ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ‘ಎಕ್ಸ್‌ಪ್ರೆಸ್‌ ವೇ’ ಪ್ರಗತಿ ಪರಿಶೀಲಿಸಿದ ಸಂಸದ ಪ್ರತಾಪಸಿಂಹ

ದಶಪಥ ಹೆದ್ದಾರಿ ಇನ್ನೆರಡು ವರ್ಷಗಳಲ್ಲಿ ಪೂರ್ಣ
Last Updated 12 ಸೆಪ್ಟೆಂಬರ್ 2020, 2:09 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು– ಮೈಸೂರು ನಡುವಿನ 10 ಪಥಗಳ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಮೈಸೂರಿನಿಂದ ಶ್ರೀರಂಗಪಟ್ಟಣದವರೆಗಿನ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿಯನ್ನು ಅವರು ಶುಕ್ರವಾರ ಪರಿಶೀಲಿಸಿದರು. ಸೇತುವೆ, ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರಲ್ಲದೆ, ಶ್ರೀರಂಗಪಟ್ಟಣ ಬಳಿಯ ಗಣಂಗೂರಿನಲ್ಲಿರುವ ಬೇಸ್‌ಕ್ಯಾಂಪ್‌ಗೆ ಭೇಟಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಹಾಗೂ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

‘ಬೆಂಗಳೂರು– ಮೈಸೂರು ನಡುವಿನ 118 ಕಿ.ಮೀ ಎಕ್ಸ್‌ಪ್ರೆಸ್ ವೇ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದೆ. ಬೆಂಗಳೂರು– ನಿಡಘಟ್ಟ ನಡುವಿನ ಮೊದಲ ಹಂತದ ಕಾಮಗಾರಿ ಶೇ 51ರಷ್ಟು ಹಾಗೂ ನಿಡಘಟ್ಟ– ಮೈಸೂರು ನಡುವಿನ ಎರಡನೇ ಹಂತದ ಕಾಮಗಾರಿ ಶೇ 30ರಷ್ಟು ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

ಮೊದಲ ಹಂತದ ಕಾಮಗಾರಿ 2022ರ ಫೆಬ್ರುವರಿಗೆ ಹಾಗೂ ಎರಡನೇ ಹಂತದ ಕಾಮಗಾರಿ 2022ರ ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ಒಂದೆರಡು ಕಡೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿರುವುದನ್ನು ಹೊರತುಪಡಿಸಿದರೆ ಈ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ 90 ನಿಮಿಷಗಳಲ್ಲಿ ಕೆಂಗೇರಿಯಿಂದ ಮೈಸೂರಿಗೆ ತಲುಪಲು ಸಾಧ್ಯ ಎಂದು ತಿಳಿಸಿದರು.

₹7,400 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು, ಆರು ಪಥಗಳ ಎಕ್ಸ್‌ಪ್ರೆಸ್‌ ವೇ ಹಾಗೂ ಎರಡೂ ಬದಿಗಳಲ್ಲಿ ತಲಾ ಎರಡು ಲೇನ್‌ಗಳ ಸರ್ವೀಸ್‌ ರಸ್ತೆಯನ್ನು ಒಳಗೊಂಡಿರಲಿದೆ. ಭೂಸ್ವಾಧೀನದ ಸಂಪೂರ್ಣ ವೆಚ್ಚ ಮತ್ತು ನಿರ್ಮಾಣ ಕಾಮಗಾರಿಯ ಶೇ 40ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದರು.

51 ಕಿ.ಮೀ.ನಷ್ಟು ಬೈಪಾಸ್‌ ರಸ್ತೆ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ 8 ಕಿ.ಮೀ. ಉದ್ದದ ಒಂದು ಎಲಿವೇಟೆಡ್‌ ಕಾರಿಡಾರ್‌ ಹಾಗೂ ಆರು ಬೈಪಾಸ್‌ಗಳನ್ನು ಒಳಗೊಂಡಿರಲಿದೆ. ಶ್ರೀರಂಗಪಟ್ಟಣದ ಬಳಿ 7 ಕಿ.ಮೀ. ಒಳಗೊಂಡಂತೆ ಒಟ್ಟು 51.5 ಕಿ.ಮೀ.ನಷ್ಟು ಬೈಪಾಸ್‌ ಇರಲಿದೆ. 69 ಅಂಡರ್‌ಪಾಸ್‌ಗಳು ಮತ್ತು ಏಳು ಸೇತುವೆಗಳು ನಿರ್ಮಾಣಗೊಳ್ಳಲಿವೆ. ರಾಮನಗರದಲ್ಲಿ ವಿಶ್ರಾಂತಿ ತಾಣವನ್ನೂ ನಿರ್ಮಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಶ್ರೀಧರ್‌ ತಿಳಿಸಿದರು.

ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ನ ಪ್ರತಿನಿಧಿ ರಮೇಶ್‌ ತ್ರಿಪಾಠಿ, ಭೂಸ್ವಾಧೀನಾಧಿಕಾರಿ ದೇವರಾಜ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT