ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ಮುಂದಿನ ವರ್ಷ ಸಿಗಬಹುದು ಲಸಿಕೆ, ಅಲ್ಲಿವರೆಗೆ ಇರಲಿ ಎಚ್ಚರ: ‌ಮಂಜುನಾಥ್

ಸರಳ, ಸಾಂಪ್ರದಾಯಿಕ, ವರ್ಚ್ಯುವಲ್‌ ದಸರಾಗೆ ವಿಧ್ಯುಕ್ತ ಚಾಲನೆ: ಚಾಮುಂಡೇಶ್ವರಿಗೆ ಅಗ್ರ ಪೂಜೆ
Last Updated 17 ಅಕ್ಟೋಬರ್ 2020, 12:23 IST
ಅಕ್ಷರ ಗಾತ್ರ

ಮೈಸೂರು: ಸರಳ, ಸಾಂಪ್ರದಾಯಿಕ ಹಾಗೂ ವರ್ಚ್ಯುವಲ್‌ ದಸರಾಗೆ ಶನಿವಾರ ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 7.47ಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಕೊರೊನಾ ವಾರಿಯರ್‌, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.‌ಮಂಜುನಾಥ್‌, ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾದ ದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಅಗ್ರಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವ ಉದ್ಘಾಟಿಸಿದರು.

ತಮ್ಮ ಜೀವದ ಹಂಗನ್ನು ತೊರೆದು, ಕೊರೊನಾ ವೈರಸ್‌ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆರು ಕೊರೊನಾ ವಾರಿಯರ್‌ಗಳನ್ನು ಹಾಗೂ ವೈದ್ಯರನ್ನು ಸನ್ಮಾನಿಸಿದ ವಿಶಿಷ್ಟ ದಸರಾಕ್ಕೆ ಚಾಮುಂಡಿ ಬೆಟ್ಟ ಸಾಕ್ಷಿಯಾಯಿತು.

ಉತ್ಸವ ಉದ್ಘಾಟಿಸಿ ಮಾತನಾಡಿದ ಡಾ.ಮಂಜುನಾಥ್‌, ‘ಕೊರೊನಾ ವೈರಸ್‌ ಸೋಂಕಿನ ಪ್ರಭಾವ ಇಳಿಮುಖವಾಗುವ ಲಕ್ಷಣ ಕಾಣಿಸುತ್ತಿಲ್ಲ. ಲಸಿಕೆಯ ಹಲವಾರು ಪ್ರಯೋಗಗಳು ಮೂರನೇ ಹಂತ ತಲುಪಿದ್ದು, ಮುಂದಿನ ವರ್ಷ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಶುಚಿತ್ವ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು’ ಎಂದರು.

‘ಈ ಸಂಕಷ್ಟದ ಕಾಲದಲ್ಲಿ ವೈದ್ಯರು ಪ್ರತಿಯೊಬ್ಬ ರೋಗಿಯ ಚೇತರಿಕೆಗೆ ಶ್ರಮಿಸುತ್ತಿದ್ದಾರೆ. ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಒತ್ತಡ, ಆತಂಕದ ನಡುವೆಯೇ ತಿಂಗಳಾನುಗಟ್ಟಲೇ ಕುಟುಂಬದವರಿಂದ ದೂರ ಇದ್ದು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯವೂ ಹದಗೆಡುತ್ತಿದೆ. ಇದರೊಂದಿಗೆ, ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ದುರಿತ ಕಾಲವನ್ನು ದೇವಿ ಚಾಮುಂಡೇಶ್ವರಿಯು ದೂರ ಮಾಡಲಿ’ ಎಂದು ಪ್ರಾರ್ಥಿಸಿದರು.

ಕೋವಿಡ್‌ ಕಾರಣದಿಂದಾಗಿ, ನಾಡಹಬ್ಬವನ್ನು ಸರಳವಾಗಿ ಆಚರಿಸಬೇಕಾಗಿ ಬಂದ ಅನಿವಾರ್ಯತೆ ಹಾಗೂ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವಿವರಿಸಿದರು. ಈ ಬಾರಿಯ ದಸರಾವನ್ನು, ವರ್ಚ್ಯುವಲ್‌ ವೇದಿಕೆಯ ಮೂಲಕ ಮನೆಯಲ್ಲಿಯೇ ಕುಳಿತು ವೀಕ್ಷಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಶಾಸಕ ಜಿ.ಟಿ.‌ದೇವೇಗೌಡ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲಾ ಕೆರೆ–ಕಟ್ಟೆಗಳು ಭರ್ತಿಯಾಗಿ ನಾಡು ಸಮೃದ್ಧವಾಗಿದೆ’ ಎಂದು ಹೊಗಳಿದರು.

ಜನದಟ್ಟಣೆ ತಪ್ಪಿಸಲೆಂದು, ಮುನ್ನೆಚ್ಚರಿಕೆ ಕ್ರಮವಾಗಿ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಇನ್ನೂರು ಜನರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ಸರಳವಾಗಿ ನಡೆದ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್, ಎನ್‌.ಮಹೇಶ್‌, ಬಿ.ಹರ್ಷವರ್ಧನ್‌, ಸಿ.ಎಸ್‌.ನಿರಂಜನಕುಮಾರ್‌, ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್,ಮೇಯರ್‌ ತಸ್ನಿಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವಾಗತಿಸಿದರು.

ಅಭಿವೃದ್ಧಿಗೆ ₹ 7.5 ಕೋಟಿ: ಬಿಎಸ್‌ವೈ

ಚಾಮುಂಡಿ ಬೆಟ್ಟದಲ್ಲಿನ ದೇವಿಕೆರೆ, ಹೀರೆಕೆರೆ ಅಭಿವೃದ್ಧಿಗಾಗಿ ಹಾಗೂ ಈ ಕೆರೆಯಿಂದ ಬೆಟ್ಟಕ್ಕೆ ಬರುವ ಮೆಟ್ಟಿಲುಗಳು ಹಾಗೂ ದೀಪದ ವ್ಯವಸ್ಥೆ ದುರಸ್ತಿಗಾಗಿ ₹ 7.5 ಕೋಟಿ ಮಂಜೂರು ಮಾಡಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದಸರಾ ಉದ್ಘಾಟನಾ ಸಮಾರಂಭದಲ್ಲೇ ಆದೇಶಿಸಿದರು.

ನಿತ್ಯವೂ ಚಾಮುಂಡಿ ದೇವಿಗೆ ಇದೇ ಕೆರೆಗಳಿಂದ ನೀರು ತಂದು ಅಭಿಷೇಕ ಮಾಡಲಾಗುತ್ತಿದ್ದು, ಕೆರೆ ಅಭಿವೃದ್ಧಿಗೆ ಹಾಗೂ ಮೆಟ್ಟಿಲುಗಳ ದುರಸ್ತಿಗೆ ಸಚಿವರು ಹಾಗೂ ಶಾಸಕರು ಮನವಿ ಸಲ್ಲಿಸಿದ್ದರು.

ಮಹಿಷ ದಸರಾ: ಪ್ರತಾಪಸಿಂಹ ಕಿಡಿ

‘ದೆವ್ವವನ್ನು ದೇವರನ್ನಾಗಿ ಮಾಡುವ, ದೇವಿಯನ್ನು ದೆವ್ವವನ್ನಾಗಿ ಬಿಂಬಿಸುವ ಪ್ರಯತ್ನ ಮೈಸೂರಿನಲ್ಲಿ ನಡೆಯುತ್ತಿತ್ತು. ಆದರೆ, ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರ ಬಂದ ಮೇಲೆ ಎರಡು ವರ್ಷಗಳಿಂದ ಅದಕ್ಕೆ ಕಡಿವಾಣ ಬಿದ್ದಿದೆ’ ಎಂದು ಸಂಸದ ಪ್ರತಾಪಸಿಂಹ, ಪರೋಕ್ಷವಾಗಿ ಮಹಿಷ ದಸರಾ ಆಚರಣೆ ವಿರುದ್ಧ ಹರಿಹಾಯ್ದರು.

‘ವೈವಿಧ್ಯದಲ್ಲಿ ಏಕತೆ ಎನ್ನುವುದು ಹಿಂದೂ ಧರ್ಮದ ಅಂತಃಸತ್ವ. ಆದರೆ ಬಹಳಷ್ಟು ಜನ ಇದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸುವ ಆಚರಣೆಗಳು ಬೇರೆ ಬೇರೆಯಾಗಿದ್ದರೂ ಆಚರಣೆಯ ಮೂಲ ಉದ್ದೇಶ ಒಂದೇ ಆಗಿರುತ್ತದೆ. ಬೇರೆ ಧರ್ಮದಲ್ಲಿ ಇಂಥ ದೃಷ್ಟಿ ಕಾಣುವುದಿಲ್ಲ’ ಎಂದರು.

ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ ತೆರವು

ದಸರಾ ಸಂದರ್ಭದಲ್ಲಿ ಜನದಟ್ಟಣೆಯಿಂದ ಕೋವಿಡ್‌ ಹೆಚ್ಚುವ ಆತಂಕದಿಂದಾಗಿ, ಜಿಲ್ಲೆಯಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ದಸರಾ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯ ಪ್ರಕಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ‘ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದ್ದು, ಪ್ರವಾಸಿಗರ ಅನುಕೂಲತೆಯ ದೃಷ್ಟಿಯಿಂದ ನಿರ್ಬಂಧ ಹಿಂತೆಗೆಯುವಂತೆ ಸೂಚಿಸಿದ್ದಾರೆ’ ಎಂದರು.

ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿ ಪಾಲಿಸುವುದರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲು ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಅ.17ರಿಂದ ನ.1ರವರೆಗೆ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT