ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪನವರೇ ಇದು ನಿಮಗೆ ಕಟ್ಟ ಕಡೆಯ ಎಚ್ಚರಿಕೆ: ನಿರಂಜನಾನಂದಪುರಿ ಸ್ವಾಮೀಜಿ

Last Updated 9 ಫೆಬ್ರುವರಿ 2019, 5:21 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಸಮುದಾಯದ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ ಯಡಿಯೂರಪ್ಪ ಅವರೇ. ಇದೇ ನಿಮಗೆ ಕಟ್ಟ ಕಡೆಯ ಎಚ್ಚರಿಕೆ’ –ಹೀಗೆ ಎಚ್ಚರಿಕೆ ನೀಡಿದವರು ಕಾಗಿನೆಲೆ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ. ನಗರದಲ್ಲಿ ಶುಕ್ರವಾರ ಕನಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿರುವ ಆಡಿಯೊ ಕುರಿತು ಪ್ರಸ್ತಾಪಿಸಿ, ‘ವಿರೋಧ ಪಕ್ಷದ ನಾಯಕರಾಗಿದ್ದೀರಿ, ಪ್ರಮುಖ ಸಮುದಾಯದ ಮುಖಂಡರಾಗಿದ್ದೀರಿ. ಸಮುದಾಯದ ರಾಜಕಾರಣಿಗಳ ಬಗ್ಗೆ ಮಾತನಾಡುವ ನಿಮ್ಮ ನಾಲಗೆಗೆ ಲಗಾಮು ಹಾಕಿರಿ. ಇಲ್ಲವಾದರಲ್ಲಿ ನಮ್ಮ ಸಮುದಾಯದ ಜನರೇ ಪಾಠ ಕಲಿಸುತ್ತಾರೆ’ ಎಂದುಚಾಟಿ ಬೀಸಿದರು.

‘ಸಮ್ಮಿಶ್ರ ಸರ್ಕಾರದ ಪ್ರಾಣ ಸಿದ್ದರಾಮಯ್ಯ ಅವರ ಕೈಯಲ್ಲಿದೆ ಎನ್ನುವುದನ್ನು ಮರೆಯಕೂಡದು. ಕೆಟ್ಟದಾಗಿ ನಡೆದುಕೊಂಡರೆ ಯಾವಾಗ ಬೇಕಾದರೂ ಪ್ರಾಣ ಹಾರಿಹೋಗಬಹುದು’ ಎಂದರು.

ಕುರುಬ ಜನಾಂಗದ ಸಂಘಟನಾ ಶಕ್ತಿ ಹೆಚ್ಚಲಿ
ಮೈಸೂರು: ರಾಜಕೀಯ ಶಕ್ತಿ, ನಾಯಕತ್ವ ಗುಣ ಬೆಳೆಸಿಕೊಂಡರೆ ಮಾತ್ರ ಕುರುಬ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಕಾಂಗ್ರೆಸ್ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಸಿದ್ಧಾರ್ಥನಗರದಲ್ಲಿ ನಿರ್ಮಿಸಿರುವ ಕನಕ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಮುದಾಯದವರು ಆಗಾಗ ಎಡವುದುಂಟು. ನಮ್ಮ ಸಮುದಾಯಕ್ಕೆ ಈಗ ಜಾಗೃತಿ ಬಂದಿದೆ. ಸಮುದಾಯದ ಬಗ್ಗೆ ಅಭಿಮಾನ ಮೂಡಿದೆ. ಆದರೆ, ಸಂಘಟನಾ ಶಕ್ತಿಯ ಕೊರತೆ ಕೊಂಚ ಇದೆ. ಇದು ನಮ್ಮ ದೌರ್ಬಲ್ಯ. ಇದನ್ನು ಮೀರಬೇಕು. ನಾಯಕತ್ವ ಗುಣ ಬೆಳೆಸಿಕೊಂಡು ಸಮಾನತೆಯ ಸಮಾಜ ನಿರ್ಮಾಣದ ಕಡೆಗೆ ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

‘ಜಾತಿ ರಾಜಕಾರಣ ಮಾಡಿರಿ ಎಂದು ನಾನು ಹೇಳುತ್ತಿಲ್ಲ. ಅದನ್ನು ಮಾಡಲೂಬಾರದು. ಸಮಾಜದಲ್ಲಿರುವ ಎಲ್ಲ ಜಾತಿಗಳಲ್ಲಿರುವ ಬಡವರನ್ನು ಗುರುತಿಸಿ. ಅವರಿಗೆ ಒಳಿತು ಮಾಡಿ. ಶೋಷಿತರಿಗೆ ಬೆಂಬಲ ನೀಡಿ. ಭಾಷಣ ಮಾಡುವವರೆಲ್ಲ ಸಾಮಾಜಿಕ ನ್ಯಾಯದ ಪರವಾಗಿ ಇರುವುದಿಲ್ಲ. ಅವರ ಬದ್ಧತೆಯನ್ನು ಪರೀಕ್ಷಿಸಿ. ಅನುಮಾನ ಬಂದಲ್ಲಿ ದೂರ ನಿಲ್ಲಿರಿ’ ಎಂದರು.

ಎಲ್ಲರಿಗೂ ಜೈಕಾರ ಹಾಕುವುದನ್ನು ಮೊದಲು ನಿಲ್ಲಿಸಿ. ಜಡತ್ವ ಇರುವ ಸಮಾಜ ಬೆಳೆಯಲು ಸಾಧ್ಯವೇ ಇಲ್ಲ. ಜಾತಿ ಜಾತಿಗಳ ನಡುವೆ ಸಮಾನತೆ ಮೂಡಿದರೆ ತನಗೆ ತಾನೇ ಸಮಾಜ ಬೆಳೆಯುವುದು ಎಂದರು.

ಸ್ವಾಭಿಮಾನದಿಂದ ಕಟ್ಟಿದ ಮಠ: ಕಾಗಿನೆಲೆ ಗುರುಪೀಠವನ್ನು 1992ರಲ್ಲಿ ಕಟ್ಟಿದಾಗ ರಾಜ್ಯದಾದ್ಯಂತ ಸಮುದಾಯದ ಜನರು ದೇಣಿಗೆ ನೀಡಿದರು. ₹ 60 ಲಕ್ಷ ಸಂಗ್ರಹಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ₹ 25 ಲಕ್ಷ ಕೊಡುವುದಾಗಿ ಹೇಳಿದರು. ಹರಿ ಖೋಡೆ ಅವರು ಕುರುಬರ ಸಮಾವೇಶದಲ್ಲಿ ಊಟದ ವ್ಯವಸ್ಥೆಗೆ ಹಣ ನೀಡುವುದಾಗಿ ಹೇಳಿದರು. ಆದರೆ, ನಾವು ಹಣ ಪಡೆಯಲಿಲ್ಲ. ಹಣ ನಮ್ಮ ಬಳಿಯೇ ಇದೆ ಎಂದು ಸ್ವಾಭಿಮಾನ ಮೆರೆದೆವು. ಈ ಸ್ವಾಭಿಮಾನ ಮುಂದುವರೆಯಬೇಕು ಎಂದರು.

‘ಹಿಂದೆಲ್ಲಾ ಕುರುಬರು ಎಂದು ಹೇಳಿಕೊಳ್ಳಲು ನಾಚಿಕೆಪಟ್ಟಿಕೊಳ್ಳುವ, ಹಿಂಜರಿಯುವ ಪರಿಸ್ಥಿತಿ ಇತ್ತು. ಆಗ ನಾನು ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿ ಕನಕದಾಸರ ಜಯಂತಿ ಹಮ್ಮಿಕೊಳ್ಳುತ್ತಿದ್ದೆ. ಈಗ ಕುರುಬರಲ್ಲಿ ಸಮುದಾಯ ಪ್ರಜ್ಞೆ, ಜಾಗೃತಿ ಮೂಡಿದೆಯೆಂದರೆ, ಅದರಲ್ಲಿ ನನ್ನ ಪಾಲೂ ಇದೆ’ ಎಂದು ಸ್ಮರಿಸಿದರು.

ಕುರುಬರಿಂದ ಅರ್ಧ ಹಣ ಪಡೆಯಿರಿ: ‘ಈ ಸಮುದಾಯ ಭವನವನ್ನು ಮದುವೆ ಸೇರಿದಂತೆ ಎಲ್ಲ ಸಮಾಜಪರ ಕಾರ್ಯಗಳಿಗೆ ಬಳಸಿಕೊಳ್ಳಿರಿ. ಕಲ್ಯಾಣಮಂಟಪಗಳಿಗೆ ಮೈಸೂರಿನಲ್ಲಿ ದಿನದ ಬಾಡಿಗೆ ₹ 2 ಲಕ್ಷ ಮೀರಿದೆ. ಈ ಸಮುದಾಯ ಭವನವನ್ನು ಗರಿಷ್ಠ ₹ 1 ಲಕ್ಷಕ್ಕೆ ನೀಡಬೇಕು. ಕುರುಬ ಸಮುದಾಯದ ಸದಸ್ಯರಿಗೆ ₹ 50 ಸಾವಿರಕ್ಕೆ ನೀಡಬೇಕು. ಇದಕ್ಕಾಗಿ ಶಿವಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿ ಕಾರ್ಯ ನಿರ್ವಹಿಸಲಿ’ ಎಂದು ಸೂಚಿಸಿದರು.

ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮೇಯರ್‌ ಪುಷ್ಪಲತಾ ಜಗನ್ನಾಥ್, ಮುಖಂಡರಾದ ಸಿ.ಎಚ್.ವಿಜಯಶಂಕರ್, ಎಂ‌.ಕೆ.ಸೋಮಶೇಖರ್, ಮರೀಗೌಡ, ಎಚ್.ಪಿ.ಮಂಜುನಾಥ್, ಕರ್ನಾಟಕ ಕುರುಬರ ಸಂಘದ ಕಾರ್ಯದರ್ಶಿ ಪುಟ್ಟಬಸವೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ರಾಮಚಂದ್ರ ಭಾಗವಹಿಸಿದ್ದರು.

ಧಾರ್ಮಿಕ ಕಾರ್ಯ, ಪ್ರತಿಷ್ಠಾಪನೆ
ಮೈಸೂರು:
ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆವರಣದಲ್ಲಿ ನಿರ್ಮಿಸಿರುವ ಕನಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಅಂಗವಾಗಿ ಶುಕ್ರವಾರ ಧಾರ್ಮಿಕ ಕಾರ್ಯ, ಅಡಿಗಲ್ಲು ಪ್ರತಿಷ್ಠಾಪನೆ ಹಾಗೂ ವಿವಾಹಕಾರ್ಯ ನಡೆದವು.

ಬೀರದೇವರುಗಳ ಮೆರವಣಿಗೆ ನಂತರ ವಿವಾಹ ಕಾರ್ಯ ನಡೆಯಿತು. ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವದಿಸಿದರು.

ಕಾಗಿನೆಲೆ ಮಠದ ಜಾಗದಲ್ಲಿ ₹ 5 ಕೋಟಿ ವೆಚ್ಚದಲ್ಲಿ 5 ಅಂತಸ್ತಿನ ವಿದ್ಯಾರ್ಥಿನಿಲಯಕ್ಕೆ ಅಡಿಗಲ್ಲು ಪ್ರತಿಷ್ಠಾಪನಾ ಪೂಜೆ ನಡೆಯಿತು.

ಮುಖಂಡರಾದ ವಾಸು, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಪ್ರಶಾಂತ್ ಗೌಡ, ಶಿವಣ್ಣ, ನಟರಾಜು, ರಮೇಶ್, ಶಂಕರ್, ರಾಜ್ಯ ಕುರುಬರ ಸಂಘದ ಪದಾಧಿಕಾರಿಗಳಾದ ಸುಬ್ಬು, ಮಹದೇವೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT