ಪೊಲೀಸರಿಗೆ ನೀರಿಲ್ಲ!

ಶುಕ್ರವಾರ, ಮೇ 24, 2019
23 °C
3 ದಿನಗಳಿಗೊಮ್ಮೆ ಪೂರೈಕೆ: ಅದೂ ಕುಡಿಯಲು ಯೋಗ್ಯವಲ್ಲದ ನೀರು

ಪೊಲೀಸರಿಗೆ ನೀರಿಲ್ಲ!

Published:
Updated:
Prajavani

ಮೈಸೂರು: ಇಲ್ಲಿನ ಪೊಲೀಸ್ ಬಡಾವಣೆಯ 2ನೇ ಹಂತದಲ್ಲಿರುವ ಸುಮಾರು 3 ಸಾವಿರ ಕುಟುಂಬಗಳಿಗೆ ಕುಡಿಯಲು ಶುದ್ಧವಾದ ನೀರಿಲ್ಲ. 3 ದಿನಗಳಿಗೊಮ್ಮೆ ನೀರು ಬರುತ್ತಿದೆಯಾದರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಸದ್ಯ, ಇಷ್ಟು ನಿವಾಸಿಗಳು ಇರುವ ಒಂದೇ ಒಂದು ನೀರು ಶುದ್ಧೀಕರಣ ಘಟಕದಿಂದ ₹ 5 ಹಾಕಿ ನೀರು ಪಡೆಯಬೇಕಿದೆ.

ಸರ್ದಾರ್ ವಲ್ಲಭಭಾಯ್ ಪಟೇಲ್‌ ನಗರದಲ್ಲಿ ಪೊಲೀಸ್ ನೌಕರರ ಗೃಹನಿರ್ಮಾಣ ಸಹಕಾರ ಸಂಘವು ರಚಿಸಿದ ಬಡಾವಣೆ ಇದು. ಇಲ್ಲಿರುವವರ ಪೈಕಿ ಬಹುತೇಕ ಮಂದಿ ಪೊಲೀಸರು. ಆದರೆ, ಇವರಿಗೆ ಇಲ್ಲಿ ಕುಡಿಯಲು ಶುದ್ಧವಾದ ನೀರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈ ಬಡಾವಣೆಗೆ ಅನುಮತಿ ನೀಡಿದೆ. ನಿವಾಸಿಗಳು ಕಂದಾಯವನ್ನು ‘ಮುಡಾ’ಗೆ ನಿಯತವಾಗಿ ಪಾವತಿಸುತ್ತಿದ್ದಾರೆ. ಆದರೆ, ಕುಡಿಯುವ ನೀರಿನ ಹೊಣೆಗಾರಿಕೆಯಿಂದ ‘ಮುಡಾ’ ಜಾರಿಕೊಂಡಿದೆ. ಕೂಗಳತೆ ದೂರದಲ್ಲಿ ನದಿಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾದರೂ ಇಲ್ಲಿಗೆ ನೀರು ಪೂರೈಕೆಯಾಗುತ್ತಿಲ್ಲ.

ಇಲ್ಲಿರುವ 5 ಕೊಳವೆಬಾವಿಗಳ ಪೈಕಿ ಮೂರು ಈಗಾಗಲೇ ಬತ್ತಿ ಹೋಗಿವೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದವರು ಇಲ್ಲಿದ್ದ ಕೆರೆಯೊಂದನ್ನು ಪುನರುಜ್ಜೀವನಗೊಳಿಸಿದ್ದರಿಂದ ಕೆರೆಯಲ್ಲಿ ಅಲ್ಪಸ್ಪಲ್ವ ನೀರಿದೆ. ಹೀಗಾಗಿ, ಇಲ್ಲಿರುವ 2 ಕೊಳವೆಬಾವಿಗಳಲ್ಲಿ ಮಾತ್ರ ನೀರಿದೆ. ಇದೇ ಈ ಬಡಾವಣೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಮೂಲ.

ಈ ಕೊಳವೆಬಾವಿಗಳಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಕ್ಯಾಲ್ಸಿಯಂ ಅಂಶಗಳು ಹೇರಳವಾಗಿವೆ. ನೇರವಾಗಿ ಕುಡಿದರೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಖಚಿತ ಎಂಬಂತಾಗಿದೆ. ಈ ನೀರೂ ಸಿಗುವುದು ಮೂರು ದಿನಗಳಿಗೊಮ್ಮೆ ಮಾತ್ರ.

ಹಣವಿದ್ದ ಕೆಲವರು ಕೊಳವೆಬಾವಿಗಳನ್ನು ಕೊರೆಸಿಕೊಂಡಿದ್ದಾರೆ. ಮತ್ತೆ ಕೆಲವರು ₹ 500 ಕೊಟ್ಟು ಟ್ಯಾಂಕರ್‌ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಇಲ್ಲದವರು 3 ದಿನಗಳು ಇಲ್ಲವೇ 4 ದಿನಗಳಿಗೊಮ್ಮೆ ಸರಬರಾಜಾಗುವ ಈ ನೀರನ್ನೇ ಅವಲಂಬಿಸಬೇಕಿದೆ. ನೀರಿನ ಶುದ್ಧಿಕರಣಕ್ಕೆ ಹಾಕುವ ವಾಟರ್‌ ಫಿಲ್ಟರ್‌ಗಳು ಕೆಲವೇ ದಿನಗಳಲ್ಲಿ ಕೆಟ್ಟು ಹೋಗುತ್ತಿವೆ. ಹೀಗಾಗಿ, ಇರುವ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪಡೆಯಬೇಕಿದೆ.‌

‘ಇದೇ ಪರಿಸ್ಥಿತಿ ಜೆಎಸ್ಎಸ್ ಬಡಾವಣೆ, ಕೆಎಸ್ಆರ್‌ಟಿಸಿ ಬಡಾವಣೆ, ವಸಂತ ನಗರ, ಪ್ರಕೃತಿ ಬಡಾವಣೆ, ಸಹೃದಯ ಲೇಔಟ್, ಸಪ್ತಮಾತೃಕಾ ಬಡಾವಣೆ ಸೇರಿದಂತೆ ಹಲವೆಡೆ ಇದೆ’ ಎಂದು ಸಮೀಪದ ಜೆಎಸ್ಎಸ್ ಬಡಾವಣೆಯ ಶಿವಪ್ಪ ಹೇಳುತ್ತಾರೆ.

‘ಇದು ಹೆಸರಿಗೆ ಪೊಲೀಸ್ ಲೇಔಟ್. ಇಲ್ಲಿರುವ ಬಹುತೇಕ ಮಂದಿ ಪೊಲೀಸರೇ. ಇವರ ಸಂಸಾರದವರಿಗೆ ನೀರಿಲ್ಲದಂತಹ ಸ್ಥಿತಿ ಇದೆ. ಸರ್ಕಾರ ಈ ಕಡೆ ನೋಡಬೇಕು’ ಎಂದು ಸ್ಥಳೀಯ ನಿವಾಸಿ ನಂಜುಂಡಸ್ವಾಮಿ ಒತ್ತಾಯಿಸುತ್ತಾರೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !