲ್ಲಿ ರಾಶಿ ಹಾಕಿಕೊಂಡು ಹಣ್ಣು ಮಾರಾಟ ಮಾಡುತ್ತಿದ್ದೆವು. ಈ ಬಾರಿ ಕೊರೊನಾ ಭಯದಿಂದ ವ್ಯಾಪಾರವೇ ನಡೆಯುತ್ತಿಲ್ಲ. ನಷ್ಟ ತಪ್ಪಿಸಿಕೊಳ್ಳಲು ನಾಲ್ಕು ಚಕ್ರದ ತಳ್ಳು ಗಾಡಿಯಲ್ಲಿ ಬೀದಿ ಬೀದಿ ಸುತ್ತಿ ಮಾರಾಟ ಮಾಡುತ್ತಿದ್ದೇವೆ’ ಎಂದು ರಾಘವೇಂದ್ರ ನಗರದಲ್ಲಿ ಗುರುವಾರ ಹಲಸಿನ ಹಣ್ಣು ಮಾರಾಟ ಮಾಡಿದ ಸಯ್ಯದ್‌ ತಿಳಿಸಿದರು.

‘ಬೆಂಗಳೂರು, ಕರಾವಳಿ, ಕೇರಳಕ್ಕೆ ಹಲಸಿನ ಹಣ್ಣನ್ನು ಕಳುಹಿಸುತ್ತಿದ್ದೆ. ಹಿಂದಿನ ವರ್ಷಗಳಲ್ಲಿ ವ್ಯಾಪಾರ ಚೆನ್ನಾಗಿ ನಡೆದಿದ್ದರಿಂದ ಈ ಬಾರಿ ಸ್ನೇಹಿತರೆಲ್ಲಾ ಸೇರಿಕೊಂಡು ‘ಇಕೊ ಪ್ರಿಸ್ಟ್‌’ ಎಂಬ ಕಂಪನಿ ಸ್ಥಾಪಿಸಿದ್ದೆವು. ₹ 5.50 ಲಕ್ಷ ಬಂಡವಾಳ ಹಾಕಿ ರೈತರಿಂದ ಮರ ಗುತ್ತಿಗೆಗೆ ಪಡೆದುಕೊಂಡಿದ್ದೆ. ಕೋವಿಡ್‌ನಿಂದ ಹೊರ ರಾಜ್ಯಗಳಿಂದ ಬೇಡಿಕೆ ಬರದಿರುವುದಕ್ಕೆ ಕೈ ಸುಟ್ಟುಕೊಂಡಿದ್ದೇನೆ’ ಎಂದು ಹೇಮಂತ್ ಅಸಹಾಯಕತೆ ವ್ಯಕ್ತಪಡಿಸಿದರು.

‘ಸ್ನೇಹಿತರು,ಬಂಧುಗಳಿಗೆ ಕೊಟ್ಟೆವು’

‘ಬಹುತೇಕ ರೈತರಿಗೆ ಹಲಸು ಕೈ ಖರ್ಚಿನ ಬೆಳೆ. ವಾಣಿಜ್ಯ ಬೆಳೆಯಾಗಿ ಬೆಳೆಯುವ ಯತ್ನ ನಡೆಸಿರುವೆ. ಕೋವಿಡ್‌ನಿಂದ ರಸ್ತೆ ಬದಿ ಮಾರುವ ಹಣ್ಣನ್ನು ತಿನ್ನಲು ಜನ ಭಯ ಪಡುತ್ತಿದ್ದಾರೆ. ಇದರಿಂದ ವಹಿವಾಟು ನಡೆಯುತ್ತಿಲ್ಲ. ರೈತರ ಮರಗಳಲ್ಲೂ ಹಲಸು ಉಳಿದಿವೆ’ ಎಂದು ಪ್ರಗತಿಪರ ಕೃಷಿಕ ಮೈಸೂರಿನ ಕೈಲಾಸ್‌ಮೂರ್ತಿ ತಿಳಿಸಿದರು.

‘ಹಲವರು ತಮ್ಮ ಮರದ ಹಣ್ಣುಗಳನ್ನು ಸ್ನೇಹಿತರು, ಬಂಧುಗಳಿಗೆ ಕೊಡುತ್ತಿದ್ದಾರೆ. ಕರಾವಳಿ, ತುಮಕೂರು ಭಾಗದಲ್ಲಿ ಪರ್ಯಾಯದ ಬಳಕೆಯೂ ನಡೆದಿದೆ. ನಮ್ಮಲ್ಲಿ ಅಂತಹ ಪ್ರಯತ್ನ ಹೆಚ್ಚು ನಡೆದಿಲ್ಲ’ ಎಂದು ಹೇಳಿದರು.

‘ಹಲಸಿನಿಂದ ಚಿಪ್ಸ್‌, ಹಪ್ಪಳ, ಸಂಡಿಗೆ, ಪಾಯಸ, ಹೋಳಿಗೆ, ಇಡ್ಲಿ, ಐಸ್‌ ಕ್ರೀಂ ತಯಾರಿಕೆಯೂ ನಡೆದಿದೆ. ಕೇರಳದಲ್ಲಿ ನಡೆದಷ್ಟು ಮೌಲ್ಯವರ್ಧನೆ ನಮ್ಮಲ್ಲಿ ಆಗುತ್ತಿಲ್ಲ’ ಎಂದು ಹಲಸು ಕೃಷಿಕ ಎಚ್‌.ಜೆ.ಪದ್ಮರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT