ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಸಿದ್ಧತೆಗಳ ಪರಿಶೀಲನೆ; ಅ.1ರಂದು ಮೈಸೂರಿಗೆ ಪಿ.ವಿ.ಸಿಂಧು

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಸೋಮಣ್ಣ
Last Updated 21 ಸೆಪ್ಟೆಂಬರ್ 2019, 13:45 IST
ಅಕ್ಷರ ಗಾತ್ರ

ಮೈಸೂರು: ‘ಚಾಮುಂಡಿ ಬೆಟ್ಟದಲ್ಲಿನ ನಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ನಂದಿ ಮತ್ತು ಬೆಟ್ಟದ ಪಾದದ ಬಳಿ ಶನಿವಾರ ನಸುಕಿನಲ್ಲೇ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ‘ದಸರಾ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಪಾದದ ಮೆಟ್ಟಿಲು ಹತ್ತುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಚಾಮುಂಡಿ ಬೆಟ್ಟದ ನಿಧಿಯಿಂದ ಅಂದಾಜು ₹ 7.50 ಲಕ್ಷ ವೆಚ್ಚದಲ್ಲಿ ನಂದಿ ಮತ್ತು ವೀವ್ ಪಾಯಿಂಟ್ ಬಳಿ ನಿರ್ಮಿಸಿರುವ ಐಮಾಕ್ಸ್ ದೀಪಕ್ಕೆ ಸಚಿವರು ಇದೇ ಸಂದರ್ಭ ಚಾಲನೆ ನೀಡಿದರು.

ಬೆಟ್ಟದ ಪಾದದ ತಪ್ಪಲಿನಲ್ಲಿ ನೂತನವಾಗಿ ₹ 6.58 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಕೇಂದ್ರವನ್ನು ವೀಕ್ಷಿಸಿ, ತುರ್ತಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ವಿವಿಧೆಡೆ ಪರಿಶೀಲನೆ

ನಂದಿ ಭೇಟಿಯ ಬಳಿಕ ಸಚಿವರು ನಗರದ ವಿವಿಧೆಡೆ ಸಂಚರಿಸಿ ದಸರಾ ಸಿದ್ಧತೆಗಳನ್ನು ಪರಿಶೀಲಿಸಿದರು.

ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸುವ ಆಹಾರ ಮೇಳದ ಸ್ಟಾಲ್ ಹಾಗೂ ಕಾರ್ಯಕ್ರಮ ವೇದಿಕೆ ಸೇರಿದಂತೆ ಹಲವು ಸ್ಥಳಗಳನ್ನು ವೀಕ್ಷಿಸಿದರು.

ಯುವ ದಸರಾ ನಡೆಯುವ ಮಹಾರಾಜ ಕಾಲೇಜಿನ ಮೈದಾನವನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸೆ.30ರಿಂದ ಅ.6ರವರೆಗೂ ಯುವ ದಸರಾ ನಡೆಯಲಿದೆ. ಅ.1ರಂದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧು ಯುವ ದಸರಾ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಜೆ.ಕೆ.ಗ್ರೌಂಡ್‍ಗೆ ಭೇಟಿ ನೀಡಿದ ಸೋಮಣ್ಣ ಮಹಿಳಾ ದಸರಾ, ರೈತ ದಸರಾ ವೇದಿಕೆ ಮತ್ತು ಮಳಿಗೆಗಳನ್ನು ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶತಮಾನೋತ್ಸವ ಭವನಕ್ಕೆ ಸುಣ್ಣ–ಬಣ್ಣ ಬಳಿಯುವಂತೆಯೂ ಆದೇಶಿಸಿದರು.

ದಸರಾ ಫಲಪುಷ್ಪ ಪ್ರದರ್ಶನ ನಡೆಯುವ ಕುಪ್ಪಣ್ಣ ಪಾರ್ಕ್ ಮತ್ತು ಗಾಜಿನ ಮನೆ ವೀಕ್ಷಿಸಿದರು. ಪಾರ್ಕ್‍ನ ಗಾಜಿನ ಮನೆಯಲ್ಲಿ ಹೂವುಗಳಿಂದ ಜಯಚಾಮರಾಜ ಒಡೆಯರ್ ಪ್ರತಿಕೃತಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಜ್ಯೋತಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಪಿ.ಎಸ್.ಕಾಂತರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಸೇರಿದಂತೆ ಇನ್ನಿತರ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT