ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಂಪರೆ ಸಪ್ತಾಹದಲ್ಲಿ ಮೈಸೂರು ಚಿತ್ರಕಲೆ

Last Updated 6 ಡಿಸೆಂಬರ್ 2019, 14:04 IST
ಅಕ್ಷರ ಗಾತ್ರ

ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ ನ.21 ರಿಂದ 30ರವರೆಗೆ ‘ವಿಶ್ವ ಪರಂಪರೆ ಸಪ್ತಾಹ’ ಕಾರ್ಯಕ್ರಮವು ಬೆಂಗಳೂರಿನ ಕೆ.ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಹೆಸರಾಂತ ಸಾಂಪ್ರದಾಯಿಕ ಶೈಲಿಯ ಹದಿನಾರು ಕಲಾವಿದರನ್ನು ನಾಡಿನ ವಿವಿಧ ಭಾಗಗಳಿಂದ ಆಹ್ವಾನಿಸಲಾಗಿತ್ತು. ಅದರಲ್ಲಿ ಮೈಸೂರಿನ ಆರು ಚಿತ್ರಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

ದಕ್ಷಿಣ ಕರ್ನಾಟಕದ ಕಲೆಯ ಮೂಲ ಸೆಲೆಯಾಗಿರುವ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯು ಮೈಸೂರು ಅರಸರ ಕಾಲದಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ಈಗ ಅಳಿವಿನಂಚಿನಲ್ಲಿದ್ದು, ಕೆಲವೇ ಕಲಾವಿದರು ಮಾತ್ರ ಇದರ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಪರಂಪರಾಗತವಾಗಿ ಬಂದಿರುವ ಕಲೆಯನ್ನು ಸರ್ಕಾರ ಮತ್ತು ಇಲಾಖೆಗಳು ವಿಶ್ವ ಪರಂಪರೆ ಸಪ್ತಾಹದಂತಹ ಸಂದರ್ಭಗಳಲ್ಲಿ ಉಳಿಸುವ ಮತ್ತು ಬೆಳೆಸುವ ಹೊಣೆಗಾರಿಕೆಯನ್ನು ಕೈಗೊಂಡಿರುವುದು ಶ್ಲಾಘನೀಯ.

ನಾಡಿನಲ್ಲಿ ಹಲವಾರು ಸಂಗ್ರಹಾಲಯಗಳಿವೆ. ಚಿತ್ರಕಲೆಗಾಗಿ ಇರುವ ಕೆ.ವೆಂಕಟಪ್ಪ ಚಿತ್ರಶಾಲೆಯು ಬೆಂಗಳೂರಿನಲ್ಲಿ ಕಲೆ-ಕಲಾವಿದರಿಗಾಗಿ ವಿಶಿಷ್ಟವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಳಮಹಡಿಯಲ್ಲಿ ಹಿರಿಯ ಕಲಾವಿದ ಕೆ.ವೆಂಕಟಪ್ಪನವರ ಕಲಾಕೃತಿಗಳು ಶಾಶ್ವತವಾಗಿ ಪ್ರದರ್ಶನಗೊಂಡಿವೆ. 1 ಮತ್ತು 2ನೇ ಮಹಡಿಯಲ್ಲಿ ನಿರಂತರವಾಗಿ ವಿವಿಧ ಕಲಾವಿದರ ಕಲಾಕೃತಿಗಳ ಪ್ರದರ್ಶನಗಳು ನಡೆಯುತ್ತವೆ. ಖಾಲಿ ಇದ್ದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಇಲಾಖೆಯಲ್ಲಿ ಸಂಗ್ರಹಿಸಿರುವ ನಾಡಿನ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು ಎನ್ನುತ್ತಾರೆ ಪುರಾತತ್ವ ಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕ ಡಾ. ಆರ್.ಗೋಪಾಲ್‌.

ಈ ದಿಸೆಯಲ್ಲಿ ಈಗ ನಡೆದ ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಶಿಬಿರವು ಕಲಾವಿದರಿಗೆ ಅವಕಾಶ ಕಲ್ಪಿಸುವ, ಕಲಾ ಶೈಲಿಯನ್ನು ಉತ್ತೇಜಿಸುವ, ಸಂಗ್ರಹಿಸುವ ಮತ್ತು ಪ್ರದರ್ಶಿಸುವ ನಿಟ್ಟಿನಲ್ಲಿ ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮವು ಯಶಸ್ವಿಗೊಂಡಿದೆ. ಪ್ರತಿ ಕಲಾವಿದರು ಸುಮಾರು 16X24 ಇಂಚು ಅಳತೆಯಲ್ಲಿ ಎರಡೆರಡು ಕಲಾಕೃತಿಗಳನ್ನು ರಚಿಸಿ ಒಟ್ಟು 32 ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳನ್ನು ಇಲಾಖೆಗೆ ನೀಡಿದ್ದಾರೆ. ಅವು ಈಗ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ.

ವಿಜಯನಗರ ಕಾಲದಲ್ಲಿ ಈ ಶೈಲಿಯ ಚಿತ್ರಕಲೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವಿಜಯನಗರ ಪತನದ ನಂತರ ಅಲ್ಲಿದ್ದ ಕಲಾವಿದರು ನಾಡಿನ ಮೂಲೆ ಮೂಲೆಗೆ ಚದುರಿಹೋದರು. ಆಶ್ರಯ ಅರಸಿಬಂದ ಚಿತ್ರಕಲಾವಿದರಿಗೆ ಮೈಸೂರು ಅರಸರು ಆಶ್ರಯ ನೀಡಿದರು. ಇಲ್ಲಿನ ಕಲಾಶೈಲಿಯ ಚಿತ್ರಕಲೆಯ ಸಮ್ಮಿಲನದೊಂದಿಗೆ ಮುಂದೆ ಮೈಸೂರು ಸಾಂಪ್ರದಾಯಿಕ ಶೈಲಿಯಾಗಿ ಮರುಹುಟ್ಟು ಪಡೆಯಿತು. ಮೂರ್ನಾಲ್ಕು ಶತಮಾನಗಳಿಂದ ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳನ್ನು ಕಲಾವಿದರು ನಿರಂತರವಾಗಿ ರಚಿಸಿಕೊಂಡು ಬರುತ್ತಿದ್ದಾರೆ. ದೇವಾನುದೇವತೆಗಳನ್ನು ಧಾರ್ಮಿಕ ಮತ್ತು ಪೌರಾಣಿಕ ನೆಲೆಗಟ್ಟಿನಲ್ಲಿ ಶಾಸ್ತ್ರಬದ್ಧವಾಗಿ ಸಮಕಾಲೀನ ಸಂದರ್ಭಕ್ಕನುಗುಣವಾಗಿ ಅಭಿವ್ಯಕ್ತಿಸಿದ್ದಾರೆ.

ಮೈಸೂರಿನ ಹಿರಿಯ ಕಲಾವಿದರಾದ ಬಿ.ಪಿ.ರಾಮಕೃಷ್ಣರವರು ವೇಣುಗೋಪಾಲ, ಲಕ್ಷ್ಮೀ, ಕೆ.ಎಸ್.ಶ್ರೀಹರಿರವರ ಮನ್ಮಥ, ರತಿ, ರಾಮ್‍ ಶಿವಕುಮಾರ್‌ ಅವರ ಉಮಾಮಹೇಶ್ವರ, ವರಾಹ, ಆರ್.ಶಿವಕುಮಾರ್‌ ಅವರ ಚಾಮುಂಡೇಶ್ವರಿ, ಸರಸ್ವತಿ, ಶ್ರೀಧರ್‌ರಾವ್‍ ಅವರ ಗರುಡವಾಹನ, ಶಿವಪಾರ್ವತಿ ಉತ್ಸವಮೂರ್ತಿ, ಕಲಾಕುಲ್‍ದೀಪ್‍ ಅವರ ವೈಕುಂಠನಾರಾಯಣ, ಯಶೋದಕೃಷ್ಣ ಕಲಾಕೃತಿಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇವರೊಂದಿಗೆ ಕಮಲ್‍ ಅಹಮದ್, ಎಂ.ವಿ.ಕಂಬಾರ್, ಡಾ.ಜೆ.ದುಂಡುರಾಜ್, ಮುನಿಮೋಹನ್, ನರಸಿಂಹಮೂರ್ತಿ, ಎ.ಕೆ.ಮಮತಾ, ಹರ್ಷ ಕಂಬಾರ್, ವೇಲು ಮುರುಗನ್ ಹಾಗೂ ಉಮಾ ನಾಗೇಂದ್ರ ಭಾಗವಹಿಸಿದ್ದು, ಕಲಾವಿದರು ಮತ್ತು ಕಲಾಶೈಲಿಯನ್ನು ಒಬ್ಬರನ್ನೊಬ್ಬರು ಅರಿಯಲು ಈ ಕಲಾ ಶಿಬಿರ ಮತ್ತು ಪ್ರದರ್ಶನ ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT