ಶುಕ್ರವಾರ, ಡಿಸೆಂಬರ್ 4, 2020
22 °C
ಸಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ ಬದುಕುತ್ತಿದ್ದರೇನೋ?

ಮಮ್ಮಲ ಮರುಗಿತು ಪೊಲೀಸ್ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ನಗರ: ತಾಲ್ಲೂಕಿನ ಸಿದ್ದನಕೊಪ್ಪಲು ಗ್ರಾಮದ ಬಳಿ ಗುರುವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೊಲೀಸ್‌ ಸಿಬ್ಬಂದಿಯ ಮೃತದೇಹಗಳನ್ನು ಕಂಡು ಪೊಲೀಸರು ಮಮ್ಮಲ ಮರುಗಿದರು.

ಒಂದು ವೇಳೆ ಹಿಂದಿನಿಂದ ಯಾವುದಾದರೂ ಒಂದು ವಾಹನ ಬಂದಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿರುತ್ತಿದ್ದರೆ ಬದುಕಿರುತ್ತಿದ್ದರೇನೋ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡಿತು.

ಸಮೀಪದಲ್ಲೇ ಮನೆಯೊಂದು ಇದ್ದಿತಾದರೂ ಅವರಿಗೂ ಅಪಘಾತ ನಡೆದಾಗ ಎಚ್ಚರವಾಗಿರಲಿಲ್ಲ. ಸಾರ್ವಜನಿಕರೊಬ್ಬರು 100ಗೆ ನೀಡಿದ ಮಾಹಿತಿ ಆಧರಿಸಿ ತಕ್ಷಣವೇ ಸ್ಥಳಕ್ಕೆ ಪೊಲೀಸರು ಹೋದರೂ ಬದುಕಿಸಲು ಸಾಧ್ಯವಾಗಲಿಲ್ಲ.‌

‘ನಸುಕಿನ ಒಂದು ಗಂಟೆ ಹೊತ್ತಿಗೆ ಇವರು ಠಾಣೆಗೆ ಮಾಹಿತಿ ನೀಡಿದ್ದಾರೆ. 2 ಗಂಟೆಗೆ ಮಾಹಿತಿ ಕೊಡಬೇಕಿತ್ತು. ಅದಕ್ಕೂ ಮುನ್ನ ಸಾರ್ವಜನಿಕರೊಬ್ಬರು ಅಪಘಾತದ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಹೋಗುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದರು.‌

ಮೃತಪಟ್ಟ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಮೂರ್ತಿ (58) ಇನ್ನೆರಡು ವರ್ಷ ಕಳೆದಿರುತ್ತಿದ್ದರೆ ಸೇವೆಯಿಂದ ನಿವೃತ್ತಿಯಾಗುತ್ತಿದ್ದರು. ಚಾಮರಾಜನಗರದ ನವಿಲೂರಿನ ಇವರು 30 ವರ್ಷಗಳಿಂದ ಇಲಾಖೆಯಲ್ಲಿದ್ದು, ಸಬ್‌ಇನ್‌ಸ್ಪೆಕ್ಟರ್ ಆಗಿ ಬಡ್ತಿ ಹೊಂದುವ ಹಂತದಲ್ಲಿದ್ದರು. 2 ವರ್ಷಗಳಿಂದ ಕೆ.ಆರ್.ನಗರದಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮುನ್ನ ತಿ.ನರಸೀಪುರ, ನಂಜನಗೂಡಿನಲ್ಲಿ ಇವರು ಕಾರ್ಯನಿರ್ವಹಿಸಿದ್ದರು. ಇಬ್ಬರು ಪುತ್ರರು, ಹಾಗೂ ಪತ್ನಿ ಇವರಿಗೆ ಇದ್ದಾರೆ.

ಗುಪ್ತಚರ ವಿಭಾಗದಲ್ಲಿ ಹೆಡ್‌ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತಕುಮಾರ್ (45) ಅವರಿಗೆ ಎಸ್ಸೆಸ್ಸೆಲ್ಸಿ ಹಾಗೂ 6ನೇ ತರಗತಿ ವ್ಯಾಸಂಗ ಮಾಡುವ ಇಬ್ಬರು ಮಕ್ಕಳಿದ್ದಾರೆ. ಮೂಲತಃ ಪಿರಿಯಾಪಟ್ಟಣದ ಬೆಟ್ಟದಪುರದವರಾದ ಇವರು ಕೆ.ಆರ್.ನಗರದ ವಿದ್ಯಾನಗರದಲ್ಲೇ ಪತ್ನಿಯೊಂದಿಗೆ ವಾಸವಿದ್ದರು. ಇವರು ಪಿರಿಯಾಪಟ್ಟಣ, ಸಾಲಿಗ್ರಾಮ, ಬನ್ನೂರುಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಬೆಟ್ಟದಪುರದಲ್ಲಿ ನೆರವೇರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು