ಮಂಗಳವಾರ, ಜುಲೈ 5, 2022
25 °C

ರಂಗಾಯಣದಲ್ಲಿ ಹಿಂದೆ ಅನಾಚಾರ ನಡೆದಾಗ ಏಕೆ ಪ್ರತಿಭಟಿಸಲಿಲ್ಲ: ಅಡ್ಡಂಡ ಸಿ.ಕಾರ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮಾಜಿ ಮುಖ್ಯಮಂತ್ರಿ ಮಗ, ವಿದೇಶದಲ್ಲಿ ಬೌನ್ಸರ್‌ನಿಂದ ಪೆಟ್ಟು ತಿಂದು ಮೃತಪಟ್ಟಾಗ ಅವರ ಶ್ರದ್ಧಾಂಜಲಿ ಸಭೆಯನ್ನು ರಂಗಾಯಣದಲ್ಲಿ ಮಾಡಿದಾಗ ಯಾರೂ ವಿರೋಧಿಸಿರಲಿಲ್ಲ ಏಕೆ?’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪ್ರಶ್ನಿಸಿದರು.

ಭಾನುವಾರ ಬಹುರೂಪಿ ರಂಗೋತ್ಸವದ ಸಮಾರೋಪದಲ್ಲಿ ಮಾತನಾಡಿ, ‘ಬಹುರೂಪಿಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸಿದ್ದಕ್ಕೆ ಕೆಲವರು ನನ್ನ ವಿರುದ್ಧ ಮುಗಿಬಿದ್ದಿದ್ದರು. ರಂಗಾಯಣದಲ್ಲಿ ಈ ಹಿಂದೆ ಅನಾಚಾರಗಳು ಆಗಿದ್ದಾಗ ಅವರು ಪ್ರತಿಭಟಿಸಿಲ್ಲ ಏಕೆ’ ಎಂದು ಹರಿಹಾಯ್ದರು.

‘ಅರ್ಬನ್‌ ನಕ್ಸಲರೆಂದು ಕುತ್ತಿಗೆಗೆ ಬೋರ್ಡ್‌ ನೇತುಹಾಕಿ ಕೊಂಡವರು ಇಲ್ಲಿ ಮುಖ್ಯ ಅತಿಥಿ ಗಳಾಗಿ ಬಂದು ಹೋಗಿದ್ದಾರೆ. ಕೋಲೆ ಬಸವ ಕಾರ್ಯಕ್ರಮ ವನ್ನು ನೋಡಿ ‘ಗೋವು’ ಎಂಬ ಕಾರಣಕ್ಕೆ ಮುಖ್ಯ ಅತಿಥಿ ಸ್ಥಾನವನ್ನು ಬಹಿಷ್ಕರಿಸಿ ಹೊರನಡೆದವರೂ ಇದ್ದಾರೆ. ಬಾಂಗ್ಲಾ ನುಸುಳುಕೋರರಿಗೆ ಮತ ದಾನದ ಹಕ್ಕು ಕೊಡಿ ಎಂದು ವಾದಿಸಿದ್ದವರೂ ಇಲ್ಲಿ ಬಂದಿದ್ದಾರೆ’ ಎಂದು ಎಂದು ಕಿಡಿಕಾರಿದರು.

‘ಬಹುರೂಪಿಗೆ ಆಹ್ವಾನಿಸಿರುವ ಅತಿಥಿಗಳ ಬಗ್ಗೆ ಕ್ಯಾತೆ ತೆಗೆದಿದ್ದ ಹಲವರು ರಂಗಾಯಣದ ಗೇಟಿನ ಮುಂದೆ 20 ದಿನ ಧರಣಿ ನಡೆಸಿ, ನನ್ನ ವಜಾಕ್ಕೆ ಒತ್ತಾಯಿಸಿದ್ದರು. ಯಾರಿಗೂ ಹೆದರುವವ ನಾನಲ್ಲ. ರಂಗಾಯಣ ಸ್ವೇಚ್ಛೆಯ ಸಂಸ್ಥೆಯಲ್ಲ’ ಎಂದು ತಿರುಗೇಟು ನೀಡಿದರು.

‘ಬಹುರೂಪಿಯನ್ನು ಬಹಿಷ್ಕರಿ ಸಲು ಕೆಲವರು ಕರೆಕೊಟ್ಟಿದ್ದರು. ಆದರೆ, 10 ದಿನ ಕಾಲವೂ ಸಾವಿರಾರು ರಂಗಪ್ರೇಮಿಗಳು ಬಂದಿದ್ದು, ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ. ಇಷ್ಟು ವರ್ಷ ಇಲ್ಲಿ ಉತ್ಸವ, ವಿಚಾರ ಸಂಕಿರಣಗಳ ಹೆಸರಿನಲ್ಲಿ ಒಂದೇ ಸಿದ್ಧಾಂತ ಮತ್ತು ವಾದವನ್ನು ಜನರ ತಲೆಗೆ ತುರುಕಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ರಂಗಾಯಣ ಎಲ್ಲರಿಗೂ ಮುಕ್ತವಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು