ಭಾನುವಾರ, ಸೆಪ್ಟೆಂಬರ್ 25, 2022
29 °C
ಯುವ ಸಂಭ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ

ದುಂದು ವೆಚ್ಚ ಬಿಡಿ, ಸಾಂಪ್ರದಾಯಿಕ ದಸರಾ ನಡೆಸಿ: ಮಹೇಶ್ ಸೋಸ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಯುವಜನರಿಗೆ ಉದ್ಯೋಗ ನೀಡದೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವುದರಿಂದ ನಾಡಹಬ್ಬ ದಸರೆಯನ್ನು ಅದ್ಧೂರಿಯಾಗಿ ಆಚರಿಸುವ ಬದಲಿಗೆ ಸಾಂಪ್ರದಾಯಿಕವಾಗಿ ನಡೆಸಬೇಕು. ದುಂದು ವೆಚ್ಚ ಮಾಡಬಾರದು’ ಎಂದು ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ಗೌರವಾಧ್ಯಕ್ಷ ಮಹೇಶ್ ಸೋಸ್ಲೆ ಹೇಳಿದರು.

‘ದಸರಾ ಭಾಗವಾಗಿ ಸೆ.16ರಂದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್‌ನಿಂದ ರಾಜ್ಯ ತತ್ತರಿಸಿದೆ. ಬಹುತೇಕರು ಆರ್ಥಿಕ ಸಂಕಷ್ಟವನ್ನು ಎದರಿಸುತ್ತಿದ್ದಾರೆ. ಕೋವಿಡ್‌ನಿಂದ ಕುಟುಂಬಗಳನ್ನು ಕಳೆದುಕೊಂಡವರಿಗೆ ಪರಿಹಾರ ವಿತರಿಸುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಪ್ರವಾಹ ಹಾಗೂ ಮಳೆಯಿಂದ ಮನೆ, ಬೆಳೆ ಕಳೆದುಕೊಂಡವರಿಗೆ ಪರಿಹಾರವನ್ನು ಸಮರ್ಪಕವಾಗಿ ಕೊಟ್ಟಿಲ್ಲ. ಹೀಗಿರುವಾಗ, ಅದ್ಧೂರಿ ದಸರಾ ಆಚರಣೆ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ಯುವಜನರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರಗಳು ವಿಫಲವಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿ ಪ್ರತಿಭಾವಂತ ಯುವಕರ ಭವಿಷ್ಯವನ್ನು ಕಿತ್ತುಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ನೀಡಿಲ್ಲ. ಹೀಗಿರುವಾಗ ಯಾವ ಸಂಭ್ರಮಕ್ಕಾಗಿ ಉತ್ಸವಗಳನ್ನು ನಡೆಸಬೇಕು’ ಎಂದು ಪ್ರಶ್ನಿಸಿದರು.

‘ಯುವಕರಿಗೆ ಅನ್ಯಾಯ ಮಾಡಿ ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಮಾನಸ ಗಂಗೋತ್ರಿಯಲ್ಲಿರುವ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಸಂಘದ ಅಧ್ಯಕ್ಷ ನಟರಾಜ್‌ ಶಿವಣ್ಣ, ಉಪಾಧ್ಯಕ್ಷ ಕುಮಾರ್‌ ಕಲ್ಲಹಳ್ಳಿ, ಖಜಾಂಚಿ ಕಾರ್ತಿಕ್ ಟಿ.ಎಂ., ಸದಸ್ಯ ಪ್ರದೀಪ್‌ ಮುಮ್ಮಡಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಣಿಕಂಠಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.