ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ

ಐಎಎಸ್‌ ಹುದ್ದೆಗೂ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುತ್ತೇನೆ
Last Updated 4 ಜೂನ್ 2021, 0:07 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾ ನಾಗ್‌, ‘ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ಪಾಲಿಕೆ ಅಯುಕ್ತರ ಹುದ್ದೆಗೆ ಮಾತ್ರವಲ್ಲ, ಐಎಎಸ್‌ ಹುದ್ದೆಗೂ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುತ್ತೇನೆ’ ಎಂದರು.

ಜಿಲ್ಲಾಧಿಕಾರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.

ಮೈಸೂರು ಜಿಲ್ಲೆ ಬಿಟ್ಟು ತೊಲಗಿ: ‘ಜಿಲ್ಲಾಧಿಕಾರಿ ಅವರು ತುಂಬಾ ಚೀಪ್ ಮೆಂಟಾಲಿಟಿ ಇರುವ ಅಧಿಕಾರಿ, ಇಂತಹವರು ಮೈಸೂರಿನಂಥ ಜಿಲ್ಲೆಯಲ್ಲಿ ಇರಬಾರದು. ಅವರು ಏಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ, ನನ್ನ ಮೇಲೆ ದ್ವೇಷ ಇದ್ದರೆ ಸಾಧಿಸಲಿ. ನನ್ನ ವಿರುದ್ಧ ವೈಯಕ್ತಿಕ ದ್ವೇಷ ಇಟ್ಟುಕೊಂಡು ಮೈಸೂರು ನಗರ ಹಾಗೂ ಇಲ್ಲಿನ ಜನರನ್ನು ಬಲಿಪಶು ಮಾಡಬೇಡಿ’ ಎಂದರು.

‘ಕೋವಿಡ್‌ ನಿರ್ವಹಣೆಯಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡಿದೆ. ಆದರೂ ಏನೂ ಕೆಲಸ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ‌’ ಎಂದು ದೂರಿದರು.

‘ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ನಾವು ಚೆನ್ನಾಗಿ ಕೆಲಸ ಮಾಡುವುದನ್ನು ಅವರಿಗೆ ನೋಡಲು ಆಗುವುದಿಲ್ಲ. ಆದ್ದರಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ’ ಎಂದು ಬೇಸರದಿಂದ ನುಡಿದರು.

ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಅಸಮಾಧಾನ ಹೊರಹಾಕಿದ ಅವರು, ‘ಜಿಲ್ಲಾಧಿಕಾರಿ ಒಂದೋ ತಮ್ಮ ವರ್ತನೆ, ಕಾರ್ಯವೈಖರಿ ಸರಿಪಡಿಸಲಿ. ಅದು ಆಗದಿದ್ದರೆ ಜಿಲ್ಲೆ ಬಿಟ್ಟು ತೊಲಗಿ’ ಎಂದು ಹರಿಹಾಯ್ದರು.

‘ಇಂತಹ ಅಧಿಕಾರಿ ಯಾವ ಜಿಲ್ಲೆಗೂ ಬೇಡ. ನಾನು ಇಷ್ಟು ಸೌಮ್ಯ ಸ್ವಭಾವದಿಂದ ಇದ್ದರೂ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇಷ್ಟು ದಿನ ಅವಮಾನ ಸಹಿಸಿಕೊಂಡೇ ಇದ್ದೆ. ಆದರೆ ನನ್ನಿಂದ ಆಗದು ಎಂದಾಗ ಮಾಧ್ಯಮಗಳ ಮುಂದೆ ಬಂದಿದ್ದೇನೆ’ ಎಂದರು.

ರಾಜೀನಾಮೆ ಸ್ವೀಕರಿಸುವುದಿಲ್ಲ: ಎಸ್‌ಟಿ ಸೋಮಶೇಖರ್

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅವರು ಅತ್ಯಂತ ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಮೈಸೂರಿನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಯವರಿಗೂ ಮಾತನಾಡುತ್ತೇನೆ.ಶಿಲ್ಪಾನಾಗ್ ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನವೊಲಿಸಲಾಗುವುದು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಶುಕ್ರವಾರ ನಾನು ಮೈಸೂರು ಪ್ರವಾಸ ಕೈಗೊಂಡಿದ್ದು, ಆ ವೇಳೆ ಖುದ್ದು ಭೇಟಿಯಾಗಿ ಮಾತನಾಡುತ್ತೇನೆ.
--
ಎಸ್.ಟಿ.ಸೋಮಶೇಖರ್,
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT