ಬುಧವಾರ, ಏಪ್ರಿಲ್ 8, 2020
19 °C
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000ದ ತಿದ್ದುಪಡಿಗೆ ವಿರೋಧ

‘ಕುಲಪತಿ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಗೆ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿಯ ಅಧಿಕಾರ ಕೊಡಲು ರಾಜ್ಯದಲ್ಲಿನ ಬಿಜೆಪಿ ಸರ್ಕಾರ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000ರ ತಿದ್ದುಪಡಿಗೆ ಮುಂದಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ವಿ.ವೆಂಕಟೇಶ್‌ ಆಕ್ರೋಶ ವ್ಯಕ್ತಪಡಿಸಿದರು.

‘ಈಗಿನ ಕಾಯ್ದೆ ತಿದ್ದುಪಡಿಗೊಂಡರೆ, ಕುಲಪತಿ ನೇಮಕದಲ್ಲೂ ರಾಜಕೀಯ ಹಸ್ತಕ್ಷೇಪ ಹೆಚ್ಚಲಿದೆ. ನಿಗಮ–ಮಂಡಳಿಗಳಿಗೆ ನೇಮಕಾತಿ ನಡೆದಂತೆ ವಿಶ್ವವಿದ್ಯಾಲಯಗಳಿಗೂ ಕುಲಪತಿಗಳ ನೇಮಕ ನಡೆಯಲಿದೆ. ಆಯಾ ಪಕ್ಷದ ಬೆಂಬಲಿಗರು ಕುಲಪತಿಗಳಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಗೆಡವಲಿದ್ದಾರೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಉದ್ದೇಶಿತ ತಿದ್ದುಪಡಿಯ ಸ್ವರೂಪದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು. ಶಿಕ್ಷಣ ತಜ್ಞರು, ವಿದ್ಯಾರ್ಥಿ ಮುಖಂಡರು, ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರೊಟ್ಟಿಗೆ ಸಾಧಕ–ಬಾಧಕ ಚರ್ಚಿಸಿ ಅನುಷ್ಠಾನಕ್ಕೆ ಮುಂದಾಗಬೇಕು. ಜನರನ್ನು ಕತ್ತಲಲ್ಲಿಟ್ಟು ಕಾಯ್ದೆ ಜಾರಿಗೆ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂಬ ಎಚ್ಚರಿಕೆ ನೀಡಿದರು.

‘ಕುಲಪತಿ ನೇಮಕದಲ್ಲಿ ರಾಜಕೀಯ ನುಸುಳಬಾರದು. ಇದು ರಾಜಕೀಯ ನೇಮಕವಾಗಬಾರದು. ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಎಂಬುದೇ ಅವೈಜ್ಞಾನಿಕ. ಉದ್ದೇಶಿತ ಮಸೂದೆ ತಿದ್ದುಪಡಿಗೊಂಡು ಕಾಯ್ದೆಯಾಗಿ ಜಾರಿಗೊಂಡರೆ, ಯುವ ಸಮೂಹಕ್ಕೆ ಮಾರಕವಾಗಿ ಕಾಡಲಿದೆ’ ಎಂಬ ಆತಂಕವನ್ನು ವೆಂಕಟೇಶ್‌ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾನದಂಡಗಳನ್ನು ಮಾರ್ಪಡಿಸುವ ಹಿನ್ನೆಲೆಯಲ್ಲೇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ತಿದ್ದುಪಡಿ ಮೂಲಕ ಸ್ವಾಯತ್ತವಾಗಿರುವ ವಿಶ್ವವಿದ್ಯಾಲಯವನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಜತೆಯಲ್ಲೇ ತಾವೇ ಕುಲಪತಿ ನೇಮಕ ಮಾಡಲು ಬಿಜೆಪಿ ಸರ್ಕಾರ ಮುಂದಾಗಿರುವುದು ಅವೈಜ್ಞಾನಿಕ’ ಎಂದು ಅವರು ದೂರಿದರು.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಹುನ್ನಾರ ಅಡಗಿದೆ. ಕಾಯ್ದೆ ತಿದ್ದುಪಡಿ ಹಿಂದೆ ಒಳಸಂಚು ಅಡಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು