ಶನಿವಾರ, ಮೇ 21, 2022
26 °C

ವಿಗ್ರಹದ ಸೌಂದರ್ಯ ವರ್ಧನೆ ಪ್ರಸ್ತಾವ; ನಂದಿಗೂ ಕುತ್ತು ತರಲಿದೆಯೇ ಯೋಜನೆ?

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಒಂದು’ ಎಂಬ ಖ್ಯಾತಿ ಪಡೆದ ಚಾಮುಂಡಿಬೆಟ್ಟದ ನಂದಿ ವಿಗ್ರಹದ ಸೌಂದರ್ಯವರ್ಧನೆಗೂ ರಾಜ್ಯಸರ್ಕಾರ ಯೋಜನೆ ರೂಪಿಸಿದೆ. ತೀರ್ಥಕ್ಷೇತ್ರಗಳ ಪುನಶ್ಚೇತನ, ಅಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆ (ಪ್ರಸಾದ) ಗೆ ಅನುಮತಿ ದೊರೆತರೆ ನಂದಿಯ ಸುತ್ತಲೂ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ.

ನಂದಿಯ ವೀಕ್ಷಣೆಗೆ ವಿಗ್ರಹದ ಸುತ್ತಲೂ ವಿಶೇಷ ವ್ಯವಸ್ಥೆ, ಮೆಟ್ಟಿಲುಗಳ ಸೌಂದರ್ಯ ವರ್ಧನೆ, ವಿಗ್ರಹದ ಸಮೀಪ ತಂಗುದಾಣ ನಿರ್ಮಿಸುವ ಅಂಶಗಳು ಪ್ರಸ್ತಾವದಲ್ಲಿದೆ. ಸಾಧ್ಯವಾದರೆ, ಈಗ ಇರುವ ಅರವಟ್ಟಿಗೆಯನ್ನೇ ತಂಗುದಾಣವನ್ನಾಗಿ ಬದಲಾಯಿಸುವ ಅಂಶವೂ ಇದೆ.

ದೊಡ್ಡ ದೇವರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾದ ಏಕಕೃಷ್ಣಶಿಲಾ ವಿಗ್ರಹವು 16 ಅಡಿ ಎತ್ತರ, 25 ಅಡಿ ಉದ್ದವಿದೆ. ಬೆಟ್ಟದಿಂದ ಮೆಟ್ಟಿಲುಗಳನ್ನು ಇಳಿಯುತ್ತ 400ನೇ ಮೆಟ್ಟಿಲು ಬರುತ್ತಿದ್ದಂತೆ ಅರೆಗಣ್ಣು ತೆರೆದ ಸ್ಥಿತಿಯಲ್ಲಿ ಕುಳಿತಿರುವ ಈ ನಂದಿಯು ಧ್ಯಾನ ಸ್ಥಿತಿಯಲ್ಲಿರುವಂತೆ ಭಾಸವಾಗುತ್ತದೆ.

ಬಲಮುಂಗಾಲನ್ನು ಚಾಚಿ, ಎಡ ಮುಂಗಾಲನ್ನು ಮಡಚಿ ಕುಳಿತ ಈ ನಂದಿಯು ಸಾಮಾನ್ಯ ಎತ್ತು ಕುಳಿತುಕೊಂಡರೆ ಹೇಗೆ ಇರುವುದೋ ಹಾಗೆಯೇ ಕಾಣುವಂತೆ ಕೆತ್ತಿರುವುದು ಅದರ ವೈಶಿಷ್ಟ್ಯ. ಕೊರಳಲ್ಲಿ ಸರಪಳಿ, ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಿರುವ ನಂದಿ ಸಹಜವಾಗಿಯೇ ಸುಂದರವಾಗಿದೆ. ಈ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ನಂದಿಯಲ್ಲಿ ಮೂಡಿತ್ತು ಬಿರುಕು!

ಏನೂ ಮಾಡದೇ ಇದ್ದರೂ ಎರಡು ವರ್ಷಗಳ ಹಿಂದೆ ನಂದಿಯ ಎಡಭಾಗದ ಕಾಲಿನ ಸಮೀಪ ದಾರದ ಎಳೆಯಷ್ಟು ಗಾತ್ರದ ಬಿರುಕೊಂದನ್ನು ಅರ್ಚಕರು ಪತ್ತೆ ಹಚ್ಚಿದ್ದರು. ನಂತರ, ಅದನ್ನು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿಯು ಪರಿಶೀಲನೆ ನಡೆಸಿತ್ತು.

ನ್ಯಾಷನಲ್ ಕನ್ಸರ್ವೇಷನ್ ಲ್ಯಾಬೊರೇಟರಿ (ಎನ್‌ಸಿಎಲ್‌)ಯ ತಜ್ಞರು ವೈಜ್ಞಾನಿಕವಾಗಿ ಈ ಬಿರುಕನ್ನು ಮುಚ್ಚಿದರು. ಆದರೆ, ಈಗ ಪ್ರಸ್ತಾಪಗೊಂಡಿರುವ ಸೌಂದರ್ಯವರ್ಧಕ ಯೋಜನೆಗಳಿಂದ ನಂದಿಗೆ ಮತ್ತೆ ಇನ್ನಾವ ಆಪತ್ತು ಕಾದಿದೆಯೋ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೌರಿಶಂಕರ ನಗರದ ನಿವಾಸಿ ನಿಸರ್ಗ, ‘ಇದೊಂದು ಅವೈಜ್ಞಾನಿಕ ಕ್ರಮ. ನಂದಿಯ ವೀಕ್ಷಣೆಗೆ ಈಗ ಇರುವ ವ್ಯವಸ್ಥೆಯೇ ಸಾಕು. ಒಂದೇ ಬಂಡೆಯಲ್ಲಿ ವಿಗ್ರಹ ಕೆತ್ತಿದ ಶಿಲ್ಪಿಗೆ ಸುತ್ತಲೂ ಕುಳಿತು ನೋಡುವುದಕ್ಕೆಂದು ಆಸನ ನಿರ್ಮಿಸುವುದು, ವಿಶ್ರಮಿಸಿಕೊಳ್ಳಲು ದೊಡ್ಡದಾದ ಮಂಟಪ ಕಟ್ಟುವುದು ಕಷ್ಟವಿತ್ತೆ’ ಎಂದು ಪ್ರಶ್ನಿಸಿದರು. ಅವರು ತಿಂಗಳಿಗೊಮ್ಮೆ ಬೆಟ್ಟ ಹತ್ತುತ್ತಾರೆ.

‘ಆ ಶಿಲ್ಪಿಗೆ ತಾನು ಕೆತ್ತಿದ ಕಲಾಕೃತಿಯನ್ನು ಜನರು ಹೇಗೆ ವೀಕ್ಷಣೆ ಮಾಡಬೇಕು ಎನ್ನುವುದರ ಪರಿಕಲ್ಪನೆ ಇತ್ತು. ಆ ವಿಗ್ರಹದ ಒಟ್ಟಂದವನ್ನು ಕಣ್ತುಂಬಿಕೊಳ್ಳಲು ತಕ್ಕುದಾದ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈಗ ನಾವು ಅಲ್ಲಿ ಹಸ್ತಕ್ಷೇಪ ಮಾಡಿ ವೀಕ್ಷಣೆಗೆಂದೆ ಪ್ರತ್ಯೇಕವಾದ ವ್ಯವಸ್ಥೆ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೆ ಪ್ರಸ್ತಾವವನ್ನು ವಾ‍ಪಸ್ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ನಂದಿಯನ್ನು ಈಗಿನ ಸ್ಥಿತಿಯಲ್ಲೇ ಬಿಡಿ’

‘ನಂದಿ ವಿಗ್ರಹವನ್ನು ಸದ್ಯ ಈಗ ಹೇಗಿದೆಯೋ ಅದೇ ಸ್ಥಿತಿಯಲ್ಲೇ ಬಿಡಬೇಕು. ಯಾವುದೇ ಕಾರಣಕ್ಕೂ ನಂದಿಯ ತಂಟೆಗೆ ಸರ್ಕಾರ ಹೋಗಬಾರದು’ ಎಂದು ಇತಿಹಾಸಕಾರ ಈಚನೂರು ಕುಮಾರ್ ಹೇಳುತ್ತಾರೆ.

‘ವಿಗ್ರಹವನ್ನು ಶಿಲ್ಪಿಯು ಒಂದೇ ಕಲ್ಲಿನಲ್ಲಿ ಕೆತ್ತಿದ್ದು, ಹೊರಗಡೆಯ ಶಿಲೆಯನ್ನು ಬಳಕೆ ಮಾಡಿಲ್ಲ. ಇಲ್ಲೇ ಏನೇ ನಿರ್ಮಾಣ ಚಟುವಟಿಕೆ ಮಾಡಿದರೂ ವಿಗ್ರಹಕ್ಕೆ ಧಕ್ಕೆಯಾಗುವುದು ಖಚಿತ. ಸೌಂದರ್ಯ ಸವಿಯಲು ಈಗಿನ ವ್ಯವಸ್ಥೆಯೇ ಚೆನ್ನಾಗಿದೆ. ಪ್ರಕೃತಿಯನ್ನೇ ಸರ್ಕಾರೀಕರಣಗೊಳಿಸುವ ಪ್ರಯತ್ನ ಸಲ್ಲದು’ ಎಂದರು.

‘ವಿಗ್ರಹದ ವೀಕ್ಷಣೆಗೆ ಈಗ ಯಾವ ಅಡ್ಡಿಯೂ ಇಲ್ಲ. ಎಂದಿರುವ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿಯ ಸದಸ್ಯ ಎನ್.ಎಸ್.ರಂಗರಾಜು ಅವರೂ ‘ಈಗ ಇರುವ ಸ್ಥಿತಿಯಲ್ಲೇ ಬಿಡುವುದು ಒಳ್ಳೆಯದು’ ಎಂದು ಪ್ರತಿಕ್ರಿಯಿಸಿದರು.

ಯೋಜನೆ ವಿರುದ್ಧ ರಾಷ್ಟ್ರಪತಿಗೆ ಪತ್ರ

ಮೈಸೂರು: ರಾಜ್ಯಸರ್ಕಾರವು ‘ಪ್ರಸಾದ’ ಯೋಜನೆಯಡಿ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿ ಪರಿಸರ ಸಂರಕ್ಷಣಾ ಸಮಿತಿ ಹಾಗೂ ಆಮ್‌ಆದ್ಮಿ ಪಾರ್ಟಿಯ ಮುಖಂಡರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಯೋಜನೆಯಿಂದ ಬೆಟ್ಟಕ್ಕೆ ಹಾನಿಯಾಗುವ ಅಂಶಗಳನ್ನು ಉಲ್ಲೇಖಿಸಿರುವ ಅವರು, ಬೆಟ್ಟವನ್ನು ಉಳಿಸಲು ಮನವಿ ಮಾಡಿದ್ದಾರೆ.

‘ಇದೊಂದು ಪರಿಸರ ಸೂಕ್ಷ್ಮ ಪ್ರದೇಶ. ಬೆಟ್ಟವನ್ನು ಸಂಪೂರ್ಣ ನಾಶಪಡಿಸುವಂತಹ ಅಂಶಗಳು ಯೋಜನೆಯಲ್ಲಿವೆ’ ಎಂದು ಸಮಿತಿ ಅಧ್ಯಕ್ಷೆ ಭಾನುಮೋಹನ್, ಎಎಪಿಯ ಜಿಲ್ಲಾ ಘಟಕದ ಅಧ್ಯಕ್ಷೆ ಮಾಳವಿಕಾ ಗುಬ್ಬಿವಾಣಿ, ಮುಖಂಡರಾದ ಶಿವಕುಮಾರ್, ಪ್ರಸಾದ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು