ಶುಕ್ರವಾರ, ಏಪ್ರಿಲ್ 16, 2021
25 °C
ಸಹಿ ಸಂಗ್ರಹದ ಬೆದರಿಕೆಗೆ ಬಗ್ಗುವವನಲ್ಲ

ನಾನು ರೆಬೆಲ್‌ ಅಲ್ಲ, ಪಕ್ಷಕ್ಕೆ ನಿಷ್ಠನಾಗಿದ್ದೇನೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಯಾರೇ ಆಗಲಿ ನಿಯಮ ಉಲ್ಲಂಘಿಸಬಾರದು. ಇದು ನನ್ನ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರ ಅಲ್ಲ. ನಿಯಮ ಉಲ್ಲಂಘನೆ ಆಗಬಾರದು ಎಂಬುದೇ ನನ್ನ ಉದ್ದೇಶ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಜಾಯಮಾನದಲ್ಲಿ ರೆಬೆಲ್‌ ಆಗುವುದು ನನಗೆ ಗೊತ್ತಿಲ್ಲ. ಆದರೆ ನ್ಯಾಯವನ್ನು ನಾನು ಎಂದೂ ಬಿಡಲ್ಲ. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುವವ’ ಎಂದು ಹೇಳಿದರು.

‘ನಾನು ಯಡಿಯೂರಪ್ಪ ವಿರುದ್ಧ ದೂರು ನೀಡಲು ರಾಜ್ಯಪಾಲರ ಬಳಿ ಹೋಗಿಲ್ಲ. ಹಲವು ವರ್ಷ ಗುಜರಾತ್‌ನ ಹಣಕಾಸು ಸಚಿವರಾಗಿದ್ದ ಅವರ ಬಳಿ ಸಲಹೆ ಕೇಳಲು ಹೋಗಿದ್ದೆ. ಅವರ ಬಳಿ ಹೋಗಿದ್ದು ತಪ್ಪು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿರಬಹುದು. ಅದು ಅವರ ಅಭಿಪ್ರಾಯ ಅಷ್ಟೇ. ಆದರೆ, ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ’ ಎಂದರು.

ಪೋಸ್ಟ್‌ಮ್ಯಾನ್‌ ಅಲ್ಲ: ‘ನಾನು ಪೋಸ್ಟ್ ಮ್ಯಾನ್ ಅಲ್ಲ. ಯಾವುದೇ ಇಲಾಖೆಯ ಸಚಿವರು ಕೂಡಾ ಪೋಸ್ಟ್ ಮ್ಯಾನ್ ಅಲ್ಲ. ಇಲಾಖೆಗೆ ಬಂದ ಹಣವನ್ನು ಆ ಇಲಾಖೆಯ ಮಂತ್ರಿಯೇ ಬಿಡುಗಡೆ ಮಾಡಬೇಕು. ಅದನ್ನು ಹೇಳಿದ್ದೇನೆ ಅಷ್ಟೆ’ ಎಂದು ತಿಳಿಸಿದರು.

ಯಾರಿಗೂ ಬಗ್ಗುವವನಲ್ಲ: ‘ಇಲಾಖೆಯ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ನಾನು ರಾಜ್ಯಪಾಲರಿಗೆ ಪತ್ರ ಬರೆದಿರುವುದಕ್ಕೆ ಕೆಲವು ಸಚಿವರು, ಶಾಸಕರು ಪತ್ರಿಕಾಗೋಷ್ಠಿ ಮಾಡಿ ಟೀಕಿಸಿದ್ದಾರೆ. ನನ್ನ ವಿರುದ್ಧ ಸಹಿ ಸಂಗ್ರಹ ಮಾಡುವುದಾಗಿ ಹೇಳಿದ್ದಾರೆ. ಇಂತಹ ಬೆದರಿಕೆಗೆ ನಾನು ಬಗ್ಗುವವನಲ್ಲ’ ಎಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿ ಮಾಡಿ ನನ್ನನ್ನು ಟೀಕಿಸಿದ್ದ ಕೆಲವರು ಆ ಬಳಿಕ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ‘ಬೇರೆ ಬೇರೆ ಕಾರಣಗಳಿಂದ ಪತ್ರಿಕಾಗೋಷ್ಠಿ ಮಾಡಿದ್ದೇವೆ. ನೀವು ಮಾಡಿದ್ದು ಸರಿಯಾಗಿಯೇ ಇದೆ. ನಾವು ನಿಮ್ಮ ಜತೆ ಇರ್ತೇವೆ’ ಎಂದಿದ್ದಾರೆ. ಅನೇಕ ಸಚಿವರು, ಶಾಸಕರು, ಸಂಸದರು, ಬಿಜೆಪಿ ಪ್ರಮುಖರು ಮತ್ತು ಪದಾಧಿಕಾರಿಗಳು ಕೂಡಾ ನನಗೆ ಕರೆ ಮಾಡಿದ್ದಾರೆ. ’ನೀವು ಗಟ್ಟಿ ನಿಲುವು ತೆಗೆದುಕೊಂಡಿದ್ದೀರಿ. ನಿಮ್ಮ ಜತೆ ಇದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ’ ಎಂದರು.

ರಾಜೀನಾಮೆಯ ಕನಸು ಬೇಡ: ‘ನಾನು ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ, ನಮ್ಮಿಬ್ಬರ ರಾಜೀನಾಮೆಯನ್ನು ಕನಸಿನಲ್ಲೂ ಯೋಚನೆ ಮಾಡಬೇಡಿ’ ಎಂದು ಕಿಡಿಕಾರಿದರು.

ವೈಯಕ್ತಿಕ ವಿಚಾರ ಅಲ್ಲ: ‘ನನ್ನ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ವಿಚಾರ ಇದು ಅಲ್ಲ. ಅನುದಾನ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆ ಆಗಿರುವುದಕ್ಕೆ ನಾನು ಆಕ್ಷೇವ ವ್ಯಕ್ತಪಡಿಸಿದ್ದೇನೆ’ ಎಂದು ಹೇಳಿದರು.

‘ನಮ್ಮ ಇಲಾಖೆಗೆ ಬೇಕಾದ ಹಣವನ್ನು ಹಣಕಾಸು ಇಲಾಖೆ ಮಂಜೂರು ಮಾಡುತ್ತದೆ. ಆ ಹಣ ಬಳಸುವುದು ನಮ್ಮ ಇಲಾಖೆಗೆ ಬಿಟ್ಟ ವಿಚಾರ. ಆದರೆ ‌ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾದ ಹಣದ ಪಟ್ಟಿ ಇಲಾಖೆಯ ಮಂತ್ರಿಯ ಗಮನಕ್ಕೆ ಬರದೆ ನೇರವಾಗಿ ಶಾಸಕರಿಗೆ ಕೊಟ್ಟಿರುವುದು ತಪ್ಪು’ ಎಂದರು.

‘ನನ್ನ ಇಲಾಖೆಗೆ ಮಂಜೂರಾಗಿರುವ ₹ 1,299 ಕೋಟಿ ಹಣವನ್ನು ನೇರವಾಗಿ ಶಾಸಕರಿಗೆ ಕೊಟ್ಟಿರುವುದು ಕಾನೂನಿನ ಉಲ್ಲಂಘನೆ. ಈ ವಿಚಾರದ ಬಗ್ಗೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಲ್ಲೂ ಮಾತನಾಡಿದೆ. ‘ನಮ್ಮಿಂದ ತಪ್ಪಾಗಿದೆ. ಆದರೆ ಮುಖ್ಯಮಂತ್ರಿಯ ಸೂಚನೆ ಇರುವುದರಿಂದ ಹಾಗೆ ಮಾಡಿದ್ದೇವೆ’ ಎಂದು ಒಪ್ಪಿಕೊಂಡಿದ್ದಾರೆ’ ಎಂದರು.

‘ನಿಯಮ ಉಲ್ಲಂಘನೆ ಅಗಿರುವುದರ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಸಿ.ಟಿ.ರವಿ ಅವರ ಗಮನಕ್ಕೂ ತಂದಿದ್ದೇನೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿ ಅನುದಾನ ಹಂಚಿಕೆ ಮಾಡಿರುವುದು ಸರಿಯಲ್ಲ,  ಇದನ್ನು ತಕ್ಷಣವೇ ತಡೆ ಹಿಡಿಯುವಂತೆ ಈ ಮೂವರೂ ಎಂದು ನನಗೆ ಸೂಚಿಸಿದ್ದರು. ಅವರ ಮಾತಿನಂತೆ ನಾನು ತಡೆಹಿಡಿದಿದ್ದೇನೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು