ಮಂಗಳವಾರ, ಜನವರಿ 21, 2020
19 °C
ಮೈಸೂರಿನ ಶಾಂತಿಗೆ ಹುಳಿಹಿಂಡುವ ಸಂಸದ: ಎಸ್‌ಡಿಪಿಐ ಆಕ್ರೋಶ

ಪ್ರತಾಪ ಸಿಂಹಗಿಲ್ಲ ನೈತಿಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಎಸ್‌ಡಿಪಿಐ ಬಗ್ಗೆ ಮಾತನಾಡುವ, ಟೀಕಿಸುವ ನೈತಿಕತೆ ಸಂಸದ ಪ್ರತಾಪ ಸಿಂಹಗಿಲ್ಲ’ ಎಂದು ಮುಖಂಡ ಅಮ್ಜದ್‌ ಖಾನ್ ವಾಗ್ದಾಳಿ ನಡೆಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮೈಸೂರಿನ ಮಿಲಾದ್‌ ಪಾರ್ಕ್‌ ಬಳಿ ಜನರು ಗುಂಪುಗೂಡಿ ಗಲಾಟೆಗೆ ಯತ್ನಿಸಿದ ಹಿಂದೆ ಸಂಸದರ ಕೈವಾಡವಿದೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪೊಲೀಸ್ ನಿಯಮಾವಳಿಗಳಿಗೆ ಕಿಂಚಿತ್ ಗೌರವ ಕೊಡದೆ ಬ್ಯಾರಿಕೇಡ್ ಮುರಿದು ಹಾಕಿದ ಪ್ರತಾಪ ಸಿಂಹಗೆ ಎಸ್‌ಡಿಪಿಐ ಟೀಕಿಸುವ ಯಾವುದೇ ನೈತಿಕತೆಯಿಲ್ಲ’ ಎಂದು ಪುನರುಚ್ಚರಿಸಿದರು.

‘ಮೈಸೂರು ಪೊಲೀಸರು ದಕ್ಷರಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೈಸೂರಿನ ಶಾಂತಿಗೆ ಹುಳಿ ಹಿಂಡುವ ಕೆಲಸ ನಿಲ್ಲಿಸಿ’ ಎಂದು ಅಮ್ಜದ್ ಖಾನ್ ಸಂಸದರ ವಿರುದ್ಧ ಕಿಡಿಕಾರಿದರು.

ಎಲ್ಲಿ ಮಲಗಿದ್ದರು ?: ‘ಪೌರತ್ವ (ತಿದ್ದುಪಡಿ) ಕಾಯ್ದೆ ಕಾಂಗ್ರೆಸ್‌ನ ಕೂಸು. ಆದರೆ ಇದೀಗ ಕಾಂಗ್ರೆಸ್ಸಿಗರೇ ವಿರೋಧಿಸಲಾರಂಭಿಸಿದ್ದಾರೆ. ಇಷ್ಟು ದಿನ ಎಲ್ಲಿ ಮಲಗಿದ್ದರು ? ಇನ್ನಾದರೂ ಯಾವುದೋ ಮೂಲೆಯಲ್ಲಿ ಕಾಯ್ದೆಯ ಪ್ರತಿ ಸುಡುವ ಬದಲು, ನೈಜ ಕಳಕಳಿಯಿದ್ದರೆ, ಬೀದಿಗಿಳಿದು ಹೋರಾಡಿ’ ಎಂದು ಕಾಂಗ್ರೆಸ್‌ ನಿಲುವನ್ನು ಟೀಕಿಸಿದರು.

‘ಶಾಸಕ ಯು.ಟಿ.ಖಾದರ್ ಹೇಳಿಕೆ ಖಂಡನಾರ್ಹವಾದುದು. ಅಸಂವಿಧಾನಿಕ ಹೇಳಿಕೆಯನ್ನು ಯಾರೂ ಬೆಂಬಲಿಸಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅಮ್ಜದ್‌ಖಾನ್ ಪ್ರತಿಕ್ರಿಯಿಸಿದರು.

ಸಂಘಿ ಮನೋಭಾವ: ‘ಅಪ್ರಚೋದಿತವಾಗಿ ಗುಂಡು ಹಾರಿಸಿ ಯುವಕರ ಸಾವಿಗೆ ಕಾರಣರಾದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಮೃತರ ಕುಟುಂಬಗಳಿಗೆ ತಲಾ ₹ 1 ಕೋಟಿ, ಗಾಯಾಳುಗಳಿಗೆ ₹ 25 ಲಕ್ಷ ಪರಿಹಾರ ಕೊಡಬೇಕು’ ಎಂದು ಇದೇ ಸಂದರ್ಭ ಎಸ್‌ಡಿಪಿಐ ಮುಖಂಡ ಆಗ್ರಹಿಸಿದರು.

'ಕಲ್ಲಡ್ಕ ಗ್ರಾಮದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಂದ ಪ್ರದರ್ಶಿಸಿದ ಆರ್‌ಎಸ್‍ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಸಂಬಂಧಪಟ್ಟ ಶಾಲೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಎಸ್‌ಡಿಪಿಐ ಮುಖಂಡ ದೇವನೂರು ಪುಟ್ಟನಂಜಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು