ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಭಾಗಶಃ ಬಂದ್

ಎರಡು ರೈತ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ
Last Updated 29 ಸೆಪ್ಟೆಂಬರ್ 2020, 6:43 IST
ಅಕ್ಷರ ಗಾತ್ರ

ನಂಜನಗೂಡು: ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಸೋಮವಾರ ನೀಡಿದ್ದ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ಸಂಸ್ಥೆ ಬಸ್, ಆಟೊಗಳು ಎಂದಿನಂತೆ ಸಂಚರಿಸಿದವು, ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಸರ್ಕಾರಿ ಕಚೇರಿ, ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ದಿನಸಿ, ಔಷಧಿ ಅಂಗಡಿ, ವೈನ್ ಸ್ಟೋರ್‌ಗಳು ಎಂದಿನಂತೆ ವ್ಯವಹಾರ ನಡೆಸಿದವು.

ನಗರದ ರಾಷ್ಟ್ರಪತಿ ರಸ್ತೆ, ಮಹಾತ್ಮ ಗಾಂಧಿ ರಸ್ತೆಯ ಪ್ರಮುಖ ಅಂಗಡಿ ಹಾಗೂ ಹೋಟೆಲ್‌ಗಳ ಮಾಲೀಕರು ಬೆಂಬಲ ವ್ಯಕ್ತಪಡಿಸಿ ಅಂಗಡಿ ಮುಚ್ಚಿದ್ದರು.

ತಾಲ್ಲೂಕಿನ ಎರಡು ರೈತ ಸಂಘದ ಬಣಗಳ ನೇತೃತ್ವದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆಗಳು ನಡೆದವು. ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಬಡಗಲಪುರ ನಾಗೇಂದ್ರ ಬಣದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕಬ್ಬು ಬೆಳೆಗಾರರ ಸಂಘ, ಕಾರ್ಮಿಕ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ದ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತರ ಭೂಮಿಯ ಮೇಲಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಎ.ಪಿ.ಎಂ.ಸಿ. ಕಾಯ್ದೆತಿದ್ದುಪಡಿ ಮೂಲಕ ಬಂಡವಾಳಶಾಹಿ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿದೆ. ಬಲಿಷ್ಠವಾಗಿದ್ದ ಕಾರ್ಮಿಕ ಕಾಯ್ದೆಯನ್ನು ಬಲಹೀನಗೊಳಿಸಿ, ಕಾರ್ಮಿಕರ ಉದ್ಯೋಗವನ್ನು ಕಿತ್ತುಕೊಂಡು ಬೀದಿಪಾಲು ಮಾಡುತ್ತಿದೆ’ ಎಂದು ಆರೋಪಿಸಿದರು.

ಪ್ರತಿಭಟನಕಾರರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ನಂತರ, ನಗರದಲ್ಲಿ ಮೆರವಣಿಗೆ ನಡೆಸಿ, ಅಂಗಡಿಗಳನ್ನು ಬಂದ್ ಮಾಡಿಸಲು ಪ್ರಯತ್ನಿಸಿದಾಗ, ಸ್ಥಳದಲ್ಲಿದ್ದ ಪೊಲೀಸರು ಮೆರವಣಿಗೆ ನಡೆಸಲು ಅವಕಾಶವಿಲ್ಲ ಎಂದು ತಡೆದರು. ಆಗ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಪೊಲೀಸರು ಮೆರವಣಿಗೆ ನಡೆಸಲು ಯತ್ನಿಸಿದ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಿದರು.

ತಾಲ್ಲೂಕು ಕಚೇರಿಗೆ ಮುತ್ತಿಗೆ

ನಗರದ ತಾಲ್ಲೂಕು ಕಚೇರಿಗೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಹಸಿರು ಸೇನೆ, ಬಿ.ಎಸ್.ಪಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿದ್ಯಾಸಾಗರ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಸಣ್ಣ ಹಿಡುವಳಿದಾರ ರೈತರ ಭೂಮಿಯನ್ನು ಕಸಿದುಕೊಂಡು ಬೀದಿಪಾಲು ಮಾಡುವ ಸಂಚು ನಡೆಸುತ್ತಿದೆ. ದೇವರಾಜ ಅರಸರ ಕಾಲದಲ್ಲಿ ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆಯ ಮೂಲಕ ಉಳುವವನೇ ಭೂಮಿಯ ಒಡೆಯ ಎಂದು ಸಾಬೀತು ಮಾಡಿ ತೋರಿಸಿದ್ದರು. ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರೀಮಂತರ ಪರವಾಗಿದ್ದು, ಉಳ್ಳವರನ್ನು ಭೂಮಿಯ ಒಡೆಯರನ್ನಾಗಿಸುತ್ತಿವೆ’ ಎಂದು ಆಕ್ರೋಶ ವ್ತಕ್ತಪಡಿಸಿದರು.

‘ರೈತರು ಇನ್ನು ಮುಂದೆ ತಾವು ಬೆಳೆದ ಉತ್ಪನ್ನಗಳನ್ನು ಅಂಬಾನಿ, ಅದಾನಿಗಳ ಮರ್ಜಿಯಂತೆ ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ. ಆದ್ದರಿಂದ ಭೂಸುಧಾರಣೆ, ಎ.ಪಿ.ಎಂ.ಸಿ ಹಾಗೂ ಕಾರ್ಮಿಕ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್, ಹಿಮ್ಮಾವು ರಘು, ಹಸಿರು ಸೇನೆಯ ಬಂಗಾರ ಸ್ವಾಮಿ, ಹೆಜ್ಜಿಗೆ ಪ್ರಕಾಶ್, ಗುರುಲಿಂಗೇಗೌಡ, ಅಂಬಳೆ ಮಂಜುನಾಥ್, ಹಾಡ್ಯ ರವಿ, ಕಣೇನೂರು ಜಗದೀಶ್, ಹರತಲೆ ಕೆಂಪಣ್ಣ, ದುಗ್ಗಹಳ್ಳಿ ಶಿವನಾಗಪ್ಪ, ದಲಿತ ಸಂಘರ್ಷ ಸಮಿತಿಯ ಮಲ್ಲಹಳ್ಳಿ ನಾರಾಯಣ, ಶಂಕರಪುರ ಸುರೇಶ್, ಮಂಜು, ಬೊಕ್ಕಳ್ಳಿ ಲಿಂಗಯ್ಯ, ಶಿರಮಳ್ಳಿ ಮಂಜುನಾಥ್, ನಗರಸಭೆ ಸದಸ್ಯರಾದ ಮಹೇಶ್, ಗಾಯತ್ರಿ, ಗಂಗಾಧರ್, ಸಿದ್ದಿಕ್, ತಾಲ್ಲೂಕು ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಮುಖಂಡರಾದ ಸಿ.ಎಂ.ಶಂಕರ್, ಅಕ್ಬರ್ ಅಲೀಂ, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT