ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಟಿಲ ಪ್ರಶ್ನೆಗಳಿಗೂ ಫಟಾಫಟ್‌ ಉತ್ತರ

ಪ್ರಜಾವಾಣಿ ಕ್ವಿಜ್‌: ಮೈಸೂರು ವಲಯಮಟ್ಟದಲ್ಲಿ ರಾಮಕೃಷ್ಣ ವಿದ್ಯಾಶಾಲೆ ಚಾಂಪಿಯನ್‌
Last Updated 13 ಜನವರಿ 2020, 14:20 IST
ಅಕ್ಷರ ಗಾತ್ರ

ಮೈಸೂರು: ವಿದ್ಯಾರ್ಥಿಗಳಲ್ಲಿ ಕಾತರ, ಕುತೂಹಲ. ತಟ್ಟನೆ ಉತ್ತರ ಹೇಳುವ ತವಕ. ಉತ್ತರ ಎಲ್ಲಿ ತಪ್ಪಾಗುವುದೋ ಎಂಬ ಆತಂಕ. ಸಭಾಂಗಣದಲ್ಲಿ ಕುಳಿತಿದ್ದ ಪೋಷಕರು ಮತ್ತು ಶಿಕ್ಷಕರಲ್ಲೂ ಒಂದು ರೀತಿಯ ತಳಮಳ. ಎದೆಯಲ್ಲಿ ಕಚಗುಳಿಯಿಟ್ಟ ಅನುಭವ...

ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ, ‘ದೀಕ್ಷಾ’ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ‘ಪ್ರಜಾವಾಣಿ ಕ್ವಿಜ್‌’ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯವಿದು.

ಕಠಿಣ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿದ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ಗೌರವ್‌ ಚಂದನ್‌ ಮತ್ತು ಗಗನ್‌ ಚಂದನ್‌ ಅಗ್ರಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ಮೊದಲ ಮೂರು ಸ್ಥಾನಗಳನ್ನೂ ರಾಮಕೃಷ್ಣ ವಿದ್ಯಾಶಾಲೆ ಪಡೆದದ್ದು ವಿಶೇಷ.

ಮೈಸೂರು ವಲಯ ಮಟ್ಟದ ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ 180 ಶಾಲೆಗಳ ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು. ಆರಂಭದಲ್ಲಿ ಎಲ್ಲ ತಂಡಗಳಿಗೆ ಪ್ರಾಥಮಿಕ ಸುತ್ತಿನ ಲಿಖಿತ ಪರೀಕ್ಷೆ ನಡೆಸಲಾಯಿತು. 20 ಪ್ರಶ್ನೆಗಳನ್ನು ಕೇಳಲಾಯಿತು. ಹೆಚ್ಚು ಅಂಕ ಪಡೆದ ಆರು ತಂಡಗಳ 12 ವಿದ್ಯಾರ್ಥಿಗಳನ್ನು ಪ್ರಧಾನ ಹಂತಕ್ಕೆ ಆಯ್ಕೆ ಮಾಡಲಾಯಿತು.

ಮೈಸೂರು ನಗರದ ಕೌಟಿಲ್ಯ ವಿದ್ಯಾಲಯದ ಒಂದು ತಂಡ, ಸದ್ವಿದ್ಯಾ ಪ್ರೌಢಶಾಲೆಯ ಎರಡು ತಂಡಗಳು ಮತ್ತು ರಾಮಕೃಷ್ಣ ವಿದ್ಯಾಶಾಲೆಯ ಮೂರು ತಂಡಗಳು ಪ್ರಧಾನ ಹಂತದಲ್ಲಿ ಪೈಪೋಟಿ ನಡೆಸಿದವು.

ಪ್ರಧಾನ ಹಂತದಲ್ಲಿ ಐದು ಸುತ್ತುಗಳ ಪ್ರಶ್ನೆಗಳನ್ನು ಕೇಳಲಾಯಿತು. ರಾಮಕೃಷ್ಣ ವಿದ್ಯಾಶಾಲೆಯ ಎರಡು ತಂಡಗಳು ತಲಾ 55 ಅಂಕಗಳನ್ನು ಪಡೆದು ಸಮಬಲ ಸಾಧಿಸಿದವು. ಇದರಿಂದ ವಿಜೇತರನ್ನು ನಿರ್ಣಯಿಸಲು 10 ಅಂಕಗಳ ಮತ್ತೊಂದು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಮೊದಲು ಉತ್ತರಿಸಿದ ಅವಳಿಗಳಾದ ಗೌರವ್‌ ಮತ್ತು ಗಗನ್‌ ಚಾಂಪಿಯನ್‌ ಆಗಿ ಜ.30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆದುಕೊಂಡರು.

ಇದೇ ಶಾಲೆಯ ಸಂಕಲ್ಪ್‌ ಮತ್ತು ವಿಹಾನ್‌ ‘ರನ್ನರ್‌ ಅಪ್‌’ ಆದರು. ಶ್ರೀಮನ್ ರೆಡ್ಡಿ ಹಾಗೂ ಸಿದ್ದಾರ್ಥ್‌ ಮೂರನೇ ಸ್ಥಾನ ಗಳಿಸಿದರು. ಸದ್ವಿದ್ಯಾ ಪ್ರೌಢಶಾಲೆಯ ಚಿರಾಗ್‌–ದೀಪಕ್ 4ನೇ ಸ್ಥಾನ , ಧ್ಯಾನ್‌–ಸುಹಾಸ್‌ 5ನೇ ಸ್ಥಾನ ಹಾಗೂ ಕೌಟಿಲ್ಯ ವಿದ್ಯಾಲಯದ ಪರೀಕ್ಷಿತ್‌–ಪ್ರಣವ್‌ 6ನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಡಿಪಿಐ ಪಾಂಡುರಂಗ, ನವೋದಯ ಫೌಂಡೇಷನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಎಸ್‌.ಆರ್‌.ರವಿ, ಜೀನಿಯಸ್‌ ಕಾಲೇಜಿನ ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಗಳಾದ ಸುರೇಖಾ ಪ್ರಭು, ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್‌) ಮಾರುಕಟ್ಟೆ ವ್ಯವಸ್ಥಾಪಕ ರಾಜ್‌ಕುಮಾರ್‌ ಪಾಲ್ಗೊಂಡರು.

ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗಣಪತಿ ಸಚ್ಚಿದಾನಂದ ಆಶ್ರಮ ವತಿಯಿಂದ ಮಕ್ಕಳಿಗೆ ಮಧ್ಯಾಹ್ನದ ಊಟ, ಮೈಮುಲ್‌ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಉತ್ಸಾಹದಿಂದ ಭಾಗಿ: ವಿವಿಧ ಶಾಲೆಗಳ ಮಕ್ಕಳು ಕ್ವಿಜ್‌ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಬೆಳಿಗ್ಗೆ 8.30ರಿಂದಲೇ ನೋಂದಣಿ ಆರಂಭವಾಯಿತು. ಮೈಸೂರು ನಗರದ ಶಾಲೆಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳ ಶಾಲೆಗಳು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಶಾಲೆಗಳೂ ಭಾಗವಹಿಸಿದವು. ಒಂದು ಶಾಲೆಯಿಂದ ತಲಾ ಇಬ್ಬರಂತೆ ಮೂರು ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಲೇ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಶ್ನೆಗಳು ಕಠಿಣ ಎನಿಸಿದಾಗ ಕೆಲವು ಸುಳಿವುಗಳನ್ನು ನೀಡಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದರು. ಸಭಿಕರಿಗೂ ಪ್ರಶ್ನೆ ಕೇಳಿದರು. ಸರಿಯುತ್ತರ ಕೊಟ್ಟವರಿಗೆ ಬಹುಮಾನ ನೀಡಲಾಯಿತು. ಸ್ಪರ್ಧಿಗಳಿಗೆ ಉತ್ತರಿಸಲಾಗದ ಕೆಲವು ಪ್ರಶ್ನೆಗಳಿಗೆ ಸರಿಯುತ್ತರ ನೀಡಿದ ಮಕ್ಕಳು ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಸಲ ಮೊದಲ ಸುತ್ತಿನಲ್ಲೇ ಹೊರಬಿದ್ದ ಮಕ್ಕಳು, ಪ್ರಧಾನ ಹಂತ ಪ್ರವೇಶಿಸಿದರೂ ಫೈನಲ್‌ಗೆ ಅರ್ಹತೆ ಪಡೆಯದವರು ಮುಂದಿನ ಬಾರಿ ‘ಗೆಲ್ಲಲೇಬೇಕು’ ಎಂಬ ದೃಢ ನಿಶ್ಚಯ ಮಾಡಿಕೊಂಡು ಸೆನೆಟ್‌ ಸಭಾಂಗಣದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT