ಶುಕ್ರವಾರ, ಮೇ 27, 2022
21 °C

ಮೈಸೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಂಧನ ಬೆಲೆ ಏರಿಕೆ ಖಂಡಿಸಿ ನಗರದ ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆಗಳು ನಡೆದವು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ದಾಸಪ್ಪ ವೃತ್ತದ ಪೆಟ್ರೋಲ್ ಬಂಕ್‌, ಮಹಿಳಾ ಕಾಂಗ್ರೆಸ್ ಹಾಗೂ ನಗರ ಘಟಕದ ವತಿಯಿಂದ ಧನ್ವಂತರಿ ರಸ್ತೆಯ ಪೆಟ್ರೋಲ್ ಬಂಕ್‌ ಹಾಗೂ ಯುವಕಾಂಗ್ರೆಸ್ ವತಿಯಿಂದ ಮಾನಂದವಾಡಿ ರಸ್ತೆಯ ಎನ್‌ಐಇ ಕಾಲೇಜಿನ ಸಮೀಪದ ಪೆಟ್ರೋಲ್ ಬಂಕ್‌ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಒಟ್ಟು 5 ದಿನ ನಡೆಯುವ ಪ್ರತಿಭಟನೆಯಲ್ಲಿ ಮೊದಲ ದಿನ ಜಿಲ್ಲಾ ಕೇಂದ್ರದಲ್ಲಿನ ಪೆಟ್ರೋಲ್ ಬಂಕ್‌ಗಳು, ನಂತರದ ದಿನಗಳಲ್ಲಿ ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾಹಿತಿ ನೀಡಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಕಡಿಮೆಯಾದರೂ, ದೇಶದಲ್ಲಿ ಇಂಧನ ಬೆಲೆಯನ್ನು ಅವರು ಇಳಿಕೆ ಮಾಡಲಿಲ್ಲ ಎಂದು ಕಿಡಿಕಾರಿದರು‌.

ಮನಮೋಹನ ಸಿಂಗ್ ಅವರು ಪ್ರದಾನಿಯಾಗಿದ್ದಾಗ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 110 ಡಾಲರ್ ಇದ್ದರೂ ಅವರು ಇಲ್ಲಿ ಬೆಲೆ ಏರಿಸಿರಲಿಲ್ಲ. ಈಗ ಬೆಲೆ 40 ಡಾಲರ್ ಆಗಿದ್ದರೂ ಬಿಜೆಪಿ ಸರ್ಕಾರ ಬೆಲೆ ಇಳಿಕೆ ಮಾಡದೇ ಏರಿಕೆ ಮಾಡುತ್ತಿದೆ ಎಂದು ಹರಿಹಾಯ್ದರು.

ಬೇರೆ ದೇಶಗಳಲ್ಲಿ ಇಂಧನ ಬೆಲೆ ನಮ್ಮ ದೇಶಕ್ಕಿಂತ ಕಡಿಮೆ ಇದೆ. ನಮ್ಮ ದೇಶದಲ್ಲಿ ಇಂಧನದ ಮೇಲೆ ಅಧಿಕ ತೆರಿಗೆ ಇದೆ. ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಗಳನ್ನು ತೆಗೆದು ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಸರ್ಕಾರ ಅಧಿಕ ಹೊರೆ ಹೊರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಲಯದಿಂದ ತಡೆಯಾಜ್ಞೆ ತಂದವರಿಗೆ ಷೋಕಾಸ್ ನೋಟಿಸ್
ಪಾಲಿಕೆಯ ಮೇಯರ್ ಚುನಾವಣೆ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಪಕ್ಷದ ಪಾಲಿಕೆ ಸದಸ್ಯರಿಗೆ ಷೋಕಾಸ ನೋಟಿಸ್ ನೀಡಲಾಗುವುದು. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವರು ಪಕ್ಷದ ಅನುಮತಿ ಪಡೆದುಕೊಂಡಿರಲಿಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು