ಮೈಸೂರು: ರಾಜ್ಯದಲ್ಲಿರುವ ಏಕೈಕ ಕೆಎಆರ್‌ಪಿ ಮೌಂಟೆಡ್ ಕಂಪನಿಯ (ಅಶ್ವಾರೋಹಿ ದಳ) ಮೈಸೂರು ಘಟಕಕ್ಕಿದ್ದ ಪಶುವೈದ್ಯ ಶಾಲೆಯನ್ನು ರಾಜ್ಯ ಸರ್ಕಾರ ಸಿಬ್ಬಂದಿ ಸಮೇತ ಹಂಚ್ಯಾ ಗ್ರಾಮಕ್ಕೆ ಸ್ಥಳಾಂತರಿಸಿ, ಆದೇಶ ಹೊರಡಿಸಿದೆ.
ಇದು ಅಶ್ವಾರೋಹಿ ದಳದಲ್ಲಿನ ಕುದುರೆಗಳ ಆರೋಗ್ಯದ ಮೇಲೆ ನಿಗಾ ವಹಿಸಲು ಹಾಗೂ ಸಕಾಲಕ್ಕೆ ಅವುಗಳಿಗೆ ಚಿಕಿತ್ಸೆ ಒದಗಿಸುವುದಕ್ಕೆ ಅಡ್ಡಿಯಾಗಲಿದೆ ಎನ್ನಲಾಗಿದೆ.
‘ಪಶುವೈದ್ಯ ಶಾಲೆಯ ಸ್ಥಳಾಂತರದಿಂದ ಅಶ್ವಾರೋಹಿ ದಳಕ್ಕೆ ತುಂಬಾ ಸಮಸ್ಯೆ ಆಗಲಿದೆ. ಕುದುರೆಗಳ ಆರೋಗ್ಯ ತುಂಬಾ ಸೂಕ್ಷ್ಮ. ಹೊಟ್ಟೆನೋವು ಕಾಣಿಸಿಕೊಂಡ ಒಂದು ತಾಸಿನೊಳಗೆ ಚಿಕಿತ್ಸೆ ಸಿಗದಿದ್ದರೆ ಮೃತಪಡಲಿವೆ’ ಎಂದು ಕೆಎಆರ್‌ಪಿ ಮೌಂಟೆಡ್ ಕಂಪನಿಯ ಕಮಾಂಡೆಂಟ್ ಎಂ.ಜಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿರುವೆ. ಕುದುರೆಗಳು ರಾತ್ರಿ ವೇಳೆಯೇ ಹೊಟ್ಟೆ ನೋವಿನಿಂದ ಬಳಲುವುದು ಹೆಚ್ಚು. ವಾರಕ್ಕೊಂದಾದರೂ ಕುದುರೆ ಅನಾರೋಗ್ಯಕ್ಕೀಡಾಗುತ್ತದೆ. ಚರ್ಮದ ಅಲರ್ಜಿಯೂ ಕಾಡಲಿದೆ. ನಮ್ಮಲ್ಲಿಯೇ ವೈದ್ಯರಿದ್ದರಿಂದ ತಕ್ಷಣಕ್ಕೆ ಚಿಕಿತ್ಸೆ ಕೊಡಿಸುತ್ತಿದ್ದವು. ಮುಂದಿನ ದಿನಗಳಲ್ಲಿ ಏನು ಮಾಡಬೇಕು ? ಎಂಬುದೇ ತೋಚದಾಗಿದೆ’ ಎಂದು ಅವರು ಹೇಳಿದರು.
‘ಮೈಸೂರು ಸಂಸ್ಥಾನದ ಮಹಾರಾಜರಿಂದ ರಾಜ್ಯ ಸರ್ಕಾರಕ್ಕೆ 1951ರಲ್ಲಿ ಹಸ್ತಾಂತರಗೊಂಡ ದಿನದಿಂದಲೂ, ಪಶುಪಾಲನಾ ಇಲಾಖೆ ಈ ಘಟಕದಲ್ಲಿನ ಅಶ್ವಗಳ ಆರೋಗ್ಯದ ನಿಗಾ ವಹಿಸಿತ್ತು’ ಎಂದು ನಾಗರಾಜ್ ತಿಳಿಸಿದರು.
‘ನಮ್ಮ ಘಟಕದಲ್ಲೇ ಪಶುವೈದ್ಯ ಶಾಲೆ ಉಳಿಸಿಕೊಳ್ಳಲಿಕ್ಕಾಗಿ ಮೈಸೂರು ನಗರ ಪೊಲೀಸ್ ಆಯುಕ್ತರು, ಡಿಜಿ ಹಾಗೂ ಪಶುಪಾಲನಾ ಇಲಾಖೆಯ ಆಯುಕ್ತರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು’ ಎಂದು ಅವರು ಹೇಳಿದರು.
ತೊಂದರೆಯಾಗದಂತೆ ಚಿಕಿತ್ಸೆ
‘ಘಟಕದಲ್ಲಿರುವ ಕುದುರೆಗಳ ಸಂಖ್ಯೆ ಕಡಿಮೆಯಿದೆ. ಇವುಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಇ.ಸುರೇಶ್ ಹೇಳಿದರು.
ಕೆಎಆರ್‌ಪಿ ಮೌಂಟೆಡ್ ಕಂಪನಿಯ ಘಟಕದಲ್ಲಿದ್ದ ಪಶುವೈದ್ಯ ಶಾಲೆಯ ಸಿಬ್ಬಂದಿಗೆ ಪಶುಪಾಲನಾ ಇಲಾಖೆಯೇ ವೇತನ, ಔಷಧಿ ಒದಗಿಸುತ್ತಿದೆ. ಇದೂ ಸಹ ಪಶುವೈದ್ಯ ಶಾಲೆಯ ಸ್ಥಳಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದೆ.
‘ಪೊಲೀಸ್ ಇಲಾಖೆಯ ಕುದುರೆ, ಶ್ವಾನಗಳಿಗಷ್ಟೇ ಅಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಹೊರಗಿನ ಜಟಕಾ ಗಾಡಿಯ ಕುದುರೆಗಳಿಗೂ ಚಿಕಿತ್ಸೆ ಕೊಡಲ್ಲ. ಪೊಲೀಸ್ ಇಲಾಖೆಯು ಅರಣ್ಯ ಇಲಾಖೆ, ಪಾಲಿಕೆಯಂತೆ ನಿಯೋಜನೆ ಮೇರೆಗೆ ಪಶುವೈದ್ಯರ ಸೇವೆ ಪಡೆಯಲು ಅವಕಾಶವಿದೆ’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಇ.ಸುರೇಶ್ ಹೇಳಿದರು.
ಆರ್ಥಿಕ ಹೊರೆ ತಗ್ಗಿಸಲು ಸ್ಥಳಾಂತರ
‘ಹಂಚ್ಯಾ ಗ್ರಾಮದಲ್ಲಿ ಹೊಸದಾಗಿ ಪಶುವೈದ್ಯ ಸಂಸ್ಥೆಯನ್ನು ತೆರೆಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಹೊಸ ಘಟಕ ಆರಂಭಿಸುವ ಬದಲು ಕೆಎಆರ್‌ಪಿ ಮೌಂಟೆಡ್ ಕಂಪನಿಯ ಘಟಕದಲ್ಲಿನ ಪಶುವೈದ್ಯ ಶಾಲೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಸರ್ಕಾರಕ್ಕೆ ಆರ್ಥಿಕ ಹೊರೆಯೂ ತಗ್ಗಿದಂತಾಗುತ್ತದೆ’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ವರದಿ ನೀಡಿದ್ದಾರೆ. ಈ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಈ ವರದಿ ಆಧಾರದಲ್ಲೇ ಘಟಕದ ಸ್ಥಳಾಂತರ ಆದೇಶವನ್ನು ಪಶುಪಾಲನಾ ಇಲಾಖೆ ಹೊರಡಿಸಿದೆ ಎನ್ನಲಾಗಿದೆ.
ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರ ನಡುವಿನ ಆಂತರಿಕ ಸಂಘರ್ಷವೂ ಸ್ಥಳಾಂತರದಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂಬುದು ತಿಳಿದು ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.