ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎನ್‌ಇಪಿ: ಸಚಿವ ಬಿ.ಸಿ. ನಾಗೇಶ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್
Last Updated 29 ಜುಲೈ 2022, 9:35 IST
ಅಕ್ಷರ ಗಾತ್ರ

ಮೈಸೂರು: ‘ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದ್ದು, ದೇಶವನ್ನು ವಿಶ್ವದ‍ಪರಮ ಗುರುವಾಗಿಸಲಿದೆ’ ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.

ಬೋಗಾದಿಯ ಬಾಪೂಜಿ ಬಡಾವಣೆಯಲ್ಲಿ ಶುಕ್ರವಾರ ಜೆಎಸ್‌ಎಸ್‌ ಬಾಲಕಿಯರ ಪದವಿಪೂರ್ವ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿ, ‘ಬ್ರಿಟಿಷ್‌ ಮಾದರಿಯ ಶಿಕ್ಷಣವೇ ಇನ್ನೂ ಜಾರಿಯಲ್ಲಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸಲುದೇಶೀಯವಾದ ಶಿಕ್ಷಣ ನೀತಿ ಜಾರಿ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿಯೇ ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ರಾಜ್ಯವು ಜಾರಿಗೊಳಿಸುತ್ತಿದ್ದು, ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ಅನುಷ್ಠಾನದಲ್ಲಿ ಸರ್ಕಾರಕ್ಕಿಂತ ಮುಂದಿದೆ’ ಎಂದು ಶ್ಲಾಘಿಸಿದರು.

‘ಎನ್‌ಇಪಿ ಅನುಷ್ಠಾನಕ್ಕೆ ಶಾಲಾ– ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯ ಇರಬೇಕು. ಹೊಸ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಪರಿಕರಗಳು ಲಭ್ಯವಿವೆ.ಗುಣಮಟ್ಟದ ಶಿಕ್ಷಣವನ್ನು ಜೆಎಸ್‌ಎಸ್‌ ಸಂಸ್ಥೆಯು ನೀಡುವ ಮೂಲಕ ಮಾದರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ. ಮೈಸೂರಿನಲ್ಲಿ ವಸತಿ ಕಾಲೇಜು ಆರಂಭಕ್ಕೂ ಮುಂದಾಗಬೇಕು’ ಎಂದರು.

‘‌ಭಾರತೀಯ ಸಮಾಜ ವ್ಯವಸ್ಥೆಯು ಕ್ರಮಬದ್ಧವಾಗಿ ರೂಪುಗೊಂಡಿದೆ. ಆದರೆ, ಮೆಕಾಲೆ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಲಾಗಿದೆ. ಇದೀಗ ಕೇಂದ್ರ ಸರ್ಕಾರವು ಸ್ಥಳೀಯ ಆಚಾರ, ವಿಚಾರಗಳಿಗೆ ಒತ್ತು ನೀಡುವ ಶಿಶು ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಆಶಯವೂ ಇದೇ ಆಗಿತ್ತು’ ಎಂದು ಹೇಳಿದರು.

‘ಸಮಾಜದಲ್ಲಿ ಹಣದ ಮೇಲೆ ವ್ಯಾಮೋಹ ಹೆಚ್ಚಾಗಿದ್ದು, ಸಾಮಾಜಿಕ ಬದ್ಧತೆಯು ಕಡಿಮೆಯಾಗಿದೆ. ಮಾನವೀಯತೆಗೆ ಬೆಲೆಯಿಲ್ಲದಾಗಿದೆ. ಹೀಗಾಗಿಯೇ ಅನೈತಿಕತೆ ಹೆಚ್ಚಿದೆ. ಸಂಸ್ಕೃತಿ– ಸಂಸ್ಕಾರ ಕಲಿಸುವ ಶಿಕ್ಷಣ ಬೇಕಿದೆ. ಸುತ್ತೂರು ಮಠವು ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಜೊತೆಹೆ ಗುಣಮಟ್ಟದ ಶಿಕ್ಷಣವನ್ನು ನೀಡಿ ನಾಡನ್ನು ರೂ‍ಪಿಸುವ ಕೆಲಸದಲ್ಲಿ ನಿರತವಾಗಿದೆ’ ಎಂದರು.

ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ‘ಬಡವರು ಸೇರಿದಂತೆ ಎಲ್ಲ ಸಮುದಾಯಕ್ಕೂಜಾತ್ಯತೀತವಾಗಿ ಶಿಕ್ಷಣ ನೀಡುತ್ತಿರುವ ಜೆಎಸ್‌ಎಸ್‌ ಸಂಸ್ಥೆಯು ನಾಡಿನ ಹೆಮ್ಮೆಯಾಗಿದೆ’ ಎಂದು ತಿಳಿಸಿದ ಅವರು, ‘ಚಾಮುಂಡೇಶ್ವರಿ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಹೊಸ ಕೊಠಡಿಗಳನ್ನು ಕಟ್ಟಲು ಅನುದಾನ ಬಿಡುಗಡೆ ಮಾಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಬಿಜೆಪಿ ಮುಖಂಡ ಅರುಣ್‌ ಶಹ‍ಪುರ ಮಾತನಾಡಿ, ‘ವಸತಿ ಶಾಲೆಗಳನ್ನು ಜೆಎಸ್‌ಎಸ್‌ ಸಂಸ್ಥೆಯು ಆರಂಭಿಸಿದೆ. ಹಾಗೆಯೇ ವಸತಿ ಕಾಲೇಜುಗಳನ್ನು ಸ್ಥಾಪಿಸಿದರೆ ರಾಜ್ಯದ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ವೀಣಾ ನಾಗೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT