ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ–ಅರಮನೆ ಪುನರಾರಂಭ

ಚಿತ್ರನಟರ ಹೆಸರಿನಲ್ಲಿ ಆನೆ–ಸಿಂಹ ದತ್ತು ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್
Last Updated 8 ಜೂನ್ 2020, 15:19 IST
ಅಕ್ಷರ ಗಾತ್ರ

ಮೈಸೂರು: ಪ್ರವಾಸಿಗರ ಆಕರ್ಷಣೀಯ ತಾಣಗಳಾದ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ ಸುದೀರ್ಘ ಅವಧಿಯ ಬಳಿಕ ಸೋಮವಾರದಿಂದ ಪುನರಾರಂಭಗೊಂಡವು.

ಕೊರೊನಾ ವೈರಸ್‌ ಸೋಂಕಿನ ಹರಡುವಿಕೆಯ ಭೀತಿಯಿಂದ, ನಿರೀಕ್ಷೆಯಂತೆ ಮೊದಲ ದಿನ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಲಿಲ್ಲ. ಮೃಗಾಲಯಕ್ಕೆ 216 ಜನರು ಭೇಟಿ ನೀಡಿದರೆ, ಮೈಸೂರು ಅರಮನೆಗೆ 58 ಜನರು ಭೇಟಿ ನೀಡಿ ವೀಕ್ಷಿಸಿದರು.

ಜನದಟ್ಟಣೆಯಿಂದ ಕೂಡಿರುತ್ತಿದ್ದ ಎರಡೂ ಪ್ರವಾಸಿ ತಾಣಗಳಲ್ಲಿ ನೀರಸ ವಾತಾವರಣ ಕಂಡು ಬಂದಿತು. ಆರಂಭದಲ್ಲಿ ಭೇಟಿ ನೀಡಿದ ಕೆಲವರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಅರಮನೆ ನೋಡಲು ತಾತನ ಜೊತೆಗೆ ಬಂದಿದ್ದ ಬಾಲಕನೊಬ್ಬನ ಪ್ರವೇಶಕ್ಕೆ ಸಿಬ್ಬಂದಿ ತಡೆಯೊಡ್ಡಿದರು.

ಮೃಗಾಲಯದ ಪ್ರವೇಶದ್ವಾರ ಬಳಿಯಿರುವ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್, ಸಂಸದೆ ಸುಮಲತಾ ಅಂಬರೀಷ್ ಪುನಾರಂಭಕ್ಕೆ ಚಾಲನೆ ನೀಡಿದರು. ಶಾಸಕರು ಸಾಥ್ ನೀಡಿದರು.

ಆನೆ–ಸಿಂಹ ದತ್ತು ಪಡೆದ ಸಚಿವ:

ಕನ್ನಡ ಚಲನಚಿತ್ರರಂಗದ ಮೇರು ನಟರಾದ ಡಾ.ರಾಜ್‌ಕುಮಾರ್, ಅಂಬರೀಷ್, ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಎರಡು ಆನೆಗಳು ಹಾಗೂ ಒಂದು ಸಿಂಹವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ದತ್ತು ಪಡೆದರು.

ಸುದೀರ್ಘ ಅವಧಿಯ ಲಾಕ್‌ಡೌನ್‌ ಬಳಿಕ ಚಾಮರಾಜೇಂದ್ರ ಮೃಗಾಲಯದ ಪುನರಾರಂಭಕ್ಕೆ ಚಾಲನೆ ನೀಡಿದ ಸಚಿವರು, ‘ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಇವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿರುವುದಾಗಿ’ ತಿಳಿಸಿದರು.

ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಆನೆ, ರೆಬೆಲ್ ಸ್ಟಾರ್ ಅಂಬರೀಷ್ ಹೆಸರಿನಲ್ಲಿ ಆಫ್ರಿಕನ್ ಆನೆ, ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಸಿಂಹವನ್ನು ಸೋಮಶೇಖರ್ ದತ್ತು ಪಡೆದಿದ್ದಾರೆ.

ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಇದೇ ವೇಳೆ ಆದ್ಯ ಯದುವೀರ, ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ಅಪರೂಪದ ತಳಿಯಾಗಿರುವ ಬಿಳಿ ಹುಲಿಯ ಸಂಚಾರಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್ಕ್ಲೂಶರ್ ಅನ್ನು ಸಚಿವರು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಿದರು.

ಅವಿಸ್ಮರಣೀಯ:

‘ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ಭೀತಿಯಿಂದ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದ ಆದಾಯ ಸ್ಥಗಿತಗೊಂಡಿತ್ತು. ಇದೇ ಹೊತ್ತಲ್ಲಿ ಕೇಂದ್ರ–ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಿರ್ವಹಣೆ ಮಾಡುವುದು ಕಷ್ಟಕರವಾಗಿದ್ದ ಸನ್ನಿವೇಶದಲ್ಲಿ, ಸಚಿವರ ಗಮನಕ್ಕೆ ಸಮಸ್ಯೆಯನ್ನು ತರುತ್ತಿದ್ದಂತೆ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ತಮ್ಮ ಆಪ್ತ ಬಳಗದಿಂದ ಇದೂವರೆಗೂ ಒಟ್ಟು ₹ 3.23 ಕೋಟಿ ನೀಡಿದ್ದಾರೆ. ಇದು ಅವಿಸ್ಮರಣೀಯ ಕೊಡುಗೆ. ಇದನ್ನು ಶಿಲಾ ಫಲಕದಲ್ಲಿ ದಾಖಲಿಸಿದ್ದೇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದರು.

ಅಮೆರಿಕದ ಅಕ್ಕ ಸಂಘಟನೆಯಿಂದ ಮೃಗಾಲಯದ ನಿರ್ವಹಣೆಗೆಂದು ₹ 40 ಲಕ್ಷ ಮೊತ್ತದ ಚೆಕ್ ಅನ್ನು ಇದೇ ವೇಳೆ ಸಚಿವರ ಮೂಲಕ ಸಂಘಟನೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಮೃಗಾಲಯಕ್ಕೆ ಹಸ್ತಾಂತರಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಹರ್ಷವರ್ಧನ್, ಮೇಯರ್ ತಸ್ನಿಂ, ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಡಿಸಿಪಿ ಪ್ರಕಾಶ್ ಗೌಡ ಮತ್ತಿತರರಿದ್ದರು.

ಅಂಬರೀಷ್‌ ನೆನೆದ ಸುಮಲತಾ

‘ಮೃಗಾಲಯಕ್ಕೂ ಅಂಬರೀಷ್‌ಗೂ ಅವಿನಾಭಾವ ಸಂಬಂಧ. ಹೆಚ್ಚು ಹೊತ್ತು ಇಲ್ಲಿಯೇ ಕಳೆಯುತ್ತಿದ್ದರು. ‘ಮೃಗಾಲಯ’ದ ಸಿನಿಮಾ ಚಿತ್ರೀಕರಣ ನಡೆದಿದ್ದು ಇಲ್ಲಿಯೇ. ‘ಕಪಿಲ್’ ಎಂಬ ಚಿಂಪಾಜಿಯ ಜತೆ ಒಡನಾಟ ಹೊಂದಿದ್ದರು. ಇಲ್ಲಿದ್ದ ಅನೇಕ ಪ್ರಾಣಿಗಳ ಜತೆ ಸ್ನೇಹದ ನಂಟು ಹೊಂದಿದ್ದರು. ನಾನು ಅವರ ಜೊತೆ ಸಾಕಷ್ಟು ಭಾರಿ ಇಲ್ಲಿಗೆ ಬಂದಿದ್ದೇ’ ಎಂದು ಸಂಸದೆ ಸುಮಲತಾ ಮೃಗಾಯಲದ ಜತೆಗಿನ ತಮ್ಮ ನಂಟನ್ನು ಹಂಚಿಕೊಂಡರು.

ಸಂಸದೆ ಸುಮಲತಾ ತಡವಾಗಿ ಬಂದರು. ಅವರು ಬರುವ ತನಕವೂ ಸಚಿವರು, ಶಾಸಕರು ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಕಾದು ಕುಳಿತಿದ್ದರು.

ಗುಡುಗಿದ ಜಿ.ಟಿ.ಡಿ

ಪೂಜೆಯ ಬಳಿಕ ಟೇಪ್ ಕತ್ತರಿಸಿ ಚಾಲನೆ ನೀಡಲು ಸಚಿವರು, ಸಂಸದರು ಮುಂದಾಗುತ್ತಿದ್ದಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಹ ಗಣ್ಯರ ಜತೆಗೆ ನಿಲ್ಲಲು ಮುಂದಾದರು. ಈ ಸಂದರ್ಭ ಸುಮಲತಾಗೆ ಅವಕಾಶವೇ ಸಿಗಲಿಲ್ಲ. ಇದನ್ನು ಗಮನಿಸಿದ ಶಾಸಕ ಜಿ.ಟಿ.ದೇವೇಗೌಡ ಗುಡುಗಿದರು.

‘ಎಂಪಿ ಇದ್ದಾರೆ. ಎಂಎಲ್ಎಗಳಿದ್ದಾರೆ. ಎನ್ರಯ್ಯ ಹಿಂಗ್ ನುಗ್ತೀರಿ’ ಎಂದು ಅಬ್ಬರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT