ಸಹಕಾರ ಸಚಿವಾಲಯ ರಚನೆ ಐತಿಹಾಸಿಕ ಹೆಜ್ಜೆ: ಎಸ್.ಟಿ.ಸೋಮಶೇಖರ್

ಮೈಸೂರು: ಕೇಂದ್ರ ಸರ್ಕಾರವು ನೂತನ ಸಹಕಾರ ಸಚಿವಾಲಯ ಸ್ಥಾಪಿಸುತ್ತಿರುವುದು ಸಹಕಾರ ಕ್ಷೇತ್ರದ ಬೆಳವಣಿಗೆ ನಿಟ್ಟಿನಲ್ಲಿ ಮಹತ್ವದ ಹಾಗೂ ಐತಿಹಾಸಿಕ ಹೆಜ್ಜೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಇಲ್ಲಿ ಬಣ್ಣಿಸಿದರು.
‘ಅಭಿವೃದ್ಧಿ ಪಥದಲ್ಲಿ ಸಾಗಲು ಹಾಗೂ ವಿವಿಧ ರಾಜ್ಯ ಸಹಕಾರ ಸಂಘಗಳಲ್ಲಿ ಶಿಸ್ತು ಮೂಡಿಸಲು ಈ ನಡೆ ಸಹಕಾರಿ ಆಗಲಿದೆ. ಈ ಮೂಲಕ ಮಹಾತ್ಮ ಗಾಂಧಿ ಅವರ ಆಶಯವೂ ಪೂರ್ಣವಾಗಬಲ್ಲದು. ಇದಕ್ಕೆ ಕಾರಣವಾಗಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ವೈಯಕ್ತಿಕವಾಗಿ ಹಾಗೂ ಎಲ್ಲಾ ಸಹಕಾರಿಗಳು, ರೈತಾಪಿ ವರ್ಗದ ಪರವಾಗಿ ಅಭಿನಂದನೆ ಸಲ್ಲಿಸುವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೇಂದ್ರ ಸರ್ಕಾರದಿಂದ ನಮ್ಮ ಇಲಾಖೆಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಪಡೆಯುವಲ್ಲಿ ಇದರಿಂದ ಅನುಕೂಲವಾಗಲಿದೆ. ರೈತಾಪಿ ವರ್ಗ ಮತ್ತು ಸಹಕಾರಿಗಳಿಗೂ ಅನುಕೂಲವಾಗಲಿದ್ದು, ಅವರ ಅಭ್ಯುದಯಕ್ಕೆ ಶ್ರಮಿಸಲು ಪೂರಕವಾಗಲಿದೆ’ ಎಂದರು.
ಮೋದಿ ಸಂಪುಟಕ್ಕೆ ರಾಜ್ಯದಿಂದ ನಾಲ್ವರು, ಇಲ್ಲಿದೆ ಎಲ್ಲ ನೂತನ ಸಚಿವರ ಪಟ್ಟಿ
‘ಕೇಂದ್ರದಲ್ಲಿಯೂ ಸಹಕಾರ ಸಚಿವಾಲಯ ಸ್ಥಾಪನೆಯಾಗಬೇಕೆಂಬುದು ಸಹಕಾರ ಕ್ಷೇತ್ರದ ಹಲವಾರು ವರ್ಷಗಳ ಕನಸಾಗಿತ್ತು. ಸಹಕಾರ ಭಾರತಿ ವತಿಯಿಂದ ಒತ್ತಾಯ ಕೂಡ ಮಾಡಲಾಗಿತ್ತು. ಎಂದೋ ಸ್ಥಾಪನೆಯಾಗಬೇಕಿದ್ದ ಸಚಿವಾಲಯಕ್ಕೆ ಮೋದಿ ಆಡಳಿತದಲ್ಲಿ ಕಾಲ ಕೂಡಿ ಬಂದಿದೆ. ಸಹಕಾರದಿಂದ ಸಮೃದ್ಧಿ ಎಂಬ ತತ್ವಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರದ ಕ್ರಮ ಮಾದರಿ ಹೆಜ್ಜೆಯಾಗಿದೆ’ ಎಂದರು.
‘ರಾಜ್ಯದಲ್ಲಿ ಸುಮಾರು 43 ಸಾವಿರ ಸಹಕಾರಿ ಸಂಸ್ಥೆಗಳು ಹಾಗೂ ಐದು ಸಾವಿರ ಸೌಹಾರ್ದ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, 2.5 ಕೋಟಿ ಸದಸ್ಯರಿದ್ದಾರೆ. ದೇಶದಲ್ಲಿ 48 ಕೋಟಿ ಸಹಕಾರಿ ಸದಸ್ಯರಿದ್ದಾರೆ. ಈ ಎಲ್ಲರಿಗೂ ಈಗ ಒಂದು ವ್ಯವಸ್ಥೆ ರೂಪುಗೊಂಡಿದ್ದು, ಸಮುದಾಯ ಆಧಾರಿತ ಅಭಿವೃದ್ಧಿಯನ್ನು ಸಹಭಾಗಿತ್ವದಲ್ಲಿ ಕೊಂಡೊಯ್ಯಲು ಸಹಕಾರಿಯಾದಂತಾಗಿದೆ’ ಎಂದು ಮಾಹಿತಿ ನೀಡಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವುದರಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ. ಸಹಕಾರಿ ವಲಯಕ್ಕೆ ಒಂದು ಚೌಕಟ್ಟು ನಿರ್ಮಾಣವಾಗಲಿದೆ. ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗಳ ರಚನೆಗೆ ಅನುಕೂಲವಾಗಲಿದೆ’ ಎಂದು ನುಡಿದರು.
ನಾಚಿಕೆಯಾಗಬೇಕು: ಹರಿಯಾಣ ಬಿಜೆಪಿ ನಾಯಕನ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.